ಚೆನ್ನೈ : ಡಿಎಂಕೆ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಿದ್ದು, 1965-67ರಲ್ಲಿ ಪಕ್ಷ ರಚನೆಯಾಗಿದ್ದೇ ಹಾಗೆ. ಅವರಿಗೆ ಸೇನೆಯ ಮೇಲೆ ಎಂದಿಗೂ ಗೌರವ ಇಲ್ಲ ಎಂದು ಕೃಷ್ಣಗಿರಿಯಲ್ಲಿ ಸೇನಾ ಸಿಬಂದಿಯ ಹತ್ಯೆಯ ಕುರಿತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಆಕ್ರೋಶ ಹೊರ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮವಸ್ತ್ರವನ್ನು ಧರಿಸಿದ ಯಾವುದೇ ವ್ಯಕ್ತಿಗೆ ಗೌರವ ಸಿಗುವುದಿಲ್ಲ ಎಂಬುದು ಅವರ ಸಿದ್ದಾಂತ ಮತ್ತು ಸಂಸ್ಕೃತಿಯಲ್ಲಿದೆ. ಡಿಎಂಕೆ ಲಜ್ಜೆಗೆಟ್ಟ, ದುಷ್ಟ ಪಕ್ಷ ಎಂದು ಕಿಡಿ ಕಾರಿದರು.
ಒಬ್ಬ ಸೇನಾ ಸಿಬಂದಿಯ ಮೇಲೆ ಕೌನ್ಸಿಲರ್‌ನಿಂದ ಹಲ್ಲೆ ನಡೆಸಲಾಯಿತು ಮತ್ತು ಪೊಲೀಸರು ಅದನ್ನು ಮುಚ್ಚಿಹಾಕಲು 6-7 ದಿನಗಳನ್ನು ತೆಗೆದುಕೊಂಡರು ಮತ್ತು ಮಾಧ್ಯಮಗಳ ಆಕ್ರೋಶದ ನಂತರ ಹೋಗಿ ಅವರನ್ನು ಬಂಧಿಸಲಾಯಿತು. ಇದು ರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸಿದೆ. ಕೃತ್ಯಕ್ಕೆ ಡಿಎಂಕೆ ಬೆನ್ನೆಲುಬಾಗಿ ನಿಂತಿದೆ, ಎಲ್ಲಾ ಅಸಂಬದ್ಧ ವಿಷಯಗಳನ್ನು ಹೇಳಲು ಪ್ರಯತ್ನಿಸುತ್ತಿದೆ ಎಂದರು.
ತಪ್ಪಿತಸ್ಥರನ್ನು ಬಂಧಿಸುವುದು ಮಾತ್ರವಲ್ಲ, ಅವರಿಗೆ ಆದರ್ಶಪ್ರಾಯ ಎನಿಸುವಂತಹ ಶಿಕ್ಷೆಯನ್ನು ನೀಡಬೇಕು. ಬಿಜೆಪಿಯ ಮಾಜಿ ಸೈನಿಕರ ಘಟಕದ ಸದಸ್ಯರು ತಮಿಳುನಾಡಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚೆನ್ನೈನ ಯುದ್ಧ ಸ್ಮಾರಕದಲ್ಲಿ ಮಾಜಿ ಸೈನಿಕರೊಂದಿಗೆ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಹೇಳಿದ್ದಾರೆ. ಹತ್ಯೆಯನ್ನು ಖಂಡಿಸಿ ಕೃಷ್ಣಗಿರಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಡಿಎಂಕೆ ಕೌನ್ಸಿಲರ್ ಸೇನಾ ಸಿಬಂದಿಯನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೊಲೆ ನಡೆದಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದು ಸ್ಥಳೀಯ ವಿಚಾರವಾಗಿದ್ದು, ಸಣ್ಣ ಜಗಳ ವಿಕೋಪಕ್ಕೆ ಹೋಗಿ ಕೊಲೆಗೆ ಕಾರಣವಾಗಿದೆ. ಎಲ್ಲರನ್ನು ಬಂಧಿಸಲಾಗಿದೆ ಎಂದು ಕೃಷ್ಣಗಿರಿಯಲ್ಲಿ ಡಿಎಂಕೆ ವಕ್ತಾರ ಟಿಕೆಎಸ್ ಇಳಂಗೋವನ್ ಅವರು ಹೇಳಿಕೆ ನೀಡಿದ್ದಾರೆ.