ಬೆಂಗಳೂರು / ಹೊಸಪೇಟೆ : ಆಪರೇಷನ್ ಕಮಲ ನಡೆಸಲು ಯತ್ನಿಸಲಾಗುತ್ತಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಸವಾಲು ಪ್ರತಿಸವಾಲುಗಳು ಜೋರಾಗತೊಡಗಿವೆ. ಸಚಿವ ಡಿ.ಕೆ.ಶಿವಕುಮಾರ್ ಅವರು ಏನೇನು ನಡೆಯುತ್ತಿದೆ ಎನ್ನುವುದು ನಮಗೆ ಗೊತ್ತಿದೆ ಎಂದಿದ್ದು, ಪ್ರತಿ ಸವಾಲಾಗಿ ಮುಖ್ಯಮಂತ್ರಿ,ಸಿದ್ದರಾಮಯ್ಯ ಅವರಿಗೆ ಹೇಳಿಯೇ ಆಪರೇಷನ್ ಕಮಲ ನಡೆಸುತ್ತೇವೆ ಎಂದಿದ್ದಾರೆ.
3 ದಿನಗಳಿಂದ ಏನೇನು ನಡೆಯುತ್ತಿದೆ ಗೊತ್ತಿದೆ : ಸಚಿವ ಡಿ.ಕೆ.ಶಿವಕುಮಾರ್
ಆಪರೇಷನ್ ಕಮಲದ ಕುರಿತು ಆಡಿಯೋ ಕುರಿತಾಗಿ ಭಾನುವಾರ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ನಾವು ಕಣ್ಣು ಮುಚ್ಚಿಕೊಂಡು ಹಾಲು ಕುಡಿತಾ ಇಲ್ಲ , ನಾವು ಸರ್ಕಾರ ನಡೆಸುತ್ತಿದ್ದೇವೆ.ನಮ್ಮದು ರಾಷ್ಟ್ರೀಯ ಪಕ್ಷ , ಕಳೆದ ಮೂರು ದಿನಗಳಿಂದ ಏನೇನು ನಡೆಯುತ್ತಿದೆ ಎನ್ನುವುದು ನಮಗೂ ಗೊತ್ತಾಗಿದೆ ಎಂದರು.
ಅಶ್ವತ್ಥ ನಾರಾಯಣ ಯಾರ ಬಳಿ ಮಾತನಾಡಿದ್ದಾರೆ,ಜನಾರ್ದನ ರೆಡ್ಡಿ ಜಿಂದಾಲ್ ಆಯುರ್ವೇದಿಕ್‌ಗೆ ತೆರಳಿ ಯಾರನ್ನು ಭೇಟಿ ಮಾಡಿದ್ದಾರೆ ಎನ್ನುವುದೂ ಗೊತ್ತಿದೆ.ಎಷ್ಟೆಷ್ಟು ಕೋಟಿ ಆಫರ್ ನೀಡಿದ್ದಾರೆ ಎನ್ನುವುದು ಗೊತ್ತಿದೆ ಎಂದರು.
ಶ್ರೀರಾಮುಲು ಪಿಎ ಅಲ್ಲಾ ಅನ್ನುತ್ತಾರೆ ಆದರೆ ಬೆಳಗ್ಗೆ ಯಿಂದ ಸಂಜೆ ಆ ವ್ಯಕ್ತಿಯ ಜೊತೆ ಇರುತ್ತಾರೆ ಎಂದರು. ಸಿ.ಟಿ.ರವಿ,ಜಗದೀಶ್ ಶೆಟ್ಟರ್‌ಅವರ ಹೇಳಿಕೆಯನ್ನೂ ನಾನು ಗಮನಿಸಿದ್ದೇನೆ ಎಂದರು.
ಸಿದ್ದರಾಮಯ್ಯ ಅವರಿಗೆ ಹೇಳಿಯೇ ಆಪರೇಷನ್ ಮಾಡುತ್ತೇವೆ!
ಹೊಸಪೇಟೆಯಲ್ಲಿ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು ನಾವು ಆಪರೇಷನ್ ಕಮಲಕ್ಕೆ ಯತ್ನ ಮಾಡಿಲ್ಲ. ಬೆಂಗಳೂರಲ್ಲಿ ಕುಳಿತು ಕಾಂಗ್ರೆಸ್‌ನ ಅತೃಪ್ತರೆ ಈ ವದಂತಿಗಳನ್ನು ಹುಟ್ಟು ಹಾಕುತ್ತಿದ್ದಾರೆ. ಅವರದ್ದೇ ಸರ್ಕಾರವಿದೆ ಅಲ್ಲ ಯಾವುದೇ ತನಿಖೆ ಮಾಡಲಿ ಎಂದು ಸವಾಲು ಹಾಕಿದರು.
ಇದೇ ವೇಳೆ ಆಪರೇಷನ್ ಮಾಡುವುದಾದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರಿಗೆ ಹೇಳಿಯೇ ಮಾಡುತ್ತೇವೆ ಎಂದು ವ್ಯಂಗ್ಯವಾಡಿದರು.
ಶಾಸಕ ಶ್ರೀರಾಮುಲು ಆಪ್ತ ಸಹಾಯಕ ದುಬೈ ಮೂಲದ ಉದ್ಯಮಿ ಜತೆ ನ.27 ರಂದು ಮೊಬೈಲ್ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಸಹ ಬಹಿರಂಗಗೊಂಡಿದ್ದು, 10 ರಿಂದ 12 ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ತಲಾ 20 ರಿಂದ 25 ಕೋಟಿ ರೂ. ಹಣ ಹಾಗೂ ಸಚಿವ ಸ್ಥಾನದ ಭರವಸೆ ನೀಡಲಾಗಿದೆ ಎಂದು ಆಡಿಯೋದಲ್ಲಿದ್ದು ಆ ಸಂಭಾಷಣೆ ಶ್ರೀರಾಮುಲು ಆಪ್ತ ಹಾಗೂ ದುಬೈ ಮೂಲದ ಉದ್ಯಮಿ ಜತೆ ನಡೆದಿದ್ದು ಎಂದು ಹೇಳಲಾಗಿದ್ದು, ಕಾಂಗ್ರೆಸ್ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದೆ.