ಕಲಬುರಗಿ/ಯಾದಗಿರಿ: ಜಿಲ್ಲೆಯ ಗೋನಾಲ ಗಡೇ ದುರ್ಗಾದೇವಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರು ಬುಧವಾರ ದೇವ ಸ್ಥಾನಕ್ಕೆ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ನೆರವೇರಿಸಿದರು.
ಬಳಿಕ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ ಬಾರಿ ಜಾತ್ರೆಯಲ್ಲಿ ಭಾಗವಹಿಸಬೇಕು ಎಂದು ಜನರ ನಿರೀಕ್ಷೆ ಇತ್ತು. ರಾಜಕೀಯ ಒತ್ತಡಗಳಿಂದ ಭಾಗವಹಿಸಲು ಆಗಿರಲಿಲ್ಲ. 6 ತಿಂಗಳ ಹಿಂದೆಯೇ ಜಾತ್ರೆಯಲ್ಲಿ ಭಾಗ ವಹಿಸುವ ಸಂಕಲ್ಪ ಮಾಡಿದ್ದೆ. ಆ ಸಂಕಲ್ಪ ಈಗ ಈಡೇರಿತು ಎಂದರು.
ಈ ವೇಳೆ, ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸೇರಿದಂತೆ ಕಾಂಗ್ರೆಸ್ ಮುಖಂಡರು, ಪ್ರಮುಖ ಕಾರ್ಯಕರ್ತರು ಇದ್ದರು. ಡಿ.ಕೆ.ಶಿವಕುಮಾರ ಅವರನ್ನು ಹತ್ತಿರದಿಂದ ಕಂಡ ಅಭಿಮಾನಿಗಳು “ಮುಂದಿನ ಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಜಯವಾಗಲಿ’ ಎಂಬ ಘೋಷಣೆ ಮೊಳಗಿಸಿದರು.
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಅರ್ಜಿ ಹಾಕಿಲ್ಲ: ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಕೆಪಿಸಿಸಿ ಹುದ್ದೆಗೆ ಅರ್ಜಿನೂ ಹಾಕಿಲ್ಲ, ಆಕಾಂಕ್ಷಿಯೂ ಅಲ್ಲ, ಅಧ್ಯಕ್ಷ ಸ್ಥಾನವನ್ನೇ ಕೇಳಿಲ್ಲ’ ಎಂದರು. ದುಗುಡದಿಂದ ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ರಾಜೀನಾಮೆ ನೀಡಿದ್ದಾರೆ. ಅವರ ರಾಜೀ ನಾಮೆಯನ್ನು ಪಕ್ಷ ಅಂಗೀಕರಿಸಿಲ್ಲ. ಈಗಲೂ ದಿನೇಶ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ.
ಹೀಗಾಗಿ, ಅಧ್ಯಕ್ಷ ಸ್ಥಾನವನ್ನು ನಾನು ಕೇಳಿದರೆ ತಾನೇ ಯಾರಾದರೂ ಅಡ್ಡಗಾಲು ಹಾಕುವುದು ಎಂದರು. ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಒಂದೇ ಪಕ್ಷದವರು. ಬೇರೆ- ಬೇರೆ ಪಕ್ಷದವರು ಭೇಟಿಯಾದರೂ ಕೇಳಲಿಲ್ಲ. ಆದರೆ, ನಮ್ಮ ಪಕ್ಷದವರು ಒಟ್ಟಿಗೆ ಕುಳಿತು ಚಹ ಕುಡಿಯುವುದು, ಊಟ, ತಿಂಡಿ ತಿನ್ನುವುದೇ ತಪ್ಪೇ? ದಿನೇಶ ಗುಂಡೂರಾವ್, ಸಿದ್ದರಾಮಯ್ಯ ಅವರನ್ನು ನಮ್ಮ ವರಿಷ್ಠರು ನೇಮಿಸಿದ್ದಾರೆ.
ವರೇ ನಮ್ಮ ನಾಯಕರು, ಅವರ ಕೈ ಕೆಳಗೆ ನಾವು ಕೆಲಸ ಮಾಡುತ್ತೇವೆ ಎಂದರು. ಮಿಣಿ, ಮಿಣಿ ಪೌಡರ್ ಕುರಿತಾದ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯವರು “ಮಿಣಿ ಮಿಣಿ ಪೌಡರ್’ ಅಂದರೆ ತಪ್ಪಾಗಿ ಬಿಡುತ್ತಾ? ನನ್ನ ಮುಖನೂ ಮಿಣಿ ಮಿಣಿ ಅಂತಿದೆ. ನಿಮ್ಮ ಮುಖನೂ ಮಿಣಿ ಮಿಣಿ ಅಂತಿದೆ ಎಂದರು.
ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಮಾಡುವುದು, ಬಿಡುವುದು ಅವರಿಗೆ ಬಿಟ್ಟಿದ್ದು. ಅವರ ಪಕ್ಷದ ವಿಚಾರ ನಮಗ್ಯಾಕೆ ಬೇಕು? ನಮಗೂ, ಅದಕ್ಕೂ ಸಂಬಂಧವಿಲ್ಲ. ಅವರು ಬೇಕಾದರೆ ಎಲ್ಲರನ್ನೂ ಡಿಸಿಎಂ ಮಾಡಲಿ, ಬೇಕಾದರೆ ಸಿಎಂ ಮಾಡಲಿ. ಅದಕ್ಕೆ ನಮ್ಮ ತಕರಾರಿಲ್ಲ.
-ಡಿ.ಕೆ.ಶಿವಕುಮಾರ್, ಮಾಜಿ ಸಚಿವ