Advertisement
ಕಾಂಗ್ರೆಸ್‌ನಲ್ಲಿ ನಿರಂತರ ವಿವಾದಗಳ ಮೂಲಕವೇ ರಾಜಕಾರಣದಲ್ಲಿ ನೆಲೆ ನಿಂತಿರುವ ಡಿ.ಕೆ.ಶಿವಕುಮಾರ್, ವರ್ಣರಂಜಿತ ರಾಜಕಾರಣಿಯಾಗಿ, ಏನೇ ಕಷ್ಟ ಬಂದರೂ ಎದೆಗುಂದದೆ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ರಾಜಕಾರಣದಲ್ಲಿ ಹೊರಗಿನ ಶತ್ರುಗಳನ್ನು ಎದುರಿಸುವುದಕ್ಕಿಂತ ಒಳಗಿನ ಶತ್ರುಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸ. ಈಗ ಡಿಕೆಶಿಗೆ ಆಂತರಿಕ ವಿರೋಧಿಗಳನ್ನು ನಿಯಂತ್ರಿಸಿ, ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೈಕಮಾಂಡ್ ಒದಗಿಸಿ ಕೊಟ್ಟಿದೆ.
Related Articles
Advertisement
ಲಾಭದ ಲೆಕ್ಕ: ಡಿ.ಕೆ.ಶಿವಕುಮಾರ್ ಏಳು ಬಾರಿ ಶಾಸಕರಾಗಿದ್ದು, ರಾಜ್ಯಾದ್ಯಂತ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಲ್ಲದೇ ಈಗಾಗಲೇ ಪಕ್ಷದ ಕಾರ್ಯಾಧ್ಯಕ್ಷರಾಗಿ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿಯೂ ತಮ್ಮದೇ ಆದ ಕಾರ್ಯಕರ್ತರ ಪಡೆಯನ್ನು ಸೃಷ್ಟಿಸಿದ್ದಾರೆ. ಹೀಗಾಗಿ, ತಾವು ಅಧ್ಯಕ್ಷರಾಗಿರುವುದರಿಂದ ಎಲ್ಲ ಹಂತದ ಕಾರ್ಯ ಕರ್ತರನ್ನು ಮತ್ತೆ ಚುರುಕುಗೊಳಿಸಿ ತಳಮಟ್ಟದಿಂದ ಪಕ್ಷ ಕಟ್ಟಲು ಸನ್ನದ್ಧಗೊಳಿಸಲು ಅನುಕೂಲವಾಗುತ್ತದೆ. ಆ ಮೂಲಕ ಬಿಜೆಪಿ ವಿರುದ್ಧ ಪಕ್ಷವನ್ನು ಬಲಗೊಳಿಸಲು ಹೆಚ್ಚು ಶ್ರಮ ವಹಿಸುವ ಅಗತ್ಯವಿಲ್ಲ.
ಜೆಡಿಎಸ್ ಜೊತೆಗಿನ ಸಂಬಂಧ: ಡಿ.ಕೆ.ಶಿವಕುಮಾರ್ ಪ್ರಮುಖ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಪ್ರಮುಖವಾಗಿ ದಕ್ಷಿಣ ಕರ್ನಾಟಕ ಭಾಗದಲ್ಲಿ ಈ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಜೆಡಿಎಸ್ ಜೊತೆಗೆ ಗುರುತಿಸಿಕೊಂಡಿದೆ. ಈಗ ಅದೇ ಸಮುದಾಯದ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಸಾರಥ್ಯ ವಹಿಸಿರುವುದರಿಂದ ಆ ಸಮುದಾಯವನ್ನು ಯಾವ ರೀತಿ ಕಾಂಗ್ರೆಸ್ ಕಡೆಗೆ ಸೆಳೆಯುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು, ಜೆಡಿಎಸ್ ಜೊತೆಗೆ ಉತ್ತಮ ಸಂಬಂಧ ಇಟ್ಟು ಕೊಂಡಿದ್ದು, ಅದನ್ನು ಯಾವ ರೀತಿ ನಿಭಾಯಿಸಿಕೊಂಡು ಹೋಗುತ್ತಾರೆ ಎನ್ನುವುದು ಕೂಡ ಕುತೂಹಲ ಮೂಡಿ ಸಿದೆ. ಅಲ್ಲದೇ ಅವರು ರಾಜ್ಯಾಧ್ಯಕ್ಷರಾಗಿರುವುದರಿಂದ ಜೆಡಿಎಸ್‌ನಲ್ಲಿ ನಾಯಕರ ವಿರುದ್ಧ ಮುನಿಸಿಕೊಂಡ ಅನೇಕ ನಾಯಕರು ಡಿ.ಕೆ.ಶಿವಕುಮಾರ್ ಸಂಪರ್ಕದ ಲ್ಲಿದ್ದು, ಅವರು ಮುಂದಿನ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಬಾಗಿಲು ಬಡಿಯುವ ಸಾಧ್ಯತೆ ಹೆಚ್ಚಿದೆ.
ಕಷ್ಟದ ಲೆಕ್ಕ: ಡಿ.ಕೆ.ಶಿವಕುಮಾರ್ ವಿರುದ್ಧ ಇ.ಡಿ ಹಾಗೂ ಐಟಿ ಪ್ರಕರಣಗಳು ದಾಖಲಾಗಿದ್ದು, ಇನ್ನೂ ವಿಚಾರಣೆ ಹಂತದಲ್ಲಿವೆ. ಬಿಜೆಪಿ ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡು ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸುವ ಸಾಧ್ಯತೆ ಇದೆ. ಅಲ್ಲದೇ, ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿಗೆ ಹೋದವರ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ ಎಂದು ಬಿಜೆಪಿ ಅವರ ನೈತಿಕತೆಯನ್ನು ತಗ್ಗಿಸುವ ಪ್ರಯತ್ನ ಮಾಡಬಹುದು.
ಇದಕ್ಕಿಂತ ಮುಖ್ಯವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿದ್ದರಾಮಯ್ಯ ಬಣ ಕಾರ್ಯತಂತ್ರಗಳನ್ನು ರೂಪಿಸಿ, ಅವರ ಚಟುವಟಿಕೆಗಳಿಗೆ ಅಸಹಕಾರ ತೋರುವ ಸಾಧ್ಯತೆ ಇದೆ. ಈಗ ಸಿದ್ದರಾಮಯ್ಯ ಅವರ ಜೊತೆಗೆ ಮೂವರು ಕಾರ್ಯಾಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸುವುದು ಕೂಡ ಡಿ.ಕೆ.ಶಿವಕುಮಾರ್‌ಗೆ ಸವಾಲಿನ ಕೆಲಸ. ಈಗಾಗಲೇ ಡಿ.ಕೆ.ಶಿವಕುಮಾರ್ ಬೆಳಗಾವಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಈಗ ಅದೇ ರೀತಿಯ ಅಸಹಕಾರ ಬೇರೆ ಜಿಲ್ಲೆಗಳಲ್ಲಿಯೂ ವ್ಯಕ್ತವಾಗುವ ಸಾಧ್ಯತೆ ಇದೆ.
ಲಿಂಗಾಯತರ ವಿಶ್ವಾಸ ಗಳಿಸುವ ಕಸರತ್ತು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ಗೆ ಪ್ರಬಲ ಪೈಪೋಟಿ ನೀಡಿದ್ದು, ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಎಂ.ಬಿ. ಪಾಟೀಲ್. ಈಗಾಗಲೇ ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿರುವುದರಿಂದ ಆ ಸಮುದಾಯ ಕಾಂಗ್ರೆಸ್ ಬಗ್ಗೆ ಮತ್ತಷ್ಟು ನಿರಾಸಕ್ತಿ ತೋರುವ ಸಾಧ್ಯತೆ ಇದೆ.
ಅಲ್ಲದೇ ಒಬ್ಬರೇ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ವೀರಶೈವ ಲಿಂಗಾಯತ ಸಮುದಾಯದ ಈಶ್ವರ್ ಖಂಡ್ರೆ ಅವರೊಂದಿಗೆ ಇನ್ನಿಬ್ಬರು ಕಾರ್ಯಾಧ್ಯಕ್ಷರ ಹುದ್ದೆ ಸೃಷ್ಟಿಸುವ ಮೂಲಕ ಅವರ ಅಧಿಕಾರ ಮೊಟಕುಗೊಳಿಸಲಾ ಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಆ ಸಮುದಾಯದ ನಾಯಕರನ್ನು ಜೊತೆಗೆ ಕರೆದುಕೊಂಡು ಬಿಜೆಪಿ ಪರ ಒಲವು ಹೊಂದಿರುವ ವೀರಶೈವ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ಕಡೆಗೆ ಸೆಳೆಯು ವುದು ಕಷ್ಟದ ಕೆಲಸ.
ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಿ.ಕೆ.ಶಿವಕುಮಾರ್‌ಗೆ ಅಭಿನಂದನೆಗಳು. -ಎಚ್.ಡಿ.ಕುಮಾರಸ್ವಾಮಿ * ಶಂಕರ ಪಾಗೋಜಿ