Advertisement

ಪವರ್‌ ಮೇಲೆ ಡಿಕೆಶಿ ಗರಂ 

12:49 PM Jun 03, 2017 | |

ಬೆಂಗಳೂರು: ನಗರದಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ ಬಗ್ಗೆ ಬೆಸ್ಕಾಂ ಅಧಿಕಾರಿಗಳನ್ನು ಬೆಂಡೆತ್ತಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌, ನಿಮ್ಮ ನಿರ್ಲಕ್ಷ್ಯತನದಿಂದಾಗಿ ಇಂಧನ ಇಲಾಖೆಯ ಊಸಾಬರಿಯೇ ಬೇಡ ಎನ್ನುವಂತಾಗಿದೆ ಎಂದು ಹರಿಹಾಯ್ದಿದ್ದಾರೆ. 

Advertisement

 ನಗರದಲ್ಲಿ ಮಳೆ ಸುರಿದ ಸಂದರ್ಭದಲ್ಲಿ ವಿದ್ಯುತ್‌ ಸಮಸ್ಯೆ ಎದುರಾದ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಶುಕ್ರವಾರ ತಮ್ಮ ನಿವಾಸದಲ್ಲಿ ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ಗಳ ಸಭೆ ನಡೆಸಿದ ಅವರು, ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಿಡಿಮಿಡಿಗೊಂಡರು.

“ಒಂದು ಗಂಟೆ ಮಳೆ ಬಿದ್ದರೆ ತಾಸುಗಟ್ಟಲೆ ಕರೆಂಟ್‌ ಹೋಗುತ್ತದೆ. ಮುಖ್ಯಮಂತ್ರಿ ಪತ್ರಿಕಾಗೋಷ್ಠಿ ನಡೆಸುತ್ತಿರುವಾಗಲೇ ಕರೆಂಟ್‌ ಕೈಕೊಡುತ್ತೇ, ಮಳೆ-ಗಾಳಿಗೆ ಸಾವಿರಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಬಿದ್ದಿವೆ. ಇನ್ನೂ ಅವುಗಳನ್ನು ಸರಿಪಡಿಸಿಲ್ಲ. ದೂರುಗಳಿಗೆ ಸಾರ್ವಜನಿಕರು ಕರೆ ಮಾಡಿದರೆ ಅಧಿಕಾರಿಗಳು ಕರೆ ಸ್ವೀಕರಿಸುವುದಿಲ್ಲ.

ಹೋದೆಲ್ಲೆಲ್ಲ ಜನರು ಹಿಡಿಶಾಪ ಹಾಕುವಂತಾಗಿದೆ.  ಪರಿಸ್ಥಿತಿ ಹೀಗಿರುವಾಗ ನೀವು ಏನ್‌ ಕೆಲ್ಸ ಮಾಡ್ತಿದ್ದೀರಿ? ನಿಮಗೆ ಜವಾಬ್ದಾರಿ ಅನ್ನೋದು ಇಲ್ವಾ? ಹೀಗೇನಾ ನಿಮ್ಮ ಕಾರ್ಯವೈಖರಿ? ನೀವು ಹೀಗೆ ಮಾಡುವುದರಿಂದ ಜನ ಸರ್ಕಾರಕ್ಕೆ ಬೈತಾರೆ. ನಿಮ್ಮ ಈ ಬೇಜವಾಬ್ದಾರಿಯಿಂದಾಗಿ ನನಗೆ ಇಂಧನ ಇಲಾಖೆಯೇ ಬೇಡ ಅನಿಸಿ ಬಿಟ್ಟಿದೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

“ಮಳೆಗಾಲ ಆರಂಭವಾಗಿದೆ. ನಗರದಲ್ಲಿ ಇನ್ನು ಮುಂದೆ ಮಳೆ ಬರುತ್ತಲೇ ಇರುತ್ತದೆ. ಹಾಗಾಗಿ ವಿದ್ಯುತ್‌ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಬಿದ್ದಿರುವ ವಿದ್ಯುತ್‌ ಕಂಬಗಳ ಜೋಡಣೆ ಮಾಡಿ. ದುರಸ್ತಿ ಕಾರ್ಯಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ. ವಿದ್ಯುತ್‌ ವ್ಯತ್ಯಯದ ಸಂದರ್ಭಗಳು ಇದ್ದಾಗ, ನಾಗರಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿ, ದೂರು ಮತ್ತು ಅಹವಾಲುಗಳಿಗೆ ತಾಳ್ಮೆಯಿಂದ ಸ್ಪಂದಿಸಿ.

Advertisement

ಎಂತಹದ್ದೇ ದೊಡ್ಡ ಸಮಸ್ಯೆ ಇದ್ದರೂ ಮೂರ್‍ನಾಲ್ಕು ಗಂಟೆಯೊಳಗೆ ಸರಿಪಡಿಸಬೇಕು. ಅಧಿಕಾರಿಗಳು ಯಾವ ಕಾರಣಕ್ಕೂ ಮೊಬೈಲ್‌ ಸ್ವಿಚ್‌ ಆಫ್ ಮಾಡುವಂತಿಲ್ಲ. ಕರೆಗಳನ್ನು ನಿರಾಕರಿಸುವಂತಿಲ್ಲ. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು,’ ಎಂದು ಸಚಿವರು ಎಚ್ಚರಿಕೆ ನೀಡಿದರು.

ಹೆಚ್ಚುವರಿ ಗ್ಯಾಂಗ್‌ಮೆನ್‌ಗಳ ನೇಮಕ: ಕಳೆದ ವಾರ ನಗರದಲ್ಲಿ ಬಿದ್ದ ಮಳೆಯಿಂದಾಗಿ ಬೆಸ್ಕಾಂ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಬಿದ್ದಿವೆ. ಅವುಗಳನ್ನು ಸರಿಪಡಿಸಲು ಹೆಚ್ಚುವರಿ ಗ್ಯಾಂಗ್‌ಮೆನ್‌ಗಳನ್ನು ನೇಮಕ ಮಾಡಿಕೊಳ್ಳಲು, 40ಕ್ಕೂ ಹೆಚ್ಚು ವಾಹನಗಳ ಖರೀದಿ ಮಾಡಿ ಸಮಸ್ಯೆಗಳನ್ನು ಸರಿಪಡಿಸಲು ಯೋಜನೆ ರೂಪಿಸಲಾಗಿದೆ.

ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು. ಅಧಿಕಾರಿಗಳ ಮೇಲೆ ನಿಗಾ ಇಡುವಂತೆ ಜಾಗೃತ ದಳಕ್ಕೆ ಸೂಚನೆ ನೀಡಲಾಗಿದೆ ಎಂದು ಸಚಿವರು ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು. 

ಫೈಸ್ಟಾರ್‌ ಟ್ರಾನ್ಸ್‌ ಫಾರ್ಮರ್‌ಗಳನ್ನೇ ಬಳಸಿ
ಬೆಂಗಳೂರು:
“ಫೈವ್‌ಸ್ಟಾರ್‌’ ಟ್ರಾನ್ಸ್‌ಫಾರ್ಮರ್‌ಗಳನ್ನು ತಯಾರು ಮಾಡುವಂತೆ ಎಲ್ಲಾ ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. 

ಕರ್ನಾಟಕ ವಿದ್ಯುತ್‌ ಕಾರ್ಖಾನೆಗೆ ಶುಕ್ರವಾರ ಭೇಟಿ ನೀಡಿದ ಅವರು,  ಫೈವ್‌ ಸ್ಟಾರ್‌ ಟ್ರಾನ್ಸ್‌ಫಾರ್ಮರ್‌ ಬಳಕೆಯಿಂದ ಖರ್ಚು ಶೇ. 5ರಷ್ಟು ಹೆಚ್ಚಾದರೆ. ಶೇ.25ರಷ್ಟು ಇಂಧನ ಉಳಿತಾಯ ಆಗುತ್ತದೆ. ಈ ಹಿನ್ನೆಲೆಯಲ್ಲಿ ಜುಲೈ 1ರಿಂದ ಫೈವ್‌ ಸ್ಟಾರ್‌ ಟ್ರಾನ್ಸ್‌ಫಾರ್ಮರ್‌ಗಳನ್ನು ತಯಾರು ಮಾಡುವಂತೆ ಎಲ್ಲ ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. 

ಇನ್ನು ಮುಂದೆ ಫೈವ್‌ ಸ್ಟಾರ್‌ ಟ್ರಾನ್ಸ್‌ಫಾರ್ಮರ್‌ಗಳನ್ನೇ ತಯಾರು ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಫೋರ್‌ ಸ್ಟಾರ್‌ ಟ್ರಾನ್ಸ್‌ಫಾರ್ಮರ್‌ಗಳನ್ನು ಬಳಸಿದರೆ ನಗರ ಪ್ರದೇಶಗಳಲ್ಲಿ ಕಡ್ಡಾಯವಾಗಿ ಫೈವ್‌ ಸ್ಟಾರ್‌ ಟ್ರಾನ್ಸ್‌ಫಾರ್ಮರ್‌ಗಳನ್ನೇ ಬಳಕೆ ಮಾಡಬೇಕು ಎಂದು ಆದೇಶಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next