ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಂಗಳವಾರ ಸಿಟಿ ಸಿವಿಲ್ ಕೋರ್ಟ್ ಆವರಣದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಐಟಿ ಅಧಿಕಾರಿಗಳು ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಶಿವಕುಮಾರ್ ಹಾಗೂ ಇತರರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ರಾಮಚಂದ್ರ ಡಿ.ಹುದ್ದಾರ್‌ವಿಚಾರಣೆಯನ್ನು ಡಿ.12ಕ್ಕೆ ಮುಂದೂಡಿ ಆದೇಶಿಸಿದ್ದಾರೆ.
ಏನಿದು ಪ್ರಕರಣ?: 2017ರ ಆಗಸ್ಟ್‌ನಲ್ಲಿ ಡಿ.ಕೆ.ಶಿವಕುಮಾರ್ ಮನೆ, ಕಚೇರಿ, ಸಂಬಂಧಿಕರು, ಆಪ್ತರ ಮನೆ ಹಾಗೂ ದೆಹಲಿ ನಿವಾಸದ ಮೇಲೆ ಐಟಿ ದಾಳಿ ನಡೆಸಿತ್ತು. ಅದರ ಬೆನ್ನಲ್ಲೇ ಐಟಿ ಅಧಿಕಾರಿಗಳು, 2018ರಲ್ಲಿ ಮಾಜಿ ಸಚಿವರು ಹಾಗೂ ಇತರರ ವಿರುದ್ಧ ತೆರಿಗೆ ವಂಚನೆ ಹಾಗೂ ಸುಳ್ಳು ದಾಖಲಾತಿ ಆರೋಪದಡಿ ನ್ಯಾಯಾಲಯದಲ್ಲಿ ನಾಲ್ಕನೇ ಪ್ರಕರಣ ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ 2019 ಮಾ.15ರಂದು ಶಿವಕುಮಾರ್, ಇತರರು ಈ ಪ್ರಕರಣ ರದ್ದತಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಆಕ್ಷೇಪಿಸಿದ್ದ ಐಟಿ, ಪ್ರಕರಣ ರದ್ದು ಮಾಡದಂತೆ ಮನವಿ ಮಾಡಿತ್ತು. ಜೂ.25 ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. ಬಳಿಕ ಪ್ರಕರಣ ರದ್ದು ಕೋರಿ ಡಿಕೆಶಿ ಮತ್ತು ಇತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕೆಲ ದಿನಗಳ ಹಿಂದೆ ಹೈಕೋರ್ಟ್ ಕೂಡ ಅರ್ಜಿ ವಜಾಗೊಳಿಸಿತ್ತು.
ಡಿಕೆಶಿ-ರೆಡ್ಡಿ ಹಸ್ತಲಾಘವ: ಡಿ.ಕೆ.ಶಿವಕುಮಾರ್ ಕೋರ್ಟ್‌ಗೆ ಹಾಜರಾದ ವೇಳೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕೂಡ ಹಾಜರಾದರು. ಈ ವೇಳೆ ಮುಖಾಮುಖೀ ಭೇಟಿಯಾದ ನಾಯಕರು ಪರಸ್ಪರ ಹಸ್ತಲಾಘವ ಮಾಡಿ, ಕೆಲ ಹೊತ್ತು ಚರ್ಚೆ ನಡೆಸಿದರು.