Advertisement
ಅಹಮದ್ ಪಟೇಲ್ ಗುಜರಾತ್‌ನಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಗುಜರಾತ್ ಶಾಸಕರಿಗೆ ರಾಜ್ಯದಲ್ಲಿ ಆಶ್ರಯ ನೀಡಿದ್ದಕ್ಕೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕೆಂಗಣ್ಣಿಗೆ ಗುರಿಯಾಗಿದ್ದು, ಅದೇ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ರಾಜಕೀಯವಾಗಿ ಡಿ.ಕೆ. ಶಿವಕುಮಾರ್‌ರನ್ನು ಹತ್ತಿಕ್ಕಲು ಬಿಜೆಪಿ ಐಟಿ ಅಸ್ತ್ರ ಬಳಸಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಅಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಪ್ರಚಾರಕ್ಕೆ ತೆರಳಿದರೆ, ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದು, ಪ್ರಕರಣ ಮತ್ತಷ್ಟು ಬಿಗಿಗೊಳ್ಳುವ ಆತಂಕ ಇರುವುದರಿಂದ ಡಿ.ಕೆ. ಶಿವಕುಮಾರ್ ಗುಜರಾತ್ ಚುನಾವಣೆ ಪ್ರಚಾರದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
“ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ನಾನು ಗೌರವಿಸುತ್ತೇನೆ. ನಮ್ಮ ರಾಜಕೀಯ ಸಿದ್ಧಾಂತ ಬೇರೆ, ಆದರೆ, ಕುಮಾರಸ್ವಾಮಿ ಎದುರಿಗೆ ಬಂದಾಗ ಚೆನ್ನಾಗಿಯೇ ಮಾತನಾಡುತ್ತೇನೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. “ಅನಿತಾ ಕುಮಾರಸ್ವಾಮಿ ನನ್ನನ್ನು ಅಣ್ಣ ಎಂದು ತಿಳಿದುಕೊಂಡಿದ್ದಾರೆ. ನಮ್ಮ ರಾಜಕೀಯ ಸಿದ್ಧಾಂತ ಬೇರೆ ಆದರೂ ಮಹಿಳೆಗೆ ಗೌರವ ಕೊಡಬೇಕು, ನಾನು ಗೌರವ ಕೊಡುತ್ತೇನೆ’ ಎಂದು ಹೇಳಿದ್ದಾರೆ. ಇದೇ ವೇಳೆ, ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಅವರ ವಿರುದ್ಧ ವಾಗ್ಧಾಳಿ ನಡೆಸಿದ ಅವರು, “ಯೋಗೇಶ್ವರ್‌ಗೆ ಮಾನ, ಮರ್ಯಾದೆ ಇದ್ದರೆ, ಅವರ ತಮ್ಮನಿಂದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ’ ಎಂದು ಕಿಡಿ ಕಾರಿದ್ದಾರೆ. ಇನ್ನು ಸಚಿವ ವಿನಯ್ ಕುಲಕರ್ಣಿ ವಿರುದ್ಧ ಬಿಜೆಪಿ ರಾಜಕೀಯಕ್ಕಾಗಿ ಹೋರಾಟ ಮಾಡುತ್ತಿದೆ. ಆತ ಕೃಷಿ ಮಾಡಿಕೊಂಡು ಉನ್ನತ ಹುದ್ದೆಗೇರಿದ್ದಾನೆ. ಅಲ್ಲದೇ ಅವರ ಸಮಾಜ ಕೂಡ ಆತನಿಗೆ ಉನ್ನತ ಹುದ್ದೆ ನೀಡಿದೆ. ಅವನು ಅದನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾನೆ. ಹೀಗಾಗಿ ಬಿಜೆಪಿಯವರು ಅವನ ನುಗ್ಗುವಿಕೆಗೆ ಭಯ ಬಿದ್ದಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಇದೇ ವೇಳೆ, ಮಾಜಿ ಸಂಸದೆ ರಮ್ಯಾ ಮುಂದಿನ ಚುನಾವಣೆಯಲ್ಲಿ ಶಾಸಕಿ ಅಥವಾ ಸಂಸದೆಯಾಗಿ ಆಯ್ಕೆಯಾಗುತ್ತಾರೆ. ಚುನಾವಣಾ ಪ್ರಚಾರ ಸಮಿತಿಯಲ್ಲಿ ಸ್ಟಾರ್ ಪ್ರಚಾರಕಿಯಾಗಿದ್ದಾರೆ. ಪಕ್ಷ ಅವರಿಗೆ ಉನ್ನತ ಹುದ್ದೆ ನೀಡಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಪಕ್ಷ ಚನ್ನಪಟ್ಟಣ ಅಥವಾ ರಾಮನಗರದಿಂದ ಸ್ಪರ್ಧಿಸುವಂತೆ ಸೂಚಿಸಿದರೆ, ಸ್ಪರ್ಧೆ ಮಾಡುತ್ತೇನೆ. ಜನತೆ ಈಗಾಗಲೇ ಸಂಸದನಾಗಿ ಆಯ್ಕೆ ಮಾಡಿದ್ದಾರೆ. ಪಕ್ಷದ ಹೈ ಕಮಾಂಡ್ ನೀಡುವ ಸೂಚನೆಯನ್ನು ಪಾಲಿಸುತ್ತೇನೆ ಎಂದು ಹೇಳಿದರು.