ಕಲಬುರಗಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಗ್ಗೆ ಅವಾಚ್ಯವಾಗಿ ನಿಂದಿಸಿದ ಬಿಜೆಪಿ ಮುಖಂಡ, ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಡಿ.ಕೆ. ಶಿವಕುಮಾರ ಅಭಿಮಾನಿಗಳು ಮತ್ತು ಬೆಂಬಲಿಗರು ರವಿವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಇಂದಿರಾ ಸ್ಮಾರಕ ಭವನದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿ ಮುಂಭಾಗದಲ್ಲಿ ಅಖೀಲ ಕರ್ನಾಟಕ ಡಿ.ಕೆ. ಶಿವಕುಮಾರ ಅಭಿಮಾನಿಗಳ ಸಂಘ ಮತ್ತು ವಾರ್ಡ್ ಸಂಖ್ಯೆ 53ರ ಬುದ್ಧ ನಗರದಲ್ಲಿ ಡಿ.ಕೆ. ಶಿವಕುಮಾರ ಅಭಿಮಾನಿ ಬಳಗದವರು ಜಮಾವಣೆಗೊಂಡು ರಮೇಶ ಜಾರಕಿಹೊಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ರಸ್ತೆಯಲ್ಲಿ ರಮೇಶ ಜಾರಕಿಹೊಳಿ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಸಂತ್ರಸ್ತೆ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿ ರಮೇಶ ಜಾರಕಿಹೊಳಿ ವಿರುದ್ಧ ಮೊಕದ್ದಮೆ ದಾಖಲು ಮಾಡಿದ್ದಾರೆ. ಆದರೂ, ಆರೋಪಿ ಸ್ಥಾನದಲ್ಲಿರುವ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮೇಲೆ ಇಲ್ಲದ ಆರೋಪ ಮಾಡಿ ಏಕವಚನದಲ್ಲಿ ಕೀಳುಮಟ್ಟದ ಶಬ್ದ ಗಳನ್ನು ಉತ್ಛರಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮಹಾತ್ಮ ಗಾಂಧಿ ಪುತ್ಥಳಿ ಮುಂಭಾಗದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ರಾದ ಅಲ್ಲಮಪ್ರಭು ಪಾಟೀಲ ಮತ್ತು ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ರಾಜಕೀಯದಲ್ಲಿ ಒಬ್ಬರಿಗೊಬ್ಬರು ಟೀಕೆ ಮಾಡುವ ಮೂಲಕ ಹೇಳಿಕೆ ನೀಡುವುದು ಸಹಜ. ಆದರೆ, ಕೀಳುಮಟ್ಟದ ಪದಗಳನ್ನು ಬಳಸಿ ಮಾತನಾಡುವುದು ರಾಜಕೀಯ ನಾಯಕರಿಗೆ ಶೋಭೆ ತರುವಂತದ್ದಲ್ಲ ಎಂದು ರಮೇಶ ಜಾರಕಿಹೊಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಯ ಡಿ.ಕೆ.ಶಿವಕುಮಾರ ಮೇಲೆ ಇಲ್ಲ, ಸಲ್ಲದ ಆರೋಪ ಮಾಡಿ, ನಾಲಿಗೆ ಹರಿಬಿಟ್ಟು ಹೇಳಿಕೆ ನೀಡುತ್ತಿರುವ ರಮೇಶ ಜಾರಕಿಹೊಳಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮೇಲಾಗಿ ರಮೇಶ ಜಾರಕಿಹೊಳಿ ಯುವತಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಆಕೆಗೆ ಅನ್ಯಾಯ ಮಾಡಿದ್ದಾರೆ. ಆದರೆ, ನಿಜವಾದ, ಸತ್ಯವಾದ ಘಟನೆಯನ್ನು ತಿರುಚಿ, ಅಸತ್ಯವನ್ನಾಗಿ ಮಾಡಿ ಬೇರೆ ಪಕ್ಷದ ನಾಯಕರ ಮೇಲೆ ತೇಜೋವಧೆಗೆ ಹೊರಟಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ತೀವ್ರವಾಗಿ ಖಂಡಿಸಿದರು.
ಪ್ರತಿಭಟನೆಯಲ್ಲಿ ಡಿ.ಕೆ.ಶಿವಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ಎಸ್. ಅಂಗಡಿ, ಮುಖಂಡರಾದ ಗೋಪಿಕೃಷ್ಣ, ಧರ್ಮರಾಜ ಪಾಟೀಲ ಕಲ್ಲಹಿಪ್ಪರಗಾ, ಶಾಮ ನಾಟೀಕಾರ, ಶರಣು ತೇಗನೂರ, ಓಂಕಾರ ವಠಾರ ಕೆರಿಭೋಸಗಾ, ಅನಿಲ ಉಪಾಸಿ, ಪ್ರಜ್ಞಾನಂದ, ಕಲಾವತಿ ಸಂಗಮೇಶ, ರಾಣಪ್ಪ ಕೆರಿಭೋಸಗಾ, ನೂರಜಾ ಬೇಗಂ, ರಾಣಪ್ಪ ಕೆರಿಭೋಸಗಾ, ಗೌತಮ, ಅವಿನಾಶ ಧುತ್ರಗಿ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.