ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಅದನ್ನು ತಡೆಯಲು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ರಾಜಕೀಯ ಸುಪಾರಿ ನೀಡಿದ್ದಾರೆಂದು ತಿಳಿದುಬಂದಿದೆ.
ಸುಮಲತಾ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಡಿ.ಕೆ.ಶಿವಕುಮಾರ್ ಹೆಗಲಿಗೆ ಹಾಕಿ ಈ ವಿಚಾರವಾಗಿ ಡಿಕೆಶಿ ಅವರೊಂದಿಗೆ ದೇವೇಗೌಡರು ಸುದೀರ್ಘ ಚರ್ಚೆ ನಡೆಸಿದ್ದಾರೆಂದು ಹೇಳಲಾಗಿದೆ.
ಮಂಡ್ಯ ಜೆಡಿಎಸ್ ಸುಲಭವಾಗಿ ಗೆಲ್ಲುವ ಕ್ಷೇತ್ರ. ಅಲ್ಲಿ ನಿಖೀಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವುದು ನಮ್ಮೆಲ್ಲರ ಗುರಿ. ಈ ನಡುವೆ ಮಂಡ್ಯ ಕ್ಷೇತ್ರದಿಂದ ಸುಮಲತಾ ಚುನಾವಣೆಗೆ ಸ್ಪರ್ಧೆಗಿಳಿಯಲು ಮುಂದಾಗಿರುವುದು ನಮ್ಮ ಗೆಲುವಿಗೆ ದೊಡ್ಡ ಹೊಡೆತವನ್ನೇ ನೀಡುವ ಸಾಧ್ಯತೆಗಳಿವೆ. ಹಾಗಾಗಿ ಹೈಕಮಾಂಡ್ ಮೇಲೆ ಒತ್ತಡ ತಂದು ಸುಮಲತಾ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ದೇವೇಗೌಡರ ಅಣತಿಯಂತೆ ಡಿ.ಕೆ.ಶಿವಕುಮಾರ್ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರೊಟ್ಟಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಸುಮಲತಾ ರಾಜಕೀಯ ಪ್ರವೇಶದ ದುಡುಕಿನ ನಿರ್ಧಾರ ಮಾಡಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗುವುದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧಿಸಿ ಗೆಲ್ಲುವುದು ಕಷ್ಟವಿದೆ. ಅದಕ್ಕಾಗಿ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವೊಲಿಸಿ. ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಮಾಡಿಕೊಡೋಣ ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಇದಕ್ಕೆ ರಾಕ್‌ಲೈನ್ ವೆಂಕಟೇಶ್, ಸುಮಲತಾ ಚುನಾವಣಾ ಸ್ಪರ್ಧೆಗೆ ಒಲವು ತೋರಿಸಿರುವುದರ ಹಿಂದೆ ನನ್ನ ಪಾತ್ರವಿಲ್ಲ. ಆದರೂ ಈ ವಿಷಯವಾಗಿ ಅವರೊಂದಿಗೆ ಮಾತನಾಡುವುದಾಗಷ್ಟೇ ಹೇಳಿದ್ದಾರೆ ಎಂದು ಗೊತ್ತಾಗಿದೆ.