ಬೆಂಗಳೂರು : ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ, ಪದುಮನಾಭನ ಪಾದ ಭಜನೆ ಸುಖವಯ್ಯ ಎಂದು ದಾಸರ ಪದ ಮೆಲುಕು ಹಾಕುವ ಜತೆಗೆ ಆಧ್ಯಾತ್ಮಿಕ ವಿಚಾರದ ಬಗ್ಗೆ ಮಾತನಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗ ಎಲ್ಲರ ಹುಬ್ಬೇರಿಕೆಗೆ ಕಾರಣರಾಗಿದ್ದಾರೆ.
ಹೌದು. ಆದಿಚುಂಚನಗಿರಿ ಮಠದ ಸಂಗೀತೋತ್ಸವ ಹಾಗೂ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಡಾ.ನಿರ್ಮಲಾನಂಧ ಸ್ವಾಮೀಜಿಗಳ ಸಮ್ಮುಖದಲ್ಲಿ ಭಕ್ತಿಪರವಶರಾಗಿ ಮಾತನಾಡಿದರು.
ಈ ದೇಶದ ಆಸ್ತಿ ನಮ್ಮ ಸಂಸ್ಕೃತಿ. ಇಡಿ ವಿಶ್ವ ಭಾರತದತ್ತ ನೋಡುತ್ತಿದೆ ಎಂದರೆ ಅದಕ್ಕೆ ನಮ್ಮಲ್ಲಿರುವ ನ್ಯಾಯ, ಧರ್ಮ, ಬದ್ಧತೆ, ಸಂಸ್ಕೃತಿಯೇ ಕಾರಣ. ನಮ್ಮ ಪ್ರತಿಯೊಂದು ಆಚರಣೆಗೂ ಅದರದ್ದೇ ಆದ ಇತಿಹಾಸವಿದೆ. ನಾನು ಈ ಭಜನಾ ಕಾರ್ಯಕ್ರಮಕ್ಕೆ ಬಂದಿದ್ದೇ ಒಂದು ಭಾಗ್ಯ ಎಂದರು.
ಅಲೆಕ್ಸಾಂಡರ್ ವಿಶ್ವವನ್ನೇ ಗೆಲ್ಲಬೇಕೆಂದು ಭಾರತದತ್ತ ಬಂದಾಗ, ಭಾರತವನ್ನು ವಶಪಡಿಸಿಕೊಳ್ಳುವುದು ಸುಲಭವಲ್ಲ ಎಂದು ಅವನ ಗುರು ಎಚ್ಚರಿಸಿದ್ದರು. ನೀನು ಭಾರತದಿಂದ ಬರುವಾಗ ರಾಮಾಯಣ, ಮಹಾಭಾರತ, ಭಗವದ್ಗೀತೆ, ಗಂಗಾಜಲ-ಕೃಷ್ಣನ ಕೊಳಲು ಹಾಗೂ ತತ್ವಜ್ಞಾನದ ಹೊತ್ತಿಗೆಯನ್ನು ತೆಗೆದುಕೊಂಡು ಬಾ. ಆಗ ಇಡಿ ಭಾರತವನ್ನೇ ತಂದಂತಾಗುತ್ತದೆ ಎಂದು ಹೇಳಿದ್ದರು. ಇವೆಲ್ಲ ಭಾರತೀಯ ಸಂಸ್ಕೃತಿಯ ಪ್ರತೀಕಗಳು ಎಂದು ವಿವರಿಸಿದರು.
ಕೊಳಲು ಬಿದರಿನ ಸೃಷ್ಟಿ. ಬಿದಿರಿಗೆ ತಾನು ಕೊಳಲಾಗುತ್ತೇನೆಂದು ಗೊತ್ತಿಲ್ಲ, ಕೊಳಲಿಗೆ ನಾದವಾಗುತ್ತೇನೆಂದು ಗೊತ್ತಿಲ್ಲ, ನಾದಕ್ಕೆ ಆನಂದವಾಗುತ್ತೇನೆಂದು ಗೊತ್ತಿಲ್ಲ. ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅಕ್ಕಿ ಒಂದು ಕಡೆ, ಅರಿಶಿನ ಒಂದುಕಡೆ, ಎರಡು ಸೇರಿದಾಗ ಮಾತ್ರ ಅಕ್ಷತೆಯಾಗುತ್ತದೆ ಎಂದು ಹೇಳಿದರು. ಕಳೆದೆರಡು ದಿನಗಳಿಂದ ಕುಮಾರಸ್ವಾಮಿ ಹಾಗೂ ಶಿವಕುಮಾರ್ ಮಧ್ಯೆ ನಡೆಯುತ್ತಿದ್ದ ಪರೋಕ್ಷ ವಾಗ್ವಾದದ ಮಧ್ಯೆಯೇ ಡಿ.ಕೆ.ಶಿವಕುಮಾರ್ ಇಂದು ಆಡಿರುವ ಭಾವನಾತ್ಮಕ ಮಾತುಗಳು ಕುತೂಹಲ ಮೂಡಿಸಿತು.