Advertisement

ದ.ಕ.: ಡೆಂಗ್ಯೂ ಜತೆ ವೈರಲ್‌ ಜ್ವರವೂ ಹೆಚ್ಚಳ

12:23 AM Sep 22, 2019 | mahesh |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದೊಂದಿಗೆ ಇದೀಗ ವೈರಲ್‌ ಜ್ವರ, ಹೊಟ್ಟೆನೋವು, ಭೇಧಿಯಂತಹ ಕಾಯಿಲೆಗಳು ಹೆಚ್ಚುತ್ತಿವೆ. ಡೆಂಗ್ಯೂ ಜ್ವರದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ತೆರಳಿದರೆ, ಪ್ಲೇಟ್‌ಲೆಟ್‌ ಜಾಸ್ತಿಯಿದ್ದರೂ ರೋಗಿ ದಾಖಲಾಗಬೇಕು, ರಕ್ತದ ಅಗತ್ಯವಿದೆ ಎಂದೆಲ್ಲ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಹೇಳುತ್ತಿರುವುದು ರೋಗಿಗಳು ಮತ್ತು ಅವರ ಮನೆಯವರಲ್ಲಿ ಆತಂಕ ಮೂಡಿಸುವ ಜತೆಗೆ ಚಿಕಿತ್ಸಾ ವೆಚ್ಚವೂ ಹೊರೆಯಾಗುತ್ತಿದೆ.

Advertisement

ಜಿಲ್ಲೆಯಲ್ಲಿ ಈವರೆಗೆ 1027 ಡೆಂಗ್ಯೂ ಪ್ರಕರಣ ದಾಖಲಾಗಿದ್ದು, ಮೂವರು ಡೆಂಗ್ಯೂ ಜ್ವರದಿಂದ ಮತ್ತು ಸುಮಾರು 9 ಮಂದಿ ಶಂಕಿತ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾರೆ. ಸದ್ಯ 35 ಮಂದಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಡೆಂಗ್ಯೂ ಜ್ವರಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಡೆಂಗ್ಯೂ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಕಾರಿಗಳು ಹೇಳುತ್ತಿದ್ದರೂ ವೈರಲ್‌ ಜ್ವರಬಾಧೆ ಸದ್ಯ ಹೆಚ್ಚು ಸದ್ದು ಮಾಡುತ್ತಿದೆ.

ಅನಗತ್ಯ ದಾಖಲು ಮಾಡಿದರೆ ಕ್ರಮ
ವೈರಲ್‌ ಜ್ವರ, ಬ್ಯಾಕ್ಟೀರಿಯಲ್‌ ಫಿವರ್‌ ಮತ್ತು ಹೊಟ್ಟೆನೋವು, ಭೇದಿ ಕಾಯಿಲೆಗಳಿಗೆ ಒಳಗಾಗುತ್ತಿರುವವರ ಸಂಖ್ಯೆ ಕಳೆದ ಒಂದು ವಾರದಿಂದೀಚೆಗೆ ಜಾಸ್ತಿಯಾಗುತ್ತಿದೆ. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ವೈರಲ್‌ ಜ್ವರ ಹೆಚ್ಚುತ್ತಿದೆ ಎಂಬುದು ವೈದ್ಯರ ಅಭಿಪ್ರಾಯ. ಈ ನಡುವೆ ಡೆಂಗ್ಯೂ ಜ್ವರ ಎಂದು ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದರೆ ನಿಗದಿತ ಪ್ರಮಾಣದ ಪ್ಲೇಟ್‌ಲೆಟ್‌ ಇದ್ದರೂ ಕೆಲವು ಕಡೆ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲಾಗಲು ಹೇಳುತ್ತಿದ್ದಾರೆ ಎಂದು ಕೆಲ ರೋಗಿಗಳ ಸಂಬಂಧಿಕರು ದೂರಿದ್ದಾರೆ.

ಡೆಂಗ್ಯೂ ಜ್ವರ ಕಾಣಿಸಿದ ಕೂಡಲೇ ಔಷಧ ತೆಗೆದುಕೊಳ್ಳಲು ತೆರಳಿದ ಎಲ್ಲರೂ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆಗೆ ಆ ಕೂಡಲೇ ದಾಖಲಾಗಬೇಕಿಲ್ಲ. ಪ್ಲೇಟ್‌ಲೆಟ್‌ ಕೊರತೆ ಇಲ್ಲದಿದ್ದರೂ, ಆಸ್ಪತ್ರೆಗಳಲ್ಲಿ ವೈದ್ಯರು ಅನಗತ್ಯವಾಗಿ ದಾಖಲು ಮಾಡಿಕೊಂಡ ಬಗ್ಗೆ ದೂರುಗಳು ಬಂದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ| ನವೀನ್‌ಚಂದ್ರ ತಿಳಿಸಿದ್ದಾರೆ.

ಹಾಸಿಗೆ ಕೊರತೆ
ಕೆಲವು ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆಯೂ ಎದುರಾಗಿದೆ. ಎಲ್ಲ ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿ ತುಳುಕುತ್ತಿರುವುದರಿಂದ ಸದ್ಯ ಅಗತ್ಯವಾಗಿ ದಾಖಲಾಗಬೇಕಾದವರಿಗೆ ದಾಖಲಾಗಲು ಸಾಧ್ಯವಾಗುತ್ತಿಲ್ಲ.

Advertisement

ಉಡುಪಿಯಲ್ಲೂ ಡೆಂಗ್ಯೂ ಹೆಚ್ಚಳ
ಉಡುಪಿ: ಜಿಲ್ಲೆಯಲ್ಲಿ ಇಲ್ಲಿವರೆಗೆ ಒಟ್ಟು ಡೆಂಗ್ಯೂ 197 ಹಾಗೂ ಮಲೇರಿಯಾ 72 ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯಾ ಧಿಕಾರಿ ಡಾ| ಅಶೋಕ್‌ ತಿಳಿಸಿದ್ದಾರೆ.

1 ಲಕ್ಷ 36 ಸಾವಿರ ಮನೆ ಭೇಟಿ
ಆರೋಗ್ಯ ಇಲಾಖೆಯಿಂದ ಮಹಾನಗರ ಪಾಲಿಕೆ, ಎನ್ನೆಸ್ಸೆಸ್‌ ವಿದ್ಯಾರ್ಥಿಗಳು, ನರ್ಸಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳು, ಎನ್‌ಜಿಒಗಳ ಸಹಕಾರದೊಂದಿಗೆ ಈವರೆಗೆ 1 ಲಕ್ಷದ 36 ಸಾವಿರ ಮನೆಗಳಿಗೆ ಭೇಟಿ ನೀಡಿ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶ ಪಡಿಸಲಾಗಿದೆ. ಕೆಲವು ಮನೆಗಳಿಗೆ ಮರು ಭೇಟಿಯನ್ನೂ ನೀಡಲಾಗಿದ್ದು, ಈ ವೇಳೆ ಲಾರ್ವಾ ಉತ್ಪತ್ತಿ ತಾಣ ನಾಶ ಪಡಿಸಿದ ಮನೆಗಳ ಪರಿಸರದಲ್ಲೇ ಮತ್ತೆ ಅದಕ್ಕೆ ಪೂರಕ ತಾಣ ಇರುವುದು ಗಮನಕ್ಕೆ ಬಂದಿದೆ. ಜನ ಜಾಗೃತರಾಗದಿದ್ದರೆ ಇದರ ನಿರ್ಮೂಲನೆ ಅಸಾಧ್ಯ ಎಂದು ಡಾ| ನವೀನ್‌ಚಂದ್ರ ಮನವಿ ಮಾಡಿದ್ದಾರೆ. ಪ್ರಸ್ತುತ ನಾಲ್ಕೈದು ದಿನಗಳಿಂದ ಮಳೆ ಇಲ್ಲದಾಗಿದ್ದು, ತತ್‌ಕ್ಷಣಕ್ಕೆ ಮಳೆ ಬಂದರೆ ಮತ್ತೆ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಜನ ಎಚ್ಚೆತ್ತುಕೊಂಡು ಪ್ರತಿ ಆರು ದಿನಕ್ಕೊಮ್ಮೆಯಾದರೂ ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಶುಚಿಗೊಳಿಸಬೇಕು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next