Advertisement

ದ.ಕ.: 14 ನಾಮಪತ್ರ ಕ್ರಮಬದ್ಧ

02:32 AM Mar 28, 2019 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಒಟ್ಟು 15 ನಾಮಪತ್ರಗಳು ಬಂದಿದ್ದು, ಬುಧವಾರ ನಡೆದ ಪರಿಶೀಲನೆ ವೇಳೆ ಒಂದು ನಾಮಪತ್ರ ತಿರಸ್ಕೃತಗೊಂಡಿದೆ. 14 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ದ.ಕ. ಜಿಲ್ಲಾ ಚುನಾವಣಾಧಿಕಾರಿ ಶಶಿಕಾಂತ ಸೆಂಥಿಲ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಬಿಜೆಪಿಯಿಂದ ಸಲ್ಲಿಸಿದ್ದ ಸುದರ್ಶನ ಅವರ ಹೆಚ್ಚುವರಿ ನಾಮಪತ್ರ ತಿರಸ್ಕೃತಗೊಂಡಿದೆ. ನಾಮಪತ್ರ ಹಿಂದೆಗೆತಕ್ಕೆ ಮಾ. 29ರ ಮಧ್ಯಾಹ್ನ ಮೂರು ಗಂಟೆ ತನಕ ಅವಕಾಶವಿದೆ ಎಂದರು.

ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಅವರ ಅಫಿದವಿತ್‌ ಸರಿಯಿಲ್ಲದ ಕಾರಣ ತಿರಸ್ಕರಿಸುವಂತೆ ಎರಡು ದೂರುಗಳು ಬಂದಿದ್ದವು. ವಿವರವಾಗಿ ಪರಿಶೀಲನೆ ನಡೆಸಿದ ಬಳಿಕ ದೂರನ್ನು ತಿರಸ್ಕರಿಸಿ ನಾಮಪತ್ರವನ್ನು ಕ್ರಮಬದ್ಧಗೊಳಿಸಲಾಗಿದೆ ಎಂದರು.

ಕ್ರಮಬದ್ಧ ಅಭ್ಯರ್ಥಿಗಳು
ಹಿಂದುಸ್ತಾನ್‌ ಜನತಾ ಪಾರ್ಟಿ- ಸುಪ್ರೀಂ ಕುಮಾರ್‌ ಪೂಜಾರಿ, ಉತ್ತಮ್‌ ಪ್ರಜಾಕೀಯ ಪಾರ್ಟಿ- ವಿಜಯ್‌ ಶ್ರೀನಿವಾಸ್‌ ಸಿ., ಬಿಜೆಪಿ- ನಳಿನ್‌ ಕುಮಾರ್‌ ಕಟೀಲು, ಕಾಂಗ್ರೆಸ್‌- ಮಿಥುನ್‌ ಎಂ. ರೈ, ಎಸ್‌ಡಿಪಿಐ- ಮೊಹಮ್ಮದ್‌ ಇಲ್ಯಾಸ್‌, ಬಿಎಸ್ಪಿ- ಎಸ್‌. ಸತೀಶ್‌ ಸಾಲ್ಯಾನ್‌, ಪಕ್ಷೇತರರು- ದೀಪಕ್‌ ರಾಜೇಶ್‌ ಕುವೆಲ್ಲೊ, ಮ್ಯಾಕ್ಸಿಂ ಪಿಂಟೊ, ಇಸ್ಮಾಯಿಲ್‌ ಶಾಫಿಕ್‌, ಮಹಮ್ಮದ್‌ ಖಾಲಿದ್‌, ಡೊಮೆನಿಕ್‌ ಅಲೆಕ್ಸಾಂಡರ್‌ ಡಿ’ಸೋಜಾ, ವೆಂಕಟೇಶ ಬೆಂಡೆ, ಅಬ್ದುಲ್‌ ಹಮೀದ್‌, ಎಚ್‌. ಸುರೇಶ್‌ ಪೂಜಾರಿ.

17,24,022 ಮತದಾರರು
2019ರ ಜ. 16ರ ಪ್ರಕಾರ ದ.ಕ. ಜಿಲ್ಲೆಯಲ್ಲಿ 8,33,719 ಪುರುಷರು, 8,63,599 ಮಹಿಳೆಯರು ಮತ್ತು 99 ಇತರರು ಸೇರಿದಂತೆ ಒಟ್ಟು 16,97,417 ಮತದಾರರ ನೋಂದಣಿಯಾಗಿದೆ. ಅಲ್ಲದೆ ಮಾ. 16ರ ವರೆಗೆ 26,605 ಹೊಸ ಮತದಾರರ ಸೇರ್ಪಡೆ ಮಾಡಲಾಗಿದ್ದು, ಜಿಲ್ಲೆಯಲ್ಲಿ 17,24,022 ಮತದಾರರು ನೋಂದಣಿಯಾಗಿದ್ದಾರೆ. 1,861 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 640 ಕ್ಲಿಷ್ಟಕರ ಮತಗಟ್ಟೆಗಳಾಗಿವೆ. ಇಲ್ಲಿಗೆ ಮೈಕ್ರೋ ವೀಕ್ಷಕರು ಮತ್ತು ವಿಡಿಯೋ ಕೆಮರಾ ಸೌಲಭ್ಯ ಒದಗಿಸಲಾಗುವುದು ಎಂದರು.

Advertisement

ಚುನಾವಣಾ ಕರ್ತವ್ಯ ನಿರ್ವಹಿಸುವ ಬಗ್ಗೆ ನೇಮಕ ಮಾಡಲಾದ 9,346 ಮತಗಟ್ಟೆ ಅಧಿಕಾರಿಗಳಿಗೆ ಆಯಾಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾ. 31ರಂದು ತರಬೇತಿ ನೀಡಲಾಗುತ್ತದೆ ಎಂದರು.

ಉಡುಪಿ: ಎಲ್ಲ ನಾಮಪತ್ರ ಕ್ರಮಬದ್ಧ
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಲ್ಲಿಕೆಯಾದ 14 ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ನಡೆಸಲಾಗಿದ್ದು, ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next