Advertisement

ದ.ಕ. ಜಿಲ್ಲೆಯ ಇಬ್ಬರಿಗೆ 6 ತಿಂಗಳ ಗಡೀಪಾರು ಶಿಕ್ಷೆ

10:46 AM Dec 31, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್‌ ತಿಂಗಳಲ್ಲಿ ನಡೆದ ಮತೀಯ ಗಲಭೆ ಹಾಗೂ ಅದರ ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು 6 ತಿಂಗಳು ಕಾಲ ಜಿಲ್ಲೆಯಿಂದ ಗಡೀಪಾರು ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಆದೇಶ ಹೊರಡಿಸಿದ್ದಾರೆ.

Advertisement

ಬಂಟ್ವಾಳ ತಾಲೂಕು ಕಲ್ಲಡ್ಕದ ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಶೆಟ್ಟಿ ಮತ್ತು ಇಬ್ರಾಹಿಂ ಖಲೀಲ… ಗಡೀಪಾರು ಶಿಕ್ಷೆಗೆ ಒಳಗಾದವರು. ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿ ಯಲ್ಲಿ ಇವರಿಬ್ಬರ ಮೇಲೆ ಹಲವು ಆರೋಪಗಳಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯ ರೌಡಿಶೀಟರ್‌ ಪಟ್ಟಿಯಲ್ಲಿದ್ದಾರೆ. ಜೂನ್‌ ತಿಂಗಳಲ್ಲಿ ಪರಸ್ಪರ ಹಲ್ಲೆ ಮಾಡಿಕೊಂಡು ಮತೀಯ ಗಲಭೆಗೆ ಕಾರಣರಾಗಿದ್ದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

ಇವರಿಬ್ಬರನ್ನು ಗಡೀಪಾರು ಮಾಡಿ ಆದೇಶ ಹೊರಡಿಸುವಂತೆ 2 ತಿಂಗಳ ಹಿಂದೆ ಅರ್ಜಿ ಸಲ್ಲಿಸಲಾಗಿತ್ತು. ಹಲವು ಬಾರಿ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಇದೇ ಸಂದರ್ಭ ಬಾಳ್ತಿಲ ನಿವಾಸಿ ಇಬ್ರಾಹಿಂ ಖಲೀಲ್‌ ಅವರಿಗೂ ಗಡೀಪಾರು ಆದೇಶವಾಗಿದ್ದು, ಅವರ ವಿರುದ್ಧ ತನಿಖೆ ಬಾಕಿ ಇರುವು ದರಿಂದ ಜಾರಿಗೊಳಿಸಿಲ್ಲ ಎಂದು ನಗರ ಠಾಣೆಯ ಮಾಹಿತಿ ತಿಳಿಸಿದೆ. ಖಲೀಲ್‌ ಅವರ ವಿರುದ್ಧ ಇರುವ ಎಂಟು ಪ್ರಕರಣಗಳಲ್ಲಿ ಕೊಲೆಯತ್ನ, ಕೋಮುದ್ವೇಷ ಪ್ರೇರಿತ ಹಲ್ಲೆ, ಧಾರ್ಮಿಕ ಅವಹೇಳನ, ಹಲ್ಲೆ, ಗುಂಪು ಬೆದರಿಕೆ, ಬಡಿದಾಟ, ಬೆದರಿಕೆ ಬಂಟ್ವಾಳ ನಗರ ಠಾಣೆಯಲ್ಲಿಯೇ ದಾಖಲಾಗಿದ್ದು, ತನಿಖೆಯ ಹಂತ ದಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದೂ ವಿರೋಧಿ ಅಜೆಂಡಾದ ಭಾಗ: ಸಂಸದ ನಳಿನ್‌ ಆರೋಪ 
ಬಂಟ್ವಾಳ: ಸರಕಾರದ ಹಿಂದೂ ವಿರೋಧಿ ಅಜೆಂಡಾದಂತೆ ಪೊಲೀಸ್‌ ಇಲಾಖೆಯನ್ನು ಬಳಸಿಕೊಂಡು ಹಿಂಜಾವೇ ಪ್ರಮುಖ ರತ್ನಾಕರ ಶೆಟ್ಟಿ ಅವರನ್ನು ಗಡೀಪಾರು ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ ಚುನಾವಣೆಯ ಸೋಲಿನ ಭೀತಿಯಿಂದ ಹೂಡಿರುವ ಯೋಜಿತ ಸಂಚು ಇದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಬಿ.ಸಿ. ರೋಡ್‌ನ‌ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿ ಸಿದ್ದಾರೆ. ಹಿಂದೂ ಕಾರ್ಯಕರ್ತರಿಗೆ ಬೆದರಿಕೆ, ಪೊಲೀಸರು ಮತ್ತು ಗೂಂಡಾಗಳ ಮೂಲಕ ದೈಹಿಕ ಹಿಂಸೆ, ಸುಳ್ಳು ಕೇಸು ದಾಖಲಿಸಿ ಅಮಾಯಕರ ಬಂಧನ ನಡೆಯುತ್ತಿದೆ. ರತ್ನಾಕರ ಶೆಟ್ಟಿ ಅವರ ಮೇಲಿನ ಪ್ರಕರಣ ಇತ್ಯರ್ಥವಾಗಿದ್ದು, ಅದನ್ನು ಸರಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸದೆ ಏಕಾಏಕಿ ಗಡೀಪಾರು ಮಾಡಿರುವುದು ಸರಿಯಲ್ಲ. ಕೇರಳದ ಕಮ್ಯುನಿಸ್ಟ್‌ ಗೂಂಡಾ ರಾಜ್ಯವನ್ನೂ ಮೀರಿಸಿದ ತಂತ್ರ ಇದಾಗಿದೆ ಎಂದರು.

Advertisement

ಸಚಿವ ರೈ ಪಕ್ಷದ ಹಿರಿಯ ನಾಯಕರನ್ನೇ ಅವಮಾನಿಸಿ ಕಣ್ಣೀರಿ ಳಿಸಿದ್ದಾರೆ. ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ನೀತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಮುಂದು ವರಿಸಿದ್ದಾರೆ. ಹಿಂದೂ ಸಮಾಜದ ಕೇಶವ ಪೂಜಾರಿ ಮೇಲೆ ನಡೆದ ಹತ್ಯಾ ಯತ್ನದ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಇದರ ಬಗ್ಗೆ ಪ್ರಶ್ನಿಸಬೇಕಿತ್ತು. ಸಚಿವರು ಮತ್ತು ನನ್ನ ವಿರುದ್ಧವೂ ಹಲವು ದೂರು, ಕೇಸು ಇದ್ದು, ನಮ್ಮನ್ನೂ ಗಡೀಪಾರು ಮಾಡಬಹುದಲ್ಲ ಎಂದು ನಳಿನ್‌ ಪ್ರಶ್ನಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನೇತಾರ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು, ಪಕ್ಷದ ಪದಾಧಿಕಾರಿ ಗಳಾದ ಸುಲೋಚನಾ ಜಿ.ಕೆ. ಭಟ್‌, ಕೆ.ಪದ್ಮನಾಭ ಕೊಟ್ಟಾರಿ, ಬಿ. ದೇವದಾಸ ಶೆಟ್ಟಿ, ಜಿ. ಆನಂದ, ರಾಮ್‌ದಾಸ್‌ ಬಂಟ್ವಾಳ ಉಪಸ್ಥಿತರಿದ್ದರು.

ವಿಹಿಂಪ, ಬಜರಂಗದಳ ಖಂಡನೆ: ರತ್ನಾಕರ ಶೆಟ್ಟಿ ಗಡೀಪಾರು ಕ್ರಮವನ್ನು ಜಿಲ್ಲಾ ವಿಹಿಂಪ ಹಾಗೂ ಬಜರಂಗ ದಳ ಖಂಡಿಸಿವೆ. ಈ ಆದೇಶವನ್ನು ತತ್‌ಕ್ಷಣ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ್‌ ಶೇಣವ ಹಾಗೂ ಬಜರಂಗ ದಳದ ಜಿಲ್ಲಾ ಸಂಯೋಜಕ ಭುಜಂಗ ಕುಲಾಲ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೆ.ಪಿ. ಆ್ಯಕ್ಟ್ ಪ್ರಕಾರ ಕ್ರಮ
ಕರ್ನಾಟಕ ಪೊಲೀಸ್‌ ಕಾಯ್ದೆ (ಕೆಪಿ ಆ್ಯಕ್ಟ್ ) ಪ್ರಕಾರ ಯಾವುದೇ ವ್ಯಕ್ತಿ ದುಷ್ಕೃತ್ಯ, ಸಮಾಜಘಾತಕ ಚಟುವಟಿಕೆ
ಗಳಲ್ಲಿ ಭಾಗಿಯಾಗಿದ್ದರೆ ಹಾಗೂ ಮತೀಯ ಗಲಭೆಗೆ ಪ್ರಚೋದನೆ ನೀಡುತ್ತಿದ್ದರೆ ಅಂಥವರನ್ನು ಗುರುತಿಸಿ, ಗಡೀಪಾರು
ಮಾಡಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಖಲೀಲ್‌ ಮತ್ತು ರತ್ನಾಕರ್‌ ಅವರನ್ನು ಗಡೀಪಾರು ಮಾಡಲು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಎರಡೂ ಕಡೆಗಳಿಂದಲೂ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಶುಕ್ರವಾರ
ಆದೇಶ ಹೊರಡಿಸಿದ್ದಾರೆ. ಶನಿವಾರ ಇಬ್ಬರನ್ನೂ ಜಿಲ್ಲೆಯಿಂದ ಗಡೀಪಾರು ಮಾಡಲಾಗಿದೆ. 
-ಸುಧೀರ್‌ ಕುಮಾರ್‌ ರೆಡ್ಡಿ, ಎಸ್‌ಪಿ, ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next