Advertisement

ದ.ಕ. ಜಿಲ್ಲೆಯಲ್ಲಿ ಶಾಲೆಗಳಿಗೆ ಗೋಧಿ ಪೂರೈಕೆ; ಉಡುಪಿಯಲ್ಲಿಲ್ಲ !

12:58 AM Dec 09, 2019 | Team Udayavani |

ಬಂಟ್ವಾಳ: ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯ ನೂತನ ಮೆನುವಿನಲ್ಲಿ ಕರಾವಳಿಗೆ ಅನುಕೂಲವಾಗುವ ಆಹಾರವಿಲ್ಲ ಎಂಬ ಅಪಸ್ವರ ಕೇಳಿಬಂದ ಬೆನ್ನಲ್ಲೇ ಉಡುಪಿ ಜಿಲ್ಲೆಯಲ್ಲಿ ಶಾಲೆಗಳಿಗೆ ಗೋಧಿ ಪೂರೈಕೆ ಸ್ಥಗಿತಗೊಳಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರೈಕೆ ಮಾಡಲಾಗುತ್ತಿದೆ.

Advertisement

ದ.ಕ.ದಲ್ಲಿ ಶಾಲೆಗಳಿಗೆ ಗೋಧಿ ಪೂರೈಕೆ ಮಾಡಲಾಗುತ್ತಿದ್ದು, ಪುಡಿ ಮಾಡುವುದಕ್ಕೆ ಅನುದಾನ ವಿಲ್ಲದೆ ನಾವೇನು ಮಾಡಲಿ ಎಂದು ಶಿಕ್ಷಕರು ಅಪಸ್ವರವೆತ್ತಿದ್ದಾರೆ. ಸರಕಾರವು ಅಕ್ಟೋಬರ್‌ನಲ್ಲಿ ಬಿಸಿಯೂಟದ ಮೆನು ಬದಲಿಸಿದ್ದು, ಪ್ರಸ್ತುತ ಅನುಷ್ಠಾನಗೊಳ್ಳುತ್ತಿದೆ.

ಕರಾವಳಿ ಜಿಲ್ಲೆಗಳಿಗೆ ಅನುಕೂಲವಾಗುವ ಆಹಾರವಲ್ಲ ಎಂಬ ಅಪವಾದದ ನಡುವೆಯೇ ಗೋಧಿ ಪುಡಿ ಮಾಡಲು ಅನುದಾನವಿಲ್ಲ ಎಂದು ಶಿಕ್ಷಕರು ಹೇಳುದ್ದಾರೆ. ಪ್ರಸ್ತುತ ಸರಕಾರವು ಅಕ್ಕಿ ಕಡಿಮೆ ಮಾಡಿ, ಗೋಧಿ ಪೂರೈಸುತ್ತಿದೆ.ಮೆನುವಿನ ಪ್ರಕಾರ ಪ್ರತಿ ಶನಿವಾರ ಗೋಧಿ ಯಿಂದ ವಾಂಗಿಬಾತ್‌, ಪೊಂಗಾಲ್‌, ಚಪಾತಿ ಸಾಗು, ಪೂರಿ ಸಾಗು ನೀಡಬೇಕಿದೆ. ಗೋಧಿ ಪುಡಿ ಮಾಡಲು ಅನುದಾನ ಇಲ್ಲ. ಈ ಕುರಿತು ಇಲಾಖೆಯ ಬಳಿ ಕೇಳಿದರೆ ಅದಕ್ಕಾಗಿ ಪ್ರತಿ ಮಗುವಿಗೆ ನೀಡುವ ಮೊತ್ತವನ್ನು 20 ಪೈಸೆ ಏರಿಕೆ ಮಾಡಲಾಗಿದೆ ಎಂಬ ಉತ್ತರ ಸಿಗುತ್ತದೆ.

ಪ್ರತಿ ಮಗುವಿಗೆ 20 ಪೈಸೆ ಏರಿಕೆ
ಸರಕಾರವು ಪ್ರತಿ ವಿದ್ಯಾರ್ಥಿಗೆ ಪರಿವರ್ತನ ವೆಚ್ಚ ನೀಡುತ್ತದೆ. ಇಲಾಖೆಯ ಪ್ರಕಾರ ಮೆನು ಬದಲಿಸಿದ ಬಳಿಕ 6ರಿಂದ 10ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ನೀಡುತ್ತಿದ್ದ 6.51 ರೂ.ಗಳನ್ನು 6.71 ರೂ.ಗೆ ಏರಿಸಲಾಗಿದೆ. 1ರಿಂದ 5ನೇ ತರಗತಿಯ ವಿದ್ಯಾರ್ಥಿಗೆ ನೀಡುವ 4.35 ರೂ.ಗಳನ್ನು 4.48 ರೂ.ಗಳಿಗೆ ಏರಿಸಲಾಗಿದೆ.

ಬೇಳೆಗೆ ನೀಡಲಾಗುವ 1.80 ರೂ. (1ರಿಂದ 5) ಮತ್ತು 2.66 ರೂ. (6ರಿಂದ 10)ಗಳನ್ನು ನೇರವಾಗಿ ಬೇಳೆ ಪೂರೈಸುವವರಿಗೆ ನೀಡಲಾಗು ತ್ತದೆ. ಎಣ್ಣೆಗೆ 0.38 ರೂ. (1ರಿಂದ 5) ಮತ್ತು 0.60 ರೂ. (6ರಿಂದ 10)ಗಳು, ಗ್ಯಾಸ್‌ಗೆ 0.71 ರೂ. (1ರಿಂದ 5) ಮತ್ತು 1.07 ರೂ. (6ರಿಂದ 10)ಗಳನ್ನು ನೀಡುತ್ತದೆ ಎಂಬುದು ಇಲಾಖೆ ನೀಡುವ ಮಾಹಿತಿ.

Advertisement

ಹೊಸ ಮೆನು ಜಾರಿಗೆ ತಂದ ಬಳಿಕ ಶಾಲೆಗಳಿಗೆ ಗೋಧಿ ಪೂರೈಕೆ ಮಾಡುತ್ತಿದ್ದೇವೆ. ಸರಕಾರದಿಂದ ನೀಡಲಾಗುವ ಪರಿವರ್ತನ ವೆಚ್ಚವನ್ನು ನವೆಂಬರ್‌ನಿಂದ ಏರಿಕೆ ಮಾಡಲಾಗಿದ್ದು, ಹೀಗಾಗಿ ಅದನ್ನು ಗೋಧಿ ಹುಡಿ ಮಾಡುವುದಕ್ಕೆ ಬಳಸಿಕೊಳ್ಳಬಹುದು. ಜತೆಗೆ ಎಸ್‌ಡಿಎಂಸಿಯ ಸಹಕಾರವನ್ನೂಪಡೆಯಬಹುದು.
– ರಾಜಲಕ್ಷ್ಮೀಶಿಕ್ಷಣಾಧಿಕಾರಿ, ಅಕ್ಷರ ದಾಸೋಹ, ದ.ಕ. ಜಿಲ್ಲೆ

ಉಡುಪಿಯಲ್ಲಿ ಗೋಧಿ ಪೂರೈಕೆ ಇಲ್ಲ
ಈ ಭಾಗದಲ್ಲಿ ಗೋಧಿಯ ಬಳಕೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆಯಲ್ಲಿ ಶಾಲೆಗಳಿಗೆ ಗೋಧಿ ಪೂರೈಕೆ ಮಾಡುತ್ತಿಲ್ಲ. ಬದಲಾಗಿ ಅಕ್ಕಿಯನ್ನೇ ಪೂರೈಸಿ ಅದರಿಂದಲೇ ವೈವಿಧ್ಯಮಯ ಆಹಾರ ನೀಡಲಾಗುತ್ತಿದೆ.
-ಪ್ರಭಾಕರ ಮಿತ್ಯಂತ
ಪ್ರಭಾರ ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ, ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next