ಬೆಂಗಳೂರು: ಜಾಮೀನಿನ ಮೇಲೆ ಬಿಡುಗಡೆಯಾಗಿ ಬೆಂಗಳೂರಿಗೆ ಮರಳಿದ ದಿನದಿಂದಲೇ ರಾಜಕೀಯವಾಗಿ ಸಕ್ರಿಯವಾಗಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಈಗ “ಅಧಿಕಾರ ಕೇಂದ್ರ’ವಾಗಿ ಮಾರ್ಪಟ್ಟಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮಂಗಳವಾರ ಅವರನ್ನು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಪ್ರಮುಖ ನಾಯಕರು ಭೇಟಿ ಮಾಡಿ ಚರ್ಚಿಸಿದ್ದಾರೆ, ಧೈರ್ಯ ತುಂಬಿದ್ದಾರೆ. ಕಾಂಗ್ರೆಸ್‌ನ ಘಟಾನುಘಟಿ ನಾಯಕರಾದ ಎಚ್.ಕೆ. ಪಾಟೀಲ್, ರಾಮಲಿಂಗಾ ರೆಡ್ಡಿ, ಕೆ.ಬಿ. ಕೋಳಿವಾಡ, ಮಾರ್ಗರೆಟ್ ಆಳ್ವ, ರಾಣಿ ಸತೀಶ್, ಶಾಸಕಿ ಸೌಮ್ಯಾ ರೆಡ್ಡಿ, ಜೆಡಿಎಸ್‌ನ ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಶಾಸಕ ಶಿವಲಿಂಗೇಗೌಡ, ಅನರ್ಹಗೊಂಡಿರುವ ಶಾಸಕ ನಾರಾಯಣ ಗೌಡ ಭೇಟಿಯಾದವರಲ್ಲಿ ಸೇರಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕತ್ವವನ್ನು ವಹಿಸಿ ಕೊಳ್ಳು ವಂತೆ ಹಲವು ನಾಯಕರು ಡಿಕೆಶಿಗೆ ಮನವಿ ಮಾಡಿದ್ದಾರೆ ಎಂದೂ ಹೇಳಲಾಗಿದೆ. ಇದಕ್ಕೆ ಪೂರಕ ವಾಗಿ ಕೆಪಿಸಿಸಿ ಹೊಣೆಯನ್ನು ಶಿವಕುಮಾರ್‌ಗೆ ವಹಿ ಸುವ ಮೂಲಕ ಮೂಲ ಕಾಂಗ್ರೆಸಿಗರಲ್ಲಿ ಶಕ್ತಿ, ಧೈರ್ಯ ತುಂಬುವ ಪ್ರಸ್ತಾವನೆಯೊಂದನ್ನು ಹೈಕಮಾಂಡ್ ಮುಂದಿಡಲು ಹಿರಿಯ ನಾಯಕರು ಮುಂದಾಗಿದ್ದಾರೆ. ಪಕ್ಷದಲ್ಲಿ ಬಿಗಿಪಟ್ಟನ್ನು ಮುಂದುವರಿಸಿರುವ ಸಿದ್ದರಾಮಯ್ಯ ಅವರನ್ನು ಮಟ್ಟಹಾಕುವ ಉದ್ದೇಶವಿದೆ ಎನ್ನಲಾಗಿದೆ.
ಡಿಕೆಶಿ ತಿಹಾರ್ ಜೈಲಿನಲ್ಲಿರುವಾಗಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಈಗ ರಾಜ್ಯ ಮತ್ತು ಕೇಂದ್ರ ನಾಯಕರು ಭೇಟಿ ಮಾಡು ತ್ತಿರುವುದು ಕಾಂಗ್ರೆಸ್‌ನಲ್ಲಿ ಮತ್ತೆ ಡಿ.ಕೆ. ಶಿವಕುಮಾರ್ ಪ್ರಭಾವಶಾಲಿಯಾಗುವ ಲಕ್ಷಣಗಳಿಗೆ ಸಾಕ್ಷಿ ಎಂಬಂತಿದೆ. ಹಳೆ ಮೈಸೂರು ಭಾಗದ ಕಾಂಗ್ರೆಸ್ ನಾಯಕರು ಡಿಕೆಶಿ ಅವರನ್ನು ಭೇಟಿಯಾಗುತ್ತಲೇ ಇದ್ದಾರೆ. ಇದು ಕಾಂಗ್ರೆಸ್ ವಲಯದಲ್ಲಿ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಜತೆಗೆ ಡಿಕೆಶಿ ಅವರು ಸಿದ್ಧಗಂಗಾ ಮಠ ಸಹಿತ ಹಲವೆಡೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಸ್ವ ಕ್ಷೇತ್ರ ಕನಕಪುರಕ್ಕೆ ಹೋಗಿ ಕಬ್ಟಾಳಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದು, ಅಲ್ಲಿ ಅದ್ದೂರಿ ಸ್ವಾಗತ ದೊರೆತಿದೆ.
ಸಿದ್ದುಗೆ ಎದುರಾಗಿ ಡಿಕೆಶಿ?
ವಿಪಕ್ಷ ನಾಯಕ ಸ್ಥಾನ ಸಿದ್ದರಾಮಯ್ಯ ಪಾಲಾಗಿರುವುದರಿಂದ ಮತ್ತೂಂದು ಮಹತ್ವದ ಹುದ್ದೆ ಕೆಪಿಸಿಸಿ ಅಧ್ಯಕ್ಷಗಿರಿಯನ್ನು ಡಿಕೆಶಿಗೆ ನೀಡಿದರೆ ಪಕ್ಷಕ್ಕೆ ಶಕ್ತಿ ಬರುತ್ತದೆ ಎಂಬ ವಾದದೊಂದಿಗೆ ಹೈಕಮಾಂಡ್ ಭೇಟಿಗೆ ಹಿರಿಯ ನಾಯಕರು ಸಜ್ಜಾಗಿದ್ದಾರೆ. ಕೆ.ಎಚ್. ಮುನಿಯಪ್ಪ, ಡಾ| ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್, ರಾಮಲಿಂಗಾ ರೆಡ್ಡಿ ಅವರ ತಂಡ ಈ ಪ್ರಯತ್ನಕ್ಕೆ ಕೈ ಹಾಕಿದ್ದು, ಬಿ.ಕೆ. ಹರಿಪ್ರಸಾದ್, ಅಹ್ಮದ್ ಪಟೇಲ್, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರ ಪರೋಕ್ಷ ಕುಮ್ಮಕ್ಕು ಇದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ನಾಯಕರು. ಅವರು ಯಾವಾಗಲೂ ಪಕ್ಷದಲ್ಲಿ ಸ್ಟ್ರಾಂಗೇ. ದಿಲ್ಲಿಯಲ್ಲಿ ಬಂಧನ ಮಾಡಿದಾಗ ಆಸ್ಪತ್ರೆಗೆ ಹೋಗಿದ್ದೆ. ಮೂರು ದಿನಗಳಿಂದ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಭೇಟಿಯಾಗಿದ್ದೇನೆ. ಯಾವುದೇ ರಾಜಕೀಯ ಮಾತನಾಡಿಲ್ಲ.
– ರಾಮಲಿಂಗಾ ರೆಡ್ಡಿ , ಮಾಜಿ ಸಚಿವ