ಹುಬ್ಬಳ್ಳಿ: ಕೇವಲ ಇಬ್ಬರು ಮೂವರಲ್ಲ. ಬಿಜೆಪಿಯಿಂದ ಅನೇಕ ನಾಯಕರು ಕಾಂಗ್ರೆಸ್ ಗೆ ಬರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಾದ ಶಿವರಾಮ ಹೆಬ್ಬಾರ್ ಹಾಗೂ ಸೋಮಶೇಖರ ಕಾಂಗ್ರೆಸ್ ಗೆ ಸೇರ್ಪಡೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿಯಲ್ಲಿನ ವೈಫಲ್ಯತೆಗೆ ಬೇಸತ್ತು ಹಲವರು ಕಾಂಗ್ರೆಸ್ ಗೆ ಬರಲು ಮುಂದಾಗಿದ್ದಾರೆ ಎಂದರು.
ಮಹದಾಯಿ ಕಾಮಗಾರಿಗೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉತ್ತರಿಸಬೇಕು. ಇದೇ ಮಹದಾಯಿ ನೀರು ತಂದೆ ಬಿಟ್ಟೆವು ಎನ್ನುವ ರೀತಿಯಲ್ಲಿ ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಮಾಡಿದ್ದರು. ರಸ್ತೆಯುದ್ದಕ್ಕೂ ಫ್ಲೆಕ್ಸ್ ಗಳನ್ನು ಹಾಕಿ ಶುಭ ಕೋರಿದ್ದರು. ಯಾಕೆ ಆಗಲಿಲ್ಲ ಎಂದು ಅವರನ್ನು ನೀವು ಗಟ್ಟಿಯಾಗಿ ಪ್ರಶ್ನಿಸಬೇಕು. ಯಾಕೆ ಇನ್ನೂ ಮಹದಾಯಿ ತೊಡಕುಗಳ ನಿವಾರಣೆ ಮಾಡುತ್ತಿಲ್ಲ..? ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದರೆ ಅವರಿಗೂ ಒಂದು ಗೌರವ. ಆದರೆ ಈ ಬಗ್ಗೆ ಜೋಶಿಯವರು ಚಕಾರ ಎತ್ತುತ್ತಿಲ್ಲ ಎಂದರು.
ಈ ತಿಂಗಳು ಕಳೆದ ಮೇಲೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಂದ ಪಶ್ಚಾತಾಪದ ಹೇಳಿಕೆಗಳು ಬರಲಿವೆ ಕಾದು ನೋಡಿ ಎಂದು ಶೆಟ್ಟರ್ ಅವರ ಫ್ಲಡ್ ಗೇಟ್ ಓಪನ್ ಆಗಲಿದೆ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ, ಯಾವಾಗ ಬೇಕಂತೆ ರಾಜೀನಾಮೆ ಕೊಡೋಣ. ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಶಾಲು ಹಾಕಿಕೊಂಡು ಪಾಕ್ ಪರ ಘೋಷಣೆ ಕೂಗಿದ್ದರು. ಅವರನ್ನು ಯಾಕೆ ಬಂಧನ ಮಾಡಲಿಲ್ಲ. ಬಿಜೆಪಿಯವರಿಗೆ ಬದ್ಧತೆ ಇದೆಯಾ? ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: Gas Cylinder ಸ್ಫೋಟ… ಒಂದೇ ಕುಟುಂಬದ ಐವರು ಮೃತ್ಯು, ನಾಲ್ವರ ಸ್ಥಿತಿ ಗಂಭೀರ