ಬೆಂಗಳೂರು: ಮಧ್ಯಪ್ರದೇಶ ಸರ್ಕಾರ ಪ್ರಹಸನ ವಿಷಯದಲ್ಲಿ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ತಮ್ಮ ಶಾಸಕರನ್ನು ವಾಪಸ್ ಕರೆದುಕೊಂಡು ಹೋಗಲು ಆಗಮಿಸಿರುವ ಮಧ್ಯಪ್ರದೇಶ ಶಿಕ್ಷಣ ಸಚಿವರ ನಿಯೋಗದೊಂದಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ, ಶಾಸಕರ ತಂದೆಗೆ ತಮ್ಮ ಮಗನ ಭೇಟಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಶುಕ್ರವಾರ ಡಿ.ಕೆ ಶಿವಕುಮಾರ್, ಮಧ್ಯಪ್ರದೇಶ ಶಿಕ್ಷಣ ಸಚಿವ ಜೀತು ಪಟ್ವಾರಿ ಜತೆ ನಾರಾಯಣ್ ಚೌಧರಿ ಅವರು, ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರನ್ನು ಭೇಟಿ ಮಾಡಿ, ತಮ್ಮ ಶಾಸಕ ಪುತ್ರ, ಮನೋಜ್ ಚೌಧರಿಯನ್ನು ಕೆಲವರು ಅಕ್ರಮವಾಗಿ ಕೂಡಿ ಹಾಕಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ.
ಶಾಸಕನಾಗಿರುವ ತಮ್ಮ ಪುತ್ರ ದೇವನಹಳ್ಳಿಯ ರೆಸಾರ್ಟ್‌ನಲ್ಲಿದ್ದು, ಆತನ ಭೇಟಿಗೆ ಅವಕಾಶ ಮಾಡಿಕೊಡಬೇಕು ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ನಾರಾಯಣ್ ಚೌಧರಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ. ತಮ್ಮ ಪುತ್ರನ ಭೇಟಿಯಾಗಲು ಸ್ಥಳೀಯ ಬಿಜೆಪಿ ಮುಖಂಡರು ಅಡ್ಡಿಪಡಿಸುತ್ತಿದ್ದಾರೆ. ಹೀಗಾಗಿ, ನಮಗೆ ಸೂಕ್ತ ರಕ್ಷಣೆ ನೀಡಬೇಕು. ಜತೆಗೆ, ಮಗನನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಎಡಿಜಿಪಿ ಜತೆ ಚರ್ಚೆ ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್, “ತಂದೆ ಹಾಗೂ ಶಾಸಕನ ಭೇಟಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಇದು ತಂದೆ-ಮಗನ ಸಂಬಂಧ. ಹೀಗಾಗಿ, ಅವರು ತಮ್ಮ ಮಗನ ಭೇಟಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಯಾರಿಂದಲೂ ಬೆದರಿಕೆ ಇಲ್ಲದೆ ಅವರ ಮಗನ ಭೇಟಿಗೆ ನಾರಾಯಣ್ ಅವರಿಗೆ ಪೊಲೀಸರು ಅವಕಾಶ ಮಾಡಿಕೊಡುವ ವಿಶ್ವಾಸವಿದೆ ಎಂದರು.
ಇನ್ನೊಂದೆಡೆ, ರೆಸಾರ್ಟ್‌ನಲ್ಲಿ ತಂಗಿದ್ದ ಕೆಲವು ಶಾಸಕರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮಧ್ಯಪ್ರದೇಶಕ್ಕೆ ತೆರಳಿದ್ದಾರೆ. ಮತ್ತೂಂದು ತಂಡದಲ್ಲಿ ತೆರಳುತ್ತಿದ್ದ 9 ಜನ ಶಾಸಕರಲ್ಲಿ ಐವರು ವಿಮಾನ ನಿಲ್ದಾಣದವರೆಗೂ ಹೋಗಿ ಮತ್ತೆ ರೆಸಾರ್ಟ್‌ಗೆ ವಾಪಸ್ ಆಗಿದ್ದಾರೆ. ಶುಕ್ರವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬೆಂಗಳೂರಿಗೆ ಆಗಮಿಸುವುದರಿಂದ ಅವರನ್ನು ಭೇಟಿ ಮಾಡಲು ಬೆಂಗಳೂರಿನಲ್ಲಿರುವ ಶಾಸಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.