Advertisement

ಡಿಕೆಶಿ ಪಟ್ಟ ತಪ್ಪಿಸಲು ಸಿದ್ದು ಹೊಸ ದಾಳ

10:21 AM Jan 18, 2020 | Team Udayavani |

ಬೆಂಗಳೂರು: ನಾಯಕತ್ವದ ವಿಷಯದಲ್ಲಿ ರಾಜ್ಯ ಕಾಂಗ್ರೆಸ್‌ನ ಎರಡು ಬಣಗಳ ನಡುವೆ ಶೀತಲ ಸಮರ ಜೋರಾಗಿದ್ದು, ಎರಡು ಹುದ್ದೆಗಳನ್ನು ವಿಭಜಿಸುವುದಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ. ಈ ಮೂಲಕ ಮೂಲ ಕಾಂಗ್ರೆಸ್‌ ನಾಯಕರ ಗೆಲುವಿನ ಸಂಭ್ರಮಕ್ಕೆ ತಡೆಯೊಡ್ಡುವ ಪ್ರಯತ್ನ ಮಾಡಿದ್ದಾರೆ.

Advertisement

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೆಸರು ಖಚಿತವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಅಸಮಾಧಾನಗೊಂಡಿದ್ದು, ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕನ ಸ್ಥಾನವನ್ನು ವಿಭಜಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದೆ. ಎರಡೂ ಹುದ್ದೆಗಳನ್ನು ವಿಭಜಿಸುವುದಾದರೆ ತಮಗೆ ಯಾವುದೇ ಸ್ಥಾನಮಾನ ಬೇಡ, ಬೇರೆಯರಿಗೆ ಎರಡೂ ಹುದ್ದೆಗಳನ್ನು ನೀಡಿ ಎನ್ನುವ ಮೂಲಕ ತಾವು ಪಕ್ಷದ ಚಟುವಟಿಕೆಗಳಿಂದ ತಟಸ್ಥರಾಗುತ್ತೇವೆ ಎಂಬ ಸಂದೇಶವನ್ನು ಪಕ್ಷದ ಹೈಕಮಾಂಡ್‌ಗೆ ಸಿದ್ದರಾಮಯ್ಯ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ಅವರ ದೆಹಲಿ ಭೇಟಿ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಡಿ.ಕೆ.ಶಿವಕುಮಾರ್‌ ಬದಲು ಎಂ.ಬಿ.ಪಾಟೀಲರಿಗೆ ನೀಡಬೇಕೆಂದು ಹೈಕಮಾಂಡ್‌ ನಾಯಕರ ಮುಂದೆ ಲಾಬಿ ಮಾಡಿದ್ದರು. ಅಲ್ಲದೇ ವಿಭಾಗವಾರು ಕಾರ್ಯಾಧ್ಯಕ್ಷರ ಹುದ್ದೆ ನೇಮಿಸಬೇಕೆಂದು ಹೈಕಮಾಂಡ್‌ ಮುಂದೆ ವಾದ ಮಂಡಿಸಿದ್ದರು.

ಗುರುವಾರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ಅವರ ಹೆಸರು ಅಂತಿಮಗೊಂಡಿದೆ ಎಂಬ ಸುದ್ದಿ ಹರಿದಾಡತೊಡಿಗಿದ ನಂತರ ಸಿದ್ದರಾಮಯ್ಯ ಬಣದ ನಾಯಕರು ಪ್ರತಿತಂತ್ರ ರೂಪಿಸಲು ಕಾರ್ಯಪ್ರವೃತ್ತವಾಯಿತು. ಶುಕ್ರವಾರ ಸಿದ್ದರಾಮಯ್ಯ ತಮ್ಮ ನಿವಾಸ ಕಾವೇರಿಯಲ್ಲಿ ತಮ್ಮ ಆಪ್ತರಾದ ಎಂ.ಬಿ.ಪಾಟೀಲ್‌, ಕೆ.ಜೆ. ಜಾರ್ಜ್‌, ಕೃಷ್ಣಬೈರೇಗೌಡ, ಜಮೀರ್‌ ಅಹಮದ್‌ ಅವರೊಂದಿಗೆ ಸುದೀರ್ಘ‌ ಚರ್ಚೆ ನಡೆಸಿ ಹೊಸ ದಾಳ ಉರುಳಿಸಿದ್ದಾರೆ.

ಹುದ್ದೆ ಇಬ್ಟಾಗಕ್ಕೆ ವಿರೋಧ:
ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕನ ಸ್ಥಾನ ಎರಡೂ ಹುದ್ದೆಗಳನ್ನು ಹೊಂದಿದ್ದು, ಉಪ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಹೈಕಮಾಂಡ್‌ ಇದುವರೆಗೂ ಅಂಗೀಕರಿಸಿಲ್ಲ. ಆದರೆ, ಸಿದ್ದರಾಮಯ್ಯ ವಿರೋಧಿ ಬಣದ ಪಕ್ಷದ ಹಿರಿಯ ನಾಯಕರು ಸಿದ್ದರಾಮಯ್ಯ ಅವರಿಗೆ ಒಂದೇ ಹುದ್ದೆ ನೀಡುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರಿರುವುದರಿಂದ ಎರಡೂ ಹುದ್ದೆಗಳನ್ನು ಪ್ರತ್ಯೇಕಿಸಲು ಹೈಕಮಾಂಡ್‌ ನಿರ್ಧರಿಸಿದೆ.

Advertisement

ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿ ಮುಂದುವರೆಸಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರನ್ನು ನೇಮಿಸಲು ಹೈಕಮಾಂಡ್‌ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಹೈಕಮಾಂಡ್‌ನ‌ ಈ ನಿರ್ಧಾರ ಸಿದ್ದರಾಮಯ್ಯ ಬಣದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಎರಡೂ ಹುದ್ದೆಗಳು ತಮ್ಮ ವಿರೋಧಿ ಬಣಕ್ಕೆ ಹೋಗುವುದರಿಂದ ತಮ್ಮ ಹಿಡಿತದಿಂದ ಎಲ್ಲ ಅಧಿಕಾರ ಕೈ ತಪ್ಪುತ್ತದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ, ಹುದ್ದೆ ವಿಭಜನೆ ಬಗ್ಗೆ ವಿರೋಧ ವ್ಯಕ್ತಪಡಿಸಿದಾರೆ ಎನ್ನಲಾಗುತ್ತಿದೆ.

ಶುಕ್ರವಾರ ತಮ್ಮ ಆಪ್ತರ ಜೊತೆ ನಡೆಸಿದ ಸಭೆಯಲ್ಲಿ ಹೈಕಮಾಂಡ್‌ ನಾಯಕರ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೈಕಮಾಂಡ್‌ ಎರಡೂ ಹುದ್ದೆಗಳನ್ನು ವಿಭಾಗಿಸುವುದಾದರೆ ತಮ್ಮನ್ನು ಎರಡೂ ಹುದ್ದೆಗಳಿಂದ ಬಿಡುಗಡೆ ಮಾಡುವಂತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಮೂಲಕ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೇ ವಿಭಾಗವಾರು ಹಾಗೂ ಜಾತಿ ಲೆಕ್ಕಾಚಾರದಲ್ಲಿ ಕಾರ್ಯಾಧ್ಯಕ್ಷರ ಹುದ್ದೆಗಳನ್ನು ನೇಮಕ ಮಾಡಲೇಬೇಕು ಎಂದು ಪಟ್ಟು ಹಿಡಿದಿರುವುದು ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಡಿ.ಕೆ.ಶಿವಕುಮಾರ್‌ ನೇಮಕ ಖಚಿತವಾಗಿದ್ದರೂ, ಅಧಿಕೃತ ಘೋಷಣೆ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಹಿರಿಯರ ಅಸಮಾಧಾನ:
ಪಕ್ಷದ ಹೈಕಮಾಂಡ್‌ ಈಗಾಗಲೇ ಯಾರಿಗೆ ಯಾವ ಜವಾಬ್ದಾರಿ ನೀಡಬೇಕೆಂದು ತೀರ್ಮಾನ ಮಾಡಿದ ಮೇಲೆ ಸಿದ್ದರಾಮಯ್ಯ ಬಣ ಹೊಸ ಕಾರ್ಯತಂತ್ರ ಅನುಸರಿಸುತ್ತಿರುವ ಬಗ್ಗೆ ಹಿರಿಯ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ. ಕೆಲವು ಹಿರಿಯ ನಾಯಕರು ಈ ಕುರಿತು ಅನೌಪಚಾರಿಕವಾಗಿ ಸಭೆ ನಡೆಸಿ, ಸಿದ್ದರಾಮಯ್ಯ ಅವರ ಬ್ಲಾಕ್‌ವೆುàಲ್‌ ತಂತ್ರಕ್ಕೆ ಹೈಕಮಾಂಡ್‌ ಮಣಿಯದಂತೆ ನೋಡಿಕೊಳ್ಳಬೇಕು ಎಂಬ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ವಿರುದ್ಧವೂ ಹಿರಿಯ ಕಾಂಗ್ರೆಸ್‌ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೆ.ಸಿ.ವೇಣುಗೋಪಾಲ್‌ ರಾಜ್ಯ ಕಾಂಗ್ರೆಸ್‌ನಲ್ಲಿನ ಸಮಸ್ಯೆಯನ್ನು ಬಗೆ ಹರಿಸುವ ಬದಲು ಸಮಸ್ಯೆ ಸೃಷ್ಟಿ ಮಾಡುತ್ತಿದ್ದು, ಸಿದ್ದರಾಮಯ್ಯ ಹೇಳಿದಂತೆ ಕೇಳುತ್ತಿರುವುದರಿಂದ ರಾಜ್ಯ ನಾಯಕತ್ವದ ಗೊಂದಲ ಮತ್ತಷ್ಟು ವಿಳಂಬವಾಗುತ್ತಿದೆ ಎಂದು ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹೈಕಮಾಂಡ್‌ಗೆ ಖರ್ಗೆ ಸಲಹೆ:
ಎರಡೂ ಬಣಗಳ ಪ್ರತಿಷ್ಠೆಯಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆಯಲು ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್‌ಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಿಭಾಗವಾರು ಕಾರ್ಯಾಧ್ಯಕ್ಷರ ನೇಮಕ ಮಾಡುವುದರಿಂದ ಪಕ್ಷದಲ್ಲಿ ಶಕ್ತಿ ಕೇಂದ್ರಗಳು ಹೆಚ್ಚಾಗಿ ಮತ್ತಷ್ಟು ಗೊಂದಲ ಉಂಟಾಗುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬೆಂಗಳೂರು ವಿಭಾಗಕ್ಕೆ ಸೇರಿದವರಿಗೆ ನೀಡಿ, ಮೈಸೂರು ವಿಭಾಗದ ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಈಶ್ವರ್‌ ಖಂಡ್ರೆ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ, ಮುಂಬೈ ಕರ್ನಾಟಕ ಭಾಗದವರಿಗೆ ಒಂದು ಕಾರ್ಯಾಧ್ಯಕ್ಷ ಹುದ್ದೆ ನೀಡದರೆ ಎಲ್ಲ ವಿಭಾಡಿಕೆಗಗಳಿಗೂ ಆದ್ಯತೆ ನೀಡಿದಂತಾಗುತ್ತದೆ ಎಂದು ಹೈಕಮಾಂಡ್‌ ನಾಯಕರಿಗೆ ಖರ್ಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next