ಹೊಸದಿಲ್ಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮಾ.31ರಿಂದ ಎ.6ರ ನಡುವೆ ದುಬಾೖ ಮತ್ತು ಅಬುಧಾಬಿಗೆ ಪ್ರಯಾಣ ಮಾಡಲು ದಿಲ್ಲಿ ಹೈಕೋರ್ಟ್ ಅನುಮತಿ ನೀಡಿದೆ.
ನ್ಯಾ| ಆಶಾ ಮೆನನ್ ಅವರನ್ನೊಳಗೊಂಡ ನ್ಯಾಯಪೀಠ ವಿದೇಶ ಪ್ರವಾಸಕ್ಕೆ ಅನುಮತಿ ನೀಡುವ ಅರ್ಜಿಯನ್ನು ಪುರಸ್ಕರಿಸಿ, “ಅರ್ಜಿ ದಾರರು ಅಬುಧಾಬಿ ಮತ್ತು ದುಬಾೖಗೆ ಪ್ರಯಾಣಿಸಬಹುದು. ಅಲ್ಲಿಂದ ವಾಪಸಾದ ಬಳಿಕ ತನಿಖಾಧಿಕಾರಿಗೆ ಸ್ವದೇಶಾಗಮನದ ಬಗ್ಗೆ ಮಾಹಿತಿ ನೀಡಬೇಕು’ ಎಂದು ಸ್ಪಷ್ಟ ಪಡಿಸಿತು.
ವಿದೇಶ ಪ್ರವಾಸಕ್ಕೆ ಅನುಮತಿ ಕೋರುವ ನಿಟ್ಟಿನಲ್ಲಿ ನ್ಯಾಯವಾದಿ ಮಾಯಾಂಕ್ ಜೈನ್ ಮೂಲಕ ಅರಿಕೆ ಮಾಡಿದ್ದರು. ದುಬಾೖಯಲ್ಲಿ ಆಯೋಜಿಸ ಲಾಗಿರುವ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ವಿಶೇಷ ಆಹ್ವಾನಿತರಾಗಿದ್ದಾರೆ. ಹೀಗಾಗಿ ಅನುಮತಿ ನೀಡಬೇಕು ಎಂದು ಕೋರಿಕೆ ಸಲ್ಲಿಸಿದ್ದರು.
ಇದನ್ನೂ ಓದಿ:ವಿಧಾನ ಮಂಡಲ ಅಧಿವೇಶನ ಅನಿರ್ಧಿಷ್ಠಾವಧಿಗೆ ಮುಂದೂಡಿಕೆ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ 2019ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸಂದರ್ಭ ಇವರಿಗೆ ವಿದೇಶ ಪ್ರವಾಸ ಮಾಡದಂತೆ ಷರತ್ತು ವಿಧಿಸಲಾಗಿತ್ತು.