Advertisement

“ಡಿಕೇ’ಸ್‌ ವರ್ಗಾವಣೆ ಕೇಳಿದ ಇಡಿ

06:00 AM Jun 22, 2018 | Team Udayavani |

ಬೆಂಗಳೂರು: ಜಲ ಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಹವಾಲ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಡಿ ದಾಖಲಿಸಿರುವ ಪ್ರಕರಣವನ್ನು ತಮಗೆ ವಹಿಸಬೇಕೆಂದು ಜಾರಿ ನಿರ್ದೇಶನಾಲಯ (ಇಡಿ) ಕೋರಿರುವುದು ಕುತೂಹಲ ಮೂಡಿಸಿದೆ.

Advertisement

ಆದರೆ ಇಡಿ ಮನವಿಯನ್ನು ಒಪ್ಪದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖಾ ಹಂತದಲ್ಲಿರುವ ಕಾರಣ ಪ್ರಕರಣ ವರ್ಗಾವಣೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಪ್ರಕರಣ ಸಂಬಂಧ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಲಯವು ಸಚಿವ ಡಿ.ಕೆ.ಶಿವಕುಮಾರ್‌ ಸೇರಿದಂತೆ ಇತರೆ ಆರೋಪಿಗಳು ಆ.2ರಂದು ಖುದ್ದು ಹಾಜರಿಗೆ ಸಮನ್ಸ್‌ ಜಾರಿ ಮಾಡಿದೆ. ಇಷ್ಟೆಲ್ಲಾ ಬೆಳವಣಿಗೆಯಾಗಿರುವ ಹಂತದಲ್ಲಿ ಪ್ರಕರಣವನ್ನು ಇಡಿ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗೆ ವಹಿಸಲು ಸಾಧ್ಯವಿಲ್ಲ ಎಂದು ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜತೆಗೆ ಬೇನಾಮಿ ಆಸ್ತಿ ಕುರಿತು ಐಟಿ ಇಲಾಖೆಯೇ ತನಿಖೆ ನಡೆಸಲು ಸಮರ್ಥವಾಗಿರುವಾಗ ಬೇರೆ ಸಂಸ್ಥೆಗೆ ವಹಿಸಲು ಸಾಧ್ಯವಿಲ್ಲ ಎಂದು ಇಡಿ ಅಧಿಕಾರಿಗಳಿಗೆ ಐಟಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿವೆ.

ಸ್ವಯಂ ಪ್ರೇರಿತ ದೂರು ಸಾಧ್ಯವಿಲ್ಲ
ಆಂತರಿಕ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿದರೂ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ಅವಕಾಶವಿಲ್ಲ. ನಿಯಮದ ಪ್ರಕಾರ ಬೇರೊಂದು ತನಿಖಾ ಸಂಸ್ಥೆ ಅಥವಾ ಖಚಿತ ಮೂಲಗಳಿಂದ ಬಂದ ದೂರುಗಳನ್ನಾಧರಿಸಿಯೇ ತನಿಖೆ ನಡೆಸಬೇಕು.

Advertisement

ಅಲ್ಲದೆ ಲೇವಾದೇವಿ ವ್ಯವಹಾರ ನಿಯಂತ್ರಣ ಕಾಯ್ದೆ (ಪಿಎಂಎಲ್‌ಎ) ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್ಇಎಂಎ) ಉಲ್ಲಂಘನೆ ಆರೋಪದಡಿ ದಾಖಲಾದ ಪ್ರಕರಣಗಳನ್ನಷ್ಟೇ ಇಡಿ ತನಿಖೆ ನಡೆಸಲು ಅವಕಾಶವಿದೆ. ಈ ಪ್ರಕರಣದಲ್ಲಿ ಹವಾಲ ವ್ಯವಹಾರವು ಪಿಎಂಎಲ್‌ಎ ಕಾಯ್ದೆ ಉಲ್ಲಂಘನೆ ವ್ಯಾಪ್ತಿಗೆ ಬರುವುದರಿಂದ ಇಡಿ ತನಿಖೆ ಆಸಕ್ತಿ ತೋರಿದೆ ಎಂದು ಮೂಲಗಳು ಖಚಿತ ಪಡಿಸಿವೆ.

2017ರಲ್ಲಿ ನಡೆದ ದಾಳಿ ವೇಳೆ ಪತ್ತೆಯಾದ ದಾಖಲೆ ಆಧರಿಸಿ ಈ ಹಿಂದೆ ಐಟಿ ಅಧಿಕಾರಿಗಳು ಶಿವಕುಮಾರ್‌, ಅವರ ವ್ಯವಹಾರದ ಪಾಲುದಾರರು ಹಾಗೂ ಆಪ್ತರ ವಿಚಾರಣೆ ನಡೆಸಿತ್ತು. ಎಲ್ಲ ಆರೋಪಿಗಳ ವಿಚಾರಣೆ ವೇಳೆ ನೀಡಿರುವ ಹೇಳಿಕೆಗೂ, ಅವರ ಮನೆ ಮತ್ತು ಕಚೇರಿಗಳಲ್ಲಿ ಪತ್ತೆಯಾದ ದಾಖಲೆಗಳಿಗೂ ತಾಳೆಯಾಗುತ್ತಿಲ್ಲ. ಈ ಮೂಲಕ ಸುಳ್ಳು ಮಾಹಿತಿ ನೀಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಐಟಿ ಅಧಿಕಾರಿಗಳು ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರಹಸ್ಯ ತನಿಖೆ ಆರಂಭ
ಈ ನಡುವೆ ಹವಾಲ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಂತರಿಕ ತನಿಖೆ ಆರಂಭಿಸಿದ್ದಾರೆ. ಯಾರ ಖಾತೆಯಿಂದ ಯಾರ ಖಾತೆಗೆ ಹಣ ವರ್ಗಾವಣೆಯಾಗಿದೆ? ಯಾವ ರೀತಿ ಹವಾಲ ವ್ಯವಹಾರ ನಡೆದಿದೆ. ಎಷ್ಟು ಕೋಟಿ ಮೊತ್ತದ ಹಣ ವರ್ಗಾವಣೆಯಾಗಿದೆ? ಎಂಬ ಬಗ್ಗೆ ಈಗಾಗಲೇ ತನಿಖೆ ಆರಂಭಿಸಿದೆ. ಜತೆಗೆ ಇದಕ್ಕೆ ಪೂರಕ ದಾಖಲೆಗಳು ಹಾಗೂ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿರುವ ದೂರಿನ ಪ್ರತಿ ಮತ್ತು ಆರೋಪಿಗಳ ಹೇಳಿಕೆಗಳ ಪ್ರತಿಯನ್ನು ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next