ಬೆಂಗಳೂರು: ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚು ಮಾಡಿ ಸರಕಾರ ಹಣ ಸಂಪಾದಿಸುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆರೋಪಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ಅವರು ಈ ಬಗ್ಗೆ ಪುರಾವೆ ಒದಗಿಸಲಿ ಇಲ್ಲವೇ ಬಹಿರಂಗ ಕ್ಷಮೆ ಕೇಳಲಿ ಎಂದು ಸವಾಲು ಹಾಕಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಹಿಡಿದು ಪಾಸಿಟಿವ್ ಎಂದು ತೋರಿಸಲಾಗುತ್ತಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಈ ರೀತಿ ಆಧಾರರಹಿತ ಆರೋಪ, ವದಂತಿಗಳನ್ನು ಅವರು ಹರಡಿದ್ದು, ಅವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ| ಸುಧಾಕರ್ ಅವರು ತಿಳಿಸಿದ್ದಾರೆ.
ಕೊರೊನಾ ಕೋವಿಡ್ ಸೋಂಕು ನಿಯಂತ್ರಣ, ಪರೀಕ್ಷೆ ಮೊದಲಾದ ವ್ಯವಸ್ಥೆಯಲ್ಲಿ ಯಾವುದೇ ತಪ್ಪು ಕಂಡುಬಂದರೆ ಪುರಾವೆ ಸಹಿತ ಸರಕಾರಕ್ಕೆ ದೂರು ನೀಡಬೇಕಿತ್ತು. ಅದರ ಬದಲು ರಾಜಕೀಯ ಲಾಭಕ್ಕಾಗಿ ಬೇಜವಾಬ್ದಾರಿಯಿಂದ ತಪ್ಪು ಸಂದೇಶ ನೀಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಾನು ಭಂಡತನ ಪ್ರದರ್ಶನ ಮಾಡಿಲ್ಲ, ಕ್ಷಮೆ ಕೇಳಿದ್ದೇನೆ: ರೇಣುಕಾಚಾರ್ಯ
ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಗೃಹ ಸಚಿವರು ಹಾಗೂ ನನ್ನನ್ನು ವೈಯಕ್ತಿಕವಾಗಿ ನಿಂದಿಸಿರುವುದನ್ನು ನಾವು ರಾಜಕೀಯವಾಗಿಯೇ ಎದುರಿಸುತ್ತೇವೆ. ಆದರೆ ಆರೋಗ್ಯ ತುರ್ತು ಪರಿಸ್ಥಿತಿ ಇರುವ ಸಂದರ್ಭ ವೈದ್ಯಕೀಯ ವಿಚಾರದಲ್ಲಿ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.