ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷರ ನೇಮಕ ವಿಳಂಬವಾದ ಹಿನ್ನೆಲೆಯಲ್ಲಿ ದೇವಸ್ಥಾನಗಳ ಯಾತ್ರೆ ಆರಂಭಿಸಿದ್ದಾರೆ.
ಮಧ್ಯಪ್ರದೇಶದ ಧಾತಿಯಾದ ಪಿತಾಂಬರ ಪೀಠದ ಬಾಗಲ್ಮುಖೀ ಮತ್ತು ಧಮವತಿ ದೇಗುಲದಲ್ಲಿ ವಿಶೇಷ ಹೋಮ ಮಾಡಿಸಿದ್ದಾರೆ. ಎರಡು ದಿನಗಳ ಯಾತ್ರೆ ಕೈಗೊಂಡಿದ್ದ ಅವರು, ಗುರುವಾರ ರಾತ್ರಿ ಅಥವಾ ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷರನ್ನಾಗಿ ತಮ್ಮನ್ನು ನೇಮಕ ಮಾಡುವುದು ಖಚಿತವಾಗಿದ್ದರೂ ಹೈಕಮಾಂಡ್ ಅಧಿಕೃತ ಘೋಷಣೆ ಮಾಡದೇ ವಿಳಂಬ ಮಾಡುತ್ತಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಷಕ್ಕಾಗಿ ತಾವು ಮಾಡಿದ ತ್ಯಾಗ ಮತ್ತು ಪಕ್ಷ ನಿಷ್ಠೆಗೆ ಬೆಲೆಯೇ ಇಲ್ಲದಂತಾಗಿದೆ ಎಂದು ತಮ್ಮ ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೆಪಿಸಿಸಿ ಅಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಲ್ಲಿ ಪಕ್ಷದಲ್ಲಿ ಎರಡು ಬಣಗಳ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿರುವುದರಿಂದ ಹೈಕಮಾಂಡ್ ಕೂಡ ತತ್‌ಕ್ಷಣಕ್ಕೆ ನೇಮಕ ಮಾಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಅಲ್ಲದೇ ದಿಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಚುನಾವಣೆ ಮುಗಿಯುವವರೆಗೂ ಹೈಕಮಾಂಡ್ ರಾಜ್ಯದ ಸಮಸ್ಯೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಹೀಗಾಗಿ ಅಧ್ಯಕ್ಷರ ನೇಮಕದ ವಿಳಂಬದಿಂದ ಬೇಸತ್ತಿರುವ ಡಿ.ಕೆ.ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.