ಬೆಂಗಳೂರು: ಭಾರತದ ಇತಿಹಾಸದಲ್ಲಿಯೇ ಇಂತಹ ನಿರುತ್ಸಾಹಿ ಬಜೆಟ್ ಕಂಡಿರಲಿಲ್ಲ. ಈ ಬಜೆಟ್ ನಿಂದ ಸಮಾಜದ ಯಾವ ವರ್ಗಕ್ಕೂ ಏನೂ ಪ್ರಯೋಜನವಿಲ್ಲ. ಇದು ಜನರಿಗೆ ವಿರುದ್ದವಾಗಿರುವ ಬಜೆಟ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟೀಕಿಸಿದ್ದಾರೆ.
ಕೇಂದ್ರ ಬಜೆಟ್ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಇವರು ಈ ವರ್ಷದ ಬಜೆಟ್ ನಲ್ಲಿ ರೈತರ ರಕ್ಷಣೆ ಮಾಡುವುದಕ್ಕೆ ಯಾವುದೇ ಯೋಜನೆ ಮಾಡಿಲ್ಲ, ಉದ್ಯೋಗ ಸೃಷ್ಟಿ ಮಾಡುವುದಕ್ಕೆ ಯಾವ ತರದ ಪ್ಲ್ಯಾನ್ ಕೂಡ ಇಲ್ಲ, ಯಾರು ಬ್ಯಾಂಕ್ ಗಳಿಂದ ತೊಂದರೆ ಅನುಭವಿಸುತ್ತಿದ್ದರು ಅಂಥವರಿಗೆ ಸರ್ಕಾರ ಯಾವ ಸಹಾಯವನ್ನೂ ಮಾಡಿಲ್ಲ, ಹೋದ ವರ್ಷ ಏನಿತ್ತೋ ಅದನ್ನೇ ಮತ್ತೆ ರಿಪೀಟ್ ಮಾಡಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:ಬಜೆಟ್ 2021: ಕೋವಿಡ್ ವಿರುದ್ಧ ಹೋರಾಟ, ಕೇಂದ್ರದಿಂದ ಆರೋಗ್ಯ ಕ್ಷೇತ್ರಕ್ಕೆ ಒತ್ತು
20 ಲಕ್ಷ ಕೋಟಿ ಯ ಬಜೆಟ್ ಯಾರು ಯಾರಿಗೆ ಎಷ್ಟೆಷ್ಟು ತಲುಪಿದೆ ಎಂದು ಹೇಳಿಲ್ಲ ಎಂದಿರುವ ಇವರು, ರೈಲ್ವೇಯಲ್ಲೂ ರಾಜ್ಯಕ್ಕೆ ಏನೂ ಕೊಟ್ಟಿಲ್ಲ, ಪೆಟ್ರೋಲ್ ಡೀಸೆಲ್ ಬೆಲೆ ಮೇಲೆ ಹೆಚ್ಚಿನ ಟ್ಯಾಕ್ಸ್ ಹಾಕುವ ಮೂಲಕ ಸಾಮಾನ್ಯ ಜನರ ಮೇಲೆ ದೊಡ್ಡ ಭಾರ ಹಾಕಿದ್ದಾರೆ. ಈ ವರ್ಷದ ಬಜೆಟ್ ನಿಂದ ಯಾವ ತರಹದ ಅನುಕೂಲ ಕೂಡ ಇಲ್ಲ ಎಂದು ಟೀಕಿಸಿದ್ದಾರೆ.
ಈ ಬಜೆಟ್ ನಿಂದಾಗಿ ಆರ್ಥಿಕ ಸಮಸ್ಯೆ ವೃದ್ದಿಯಾಗುವ ಸಾಧ್ಯತೆ ಇದ್ದು, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.