Advertisement
ಭದ್ರಾವತಿಯಲ್ಲಿ ಪ್ರಜಾಧ್ವನಿ ಸಮಾವೇಶಕ್ಕೂ ಮುನ್ನ ವಿಐಎಸ್ಎಲ್ ಕಾರ್ಮಿಕರ ಜತೆ ಚರ್ಚೆ ಮಾಡಿ ಅವರ ಅಳಲು ಕೇಳಿದ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಸರ್ಕಾರದ ನಿರ್ಲಕ್ಷ್ಯತನದ ಬಗ್ಗೆ ಕಿಡಿಕಾರಿದರು. ಅಲ್ಲದೆ ಈ ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಟ್ಟು ಪುನರಾರಂಭ ಮಾಡಬೇಕು ಎಂದು ಆಗ್ರಹಿಸಿದರು.
Related Articles
Advertisement
ಈ ಜಿಲ್ಲೆಯಲ್ಲಿ ಕೋಮುಗಲಭೆ ಮಾಡಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಅಶಾಂತಿ ಮೂಡಿಸಿ, ಸಂಜೆ ಆರು ಗಂಟೆಗೆ ಎಲ್ಲಾ ಅಂಗಡಿ ಮುಂಗಟ್ಟು ಮುಚ್ಚಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಬಂಡವಾಳ ಹೂಡಿಕೆ ಮಾಡಲು ಯಾರು ಮುಂದೆ ಬರುತ್ತಿಲ್ಲ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ, ಎಷ್ಟು ಯೋಜನೆ ಜಾರಿಯಾಗಿವೆ ಎಂದು ಯಡಿಯೂರಪ್ಪ, ಸಂಸದ ರಾಘವೇಂದ್ರ ಹಾಗೂ ಈಶ್ವರಪ್ಪ ಅವರು ಉತ್ತರಿಸಬೇಕು. ಇಲ್ಲಿನ ಗೃಹ ಸಚಿವರ ಹೇಳಿಕೆಗಳು, ಅವರ ಹಗರಣಗಳನ್ನು ಹೇಳುತ್ತಿದ್ದರೆ ಅದರ ಬಗ್ಗೆಯೇ ದೊಡ್ಡ ಚರ್ಚೆ ಮಾಡಬಹುದು. ಇನ್ನು ಈ ಭಾಗದ ಪ್ರಮುಖ ಬೆಳೆ ಅಡಕೆಗೆ ಭವಿಷ್ಯವಿಲ್ಲ, ಅದನ್ನು ಬೆಳೆಯುವುದು ಬಿಡಿ ಎನ್ನುತ್ತಿದ್ದಾರೆ. ಅವರು ರಾಜಕಾರಣ ಮಾಡುವುದನ್ನು ಬಿಡಲಿ, ಅಧಿಕಾರ ಯಾಕೆ ಬೇಕು? ಕೇಂದ್ರ ಸರ್ಕಾರ ವಿದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ ಸಾಕು. ಮಲೆನಾಡು ಮಾತ್ರವಲ್ಲ ರಾಜ್ಯದ ಬೇರೆ ಕಡೆಗಳಲ್ಲೂ ಬೆಳೆಯುತ್ತಿದ್ದಾರೆ. ಈ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಲಿಲ್ಲ, ಕೊಟ್ಟ ಮಾತನ್ನೂ ಉಳಿಸಿಕೊಳ್ಳಲಿಲ್ಲ.
ಈ ಕಾರ್ಖಾನೆ ಮುಚ್ಚಲು ಬಿಡುವುದಿಲ್ಲ, ಬಂಡವಾಳ ಹೂಡಿಕೆ ಮಾಡಿಸುವುದಾಗಿ ಮಾತು ಕೊಟ್ಟ ಮೇಲೆ ಸಂಸತ್ ಎದುರಿರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಿಯಾದರೂ ಕಾರ್ಖಾನೆ ಪುನಶ್ಚೇತನಕ್ಕೆ ಬಂಡವಾಳ ಹೂಡಿಕೆಯಾಗುವಂತೆ ಮಾಡಬೇಕು. ಅಧಿಕಾರ ಮಾತ್ರ ಬೇಕು, ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವುದಿಲ್ಲ ಎಂದರೆ ಹೇಗೆ? ಜನರ ನೋವು ಕೇಳಲು ನಾವು ಪ್ರಜಾಧ್ವನಿ ಯಾತ್ರೆ ಮೂಲಕ ಬಂದಿದ್ದೇವೆ. ವಿಐಎಸ್ ಎಲ್, ಎಂಪಿಎಂ ಕಾರ್ಮಿಕರ ಜತೆ ಮಾತನಾಡಿದ್ದೇನೆ.
ಜನ ಈ ಡಬಲ್ ಇಂಜಿನ ಸರ್ಕಾರಕ್ಕೆ ಅಧಿಕಾರ ಕೊಟ್ಟಾಗಿದೆ. ಯಡಿಯೂರಪ್ಪ ವಿಫಲರಾದರೂ ಎಂದು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಮೇಲೆ ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ನಾವು ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡುವುದಾಗಿ ಹೇಳಿದ್ದರು. ಈಗ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದಿದ್ದಾರೆ. ಆ ಮೂಲಕ ಬೊಮ್ಮಾಯಿ ಅವರ ಆಡಳಿತವೂ ವಿಫಲವಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ನಾಯಕತ್ವ ಇಲ್ಲದ ಬಿಜೆಪಿ ಈಗ ಮೋದಿ ಅವರ ಮುಂದಿಟ್ಟು ಚುನಾವಣೆ ಮಾಡುತ್ತಿದೆ.
ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ನಾಯಕರಿಲ್ಲ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅವರು ಗಾಂಧಿ ಕುಟುಂಬವನ್ನು ಗುರಿಯಾಗಿಸಿ ಏನೇಲ್ಲಾ ಆರೋಪ ಮಾಡುತ್ತಿದ್ದಾರೆ ಎಂದು ನೀವು ನೋಡುತ್ತಿದ್ದೀರಿ. ಮಲ್ಲಿಕಾರ್ಜುನ ಖರ್ಗೆ ಅವರು ಈಗ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರು ನಿನ್ನೆ ಮೊನ್ನೆ ಬಂದವರಲ್ಲ’ ಎಂದು ತಿಳಿಸಿದರು.
ಪಕ್ಷದ ಟಿಕೆಟ್ ವಿಚಾರವಾಗಿ ಕೇಳಿದಾಗ, ‘ಈಗಾಗಲೇ ಎರಡು ಸಭೆ ಮಾಡಿದ್ದೇವೆ. ಇನ್ನು ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಬೇಕು. ನಮ್ಮ ಪಕ್ಷದ ಪ್ರಕ್ರಿಯೆ ಮೂಲಕ ಟಿಕೆಟ್ ತೀರ್ಮಾನ ಮಾಡಲಾಗುವುದು’ ಎಂದು ತಿಳಿಸಿದರು.
ಅಕ್ರಮ ಆಸ್ತಿ ವಿಚಾರವಾಗಿ ಚಾರ್ಜ್ ಶೀಟ್ ಸಲ್ಲಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ವಿಚಾರವಾಗಿ ದಿನನಿತ್ಯ ನನಗೆ ನೊಟೀಸ್ ನೀಡುತ್ತಿದ್ದಾರೆ. ನಿನ್ನೆ ನನ್ನ ಮಗಳ ಕಾಲೇಜಿಗೆ ಹೋಗಿ ನೋಟೀಸ್ ನೀಡಿದ್ದು, ವಿದ್ಯಾರ್ಥಿಗಳು ಕಟ್ಟಿರುವ ಶುಲ್ಕದ ವಿವರ ಕೇಳಿದ್ದಾರೆ. ಈ ಬಗ್ಗೆ ನಾನೇನು ಹೇಳಲಿ? ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಅಂದರೆ ಅವರು ನನಗೆ ಹೇಗೆಲ್ಲಾ ಕಿರುಕುಳ ನೀಡುತ್ತಿದ್ದಾರೆ ನೀವೇ ಆಲೋಚಿಸಿ. ಇಡಿ ಅಧಿಕಾರಿಗಳ ಮುಂದೆ ಎಲ್ಲ ಉತ್ತರ ನೀಡಿದ್ದೇನೆ. ನ್ಯಾಷನಲ್ ಹೆರಾಲ್ಡ್ ವಿಚಾರವಾಗಿ ಉತ್ತರ ನೀಡಿದ್ದೇನೆ. ಆದರೂ 22 ರಂದು ಇಡಿ ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿದ್ದಾರೆ. ನಾನು ಪ್ರಜಾಧ್ವನಿ ಯಾತ್ರೆ ಮಾಡಲೋ ವಿಚಾರಣೆಗೆ ಹಾಜರಾಗಲೋ? ಆಡಳಿತ ಪಕ್ಷದವರು ಎಷ್ಟು ಸಾವಿರ ಕೋಟಿ ಲೂಟಿ ಹೊಡೆದರೂ ಕೇಳುವುದಿಲ್ಲ. ಈ ವಿಚಾರಣೆ ಏನಿದ್ದರೂ ವಿರೋಧ ಪಕ್ಷಗಳ ನಾಯಕರಿಗೆ ಮಾತ್ರ ಸೀಮಿತ’ ಎಂದು ತಿಳಿಸಿದರು.
ಕಾರ್ಖಾನೆ ನೌಕರರ ಸಂಕಷ್ಟ ಆಲಿಸಿದ ಶಿವಕುಮಾರ್
ಇದಕ್ಕೂ ಮುನ್ನ ಡಿ.ಕೆ. ಶಿವಕುಮಾರ್ ಅವರು ಕಾರ್ಖಾನೆ ನೌಕಕರಿಂದ ಕಾರ್ಖಾನೆಯ ಸ್ಥಿತಿಗತಿಗಳ ಬಗ್ಗೆ ಹಾಗೂ ಅವರ ಕಷ್ಟಗಳ ಬಗ್ಗೆ ಮಾಹಿತಿ ಪಡೆದರು.
ಯಡಿಯೂರಪ್ಪನವರು ಕೇಂದ್ರ ಸರ್ಕಾರದಿಂದ ಕಾರ್ಖಾನೆಗೆ 1 ಸಾವಿರ ಕೋಟಿ ರು. ಬಂಡವಾಳ ಹೂಡಿಕೆ ಮಾಡಿಸುವ ಭರವಸೆ ನೀಡಿದ್ದರು. ನಂತರ ಕೇಂದ್ರ ಸಚಿವ ತೋಮರ್ ಅವರು 6 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ಮಾತು ಕೊಟ್ಟಿದ್ದರು. ಸಿದ್ದರಾಮಯ್ಯ ಅವರ ಸರ್ಕಾರ ಈ ಕಾರ್ಖಾನೆ ಪುನರಾರಂಭಕ್ಕೆ 150 ಎಕರೆ ಗಣಿ ಭೂಮಿ ಮಂಜೂರು ಮಾಡಿದೆ. ಆದರೂ ಬಿಜೆಪಿ ನಾಯಕರು ಕೇಂದ್ರ ಸರ್ಕಾರದಿಂದ ಬಂಡವಾಳ ಹೂಡಿಕೆ ಮಾಡಿಸದೇ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ವಿವರಿಸಿದರು.
ಈ ಕಾರ್ಖಾನೆ ಮುಚ್ಚಿದರೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳಲಿವೆ. ಹೀಗಾಗಿ ಕೂಡಲೇ ಕಾರ್ಖಾನೆ ಮುಚ್ಚುವ ಕೇಂದ್ರ ಸರ್ಕಾರದ ತೀರ್ಮಾನವನ್ನು ತಡೆ ಹಿಡಿಯಬೇಕು ಎಂದು ತಮ್ಮ ಅಳಲು ತೋಡಿಕೊಂಡರು.
ಇದನ್ನೂ ಓದಿ: ದಾವಣಗೆರೆ: ಅಪರಿಚಿತ ವಾಹನ ಢಿಕ್ಕಿಯಾಗಿ ಚಿರತೆ ಸಾವು