Advertisement

ನಾವೂ ಹನುಮನ ಭಕ್ತರೇ… ನಿತ್ಯ ಹನುಮ ಚಾಲೀಸ ಪಠಣೆ ಮಾಡುತ್ತೇವೆ: ಡಿಕೆಶಿ

09:41 PM May 03, 2023 | Team Udayavani |

ಬೆಂಗಳೂರು: ‘ನಾವು ಕೂಡ ಹನುಮಂತನ ಭಕ್ತರು. ನಾವು ದಿನನಿತ್ಯ ಹನುಮ ಚಾಲೀಸ ಪಠಣೆ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ವಿರುದ್ಧ ಅನಗತ್ಯ ಟೀಕೆ ಮಾಡುವುದನ್ನು ಬಿಟ್ಟು, ಈ ರಾಜ್ಯಕ್ಕೆ ಡಬಲ್ ಇಂಜಿನ ಸರ್ಕಾರದ ಕೊಡುಗೆಗಳೇನು ಎಂಬುದನ್ನು ಹೇಳಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹರಿಹಾಯ್ದಿದ್ದಾರೆ.

Advertisement

ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಮೋದಿ ಅವರು ಪ್ರಧಾನಮಂತ್ರಿಗಳು. ರಾಜ್ಯದಲ್ಲಿ ತಮ್ಮ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತಿದೆ ಎಂದು ನಮ್ಮ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಾರೆ. ನಮ್ಮ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಿ ರಾಜ್ಯಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಹೇಳಲಿ. ಮೇಕೆದಾಟು, ಮಹದಾಯಿ ಯೋಜನೆ ಆರಂಭಿಸಲು ಏನಾದರೂ ಕ್ರಮ ಕೈಗೊಂಡಿದ್ದಾರಾ? ಬಿಜೆಪಿಯ ತಾಣ ಎಂದು ಹೇಳಿಕೊಳ್ಳುವ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಏನಾದರೂ ಕ್ರಮ ಕೈಗೊಂಡಿದ್ದಾರಾ? ಜಾಗತಿಕ ಬಂಡವಾಳ ಹೂಡಿಕೆಯಲ್ಲಿ ಯಾರಾದರೂ ಈ ಭಾಗದಲ್ಲಿ ಬಂಡವಾಳ ಹೂಡಿಕೆ ಮಾಡಿದರಾ? ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ 1 ಲಕ್ಷದವರೆಗೂ ಸಾಲ ಮನ್ನಾ ಮಾಡಿದ್ದಾರಾ? ಎಲ್ಲರ ಬ್ಯಾಂಕ್ ಖಾತೆಗೆ 15 ಲಕ್ಷ ನೀಡುತ್ತೇವೆ ಎಂದಿದ್ದರು ನೀಡಿದ್ದಾರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದಾರಾ? ಅವರು ಕೊಟ್ಟ ಭರವಸೆಗಳೆಲ್ಲವೂ ಹುಸಿಯಾಗಿವೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದರು. ಈಗ ಅವರದೇ ಸರ್ಕಾರ ಭ್ರಷ್ಟಾಚಾರ ಮಾಡಿದ್ದು, ಈಗ ಅದರ ಬಗ್ಗೆ ಮಾತನಾಡುತ್ತಿದ್ದಾರಾ? ಭ್ರಷ್ಟಾಚಾರ ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರಾ? ಅವರದೇ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಶಾಸಕರ ವಿರುದ್ಧವೂ ಕ್ರಮ ಕೈಗೊಳ್ಳಲಿಲ್ಲ. ಅವರು ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಸರ್ಕಾರದ ಭ್ರಷ್ಟಾಚಾರವನ್ನು ಮೌನವಾಗಿದ್ದುಕೊಂಡು ಒಪ್ಪಿಕೊಂಡಿದ್ದಾರೆ. ಬಿಜೆಪಿ ಅವರಿಗೆ ನಮ್ಮ ಗ್ಯಾರಂಟಿ ಯೋಜನೆಗಳಿಂದ ಆತಂಕ ಎದುರಾಗಿದೆ. ರಾಜ್ಯದ ಜನರಿಗೆ 200 ಯುನಿಟ್ ಉಚಿತ, ಮನೆಯೊಡತಿಗೆ 2 ಸಾವಿರ ಖಚಿತ, ಅನ್ನಭಾಗ್ಯದಲ್ಲಿ 10 ಕೆ.ಜಿ ಅಕ್ಕಿ ನಿಶ್ಚಿತ. ಯುವಕರಿಗೆ ನಿರುದ್ಯೋಗ ಭತ್ಯೆ ಹಾಗೂ ಮಹಿಳೆಯರಿಗೆ ಸಾರ್ವಜನಿಕ ಬಸ್ ಗಳಲ್ಲಿ ಉಚಿತ ಪ್ರಯಾಣ ಜಾರಿ ಮಾಡುತ್ತೇವೆ. ಇವುಗಳನ್ನು ಅರಗಿಸಿಕೊಳ್ಳಲಾಗದೆ ಒಂದಲ್ಲಾ ಒಂದು ವಿಚಾರವಾಗಿ ಗೊಂದಲ ಮೂಡಿಸುತ್ತಿದ್ದಾರೆ. ಅವರು ಏನೇ ಮಾಡಿದರೂ ಕಾಂಗ್ರೆಸ್ ಪಕ್ಷ 141 ಸ್ಥಾನಗಳಲ್ಲಿ ಗೆಲವು ಸಾಧಿಸಿ ಅಧಿಕಾರಕ್ಕೆ ಬಂದೇ ಬರಲಿದೆ’ ಎಂದು ತಿರುಗೇಟು ನೀಡಿದರು.

ಇನ್ನು ಬಜರಂಗದಳ ನಿಷೇಧದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ನಾವು ಆಂಜನೇಯನ ಭಕ್ತರು. ನಾವು ಈ ರಾಜ್ಯದ ಶಾಂತಿಯ ತೋಟ ಕದಡಬಾರದು, ಇಲ್ಲಿನ ಸೌಹಾರ್ದತೆ ನಾಶವಾಗಬಾರದು. ಬಜರಂಗದಳಕ್ಕೂ ಹನುಮಂತನಿಗೂ ಏನು ಸಂಬಂಧವಿದೆ? ಹನುಮಂತನೇ ಬೇರೆ, ಬಜರಂಗದಳವೇ ಬೇರೆ. ಬಜರಂಗದಳ ಕೇವಲ ಒಂದು ಸಂಘಟನೆ. ಆಂಜನೇಯನ ಹೆಸರು ಇಟ್ಟುಕೊಂಡ ಮಾತ್ರಕ್ಕೆ ಅವರು ಹನುಮಂತನೇ? ಅವರು ಕಾನೂನು ವ್ಯವಸ್ಥೆ ದುರ್ಬಳಕೆ ಮಾಡುತ್ತಿದ್ದರು. ನೈತಿಕ ಪೊಲೀಸ್ ಗಿರಿ ಮೂಲಕ ಕಾನೂನು ಉಲ್ಲಂಘನೆ ಮಾಡುತ್ತಿದ್ದರು. ಅವರು ಕಾನೂನು ಸುವ್ಯವಸ್ಥೆಯೊಳಗೆ ಇರಬೇಕು ಎಂಬುದು ನಮ್ಮ ಉದ್ದೇಶ. ನಮ್ಮ ಪ್ರಣಾಳಿಕೆ ಅಂಶವನ್ನು ನೀವು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ನಮ್ಮ ಅಂಶವನ್ನು ತಿರುಚಿ, ಉದ್ರೇಕಿಸಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಬಿಜೆಪಿಯವರು ಮುಂದಾಗಿದ್ದಾರೆ. ನಾವು ಹನುಮಂತನ ಭಕ್ತರು. ರಾಮನ ತಂದೆ ದಶರಥ ಮಹರಾಜನ ದೇವಾಲಯ ಎಲ್ಲೂ ಇಲ್ಲ. ಆದರೆ ರಾಮನ ಭಂಟ ಹನುಮಂತನ ದೇವಾಲಯ ಎಲ್ಲಾ ಹಳ್ಳಿಗಳಲ್ಲೂ ಇದೆ. ಕಾರಣ ಆಂಜನೇಯ ಸೇವಕ. ನಾವು ಆಂಜನೇಯನ ಪ್ರವೃತ್ತಿಯವರು. ಬಜರಂಗದಳ ಎಂದು ಹೆಸರಿಟ್ಟುಕೊಂಡ ಮಾತ್ರಕ್ಕೆ ಆಂಜನೇಯ ಎಂದು ಹೇಳಲು ಸಾಧ್ಯವಿಲ್ಲ. ಬಿಜೆಪಿಯವರು ನಾನು ಬಜರಂಗಿ ಎಂದು ಆಂದೋಲನ ಮಾಡುವ ಮುನ್ನ, ರಾಜ್ಯದ ಜನರ ಹೊಟ್ಟೆಗೆ ಏನು ಕೊಟ್ಟಿದ್ದಾರೆ? ರಾಜ್ಯದ ಯುವಕರಿಗೆ ಎಷ್ಟು ಉದ್ಯೋಗ ಕೊಟ್ಟಿದ್ದಾರೆ. ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ದಾರೆ? ಎಷ್ಟು ಬಂಡವಾಳ ಹೂಡಿಕೆ ತಂದಿದ್ದಾರೆ ಎಂದು ಹೇಳಲಿ. ಮೇಕೆದಾಟು ಯೋಜನೆಗಾಗಿ ಏನು ಮಾಡಿದ್ದಾರ? ಉದ್ಯೋಗ ಸೃಷ್ಟಿಗೆ ಯಾವ ನೀತಿ ತಂದಿದ್ದಾರೆ? ಕೋವಿಡ್ ಸಮಯದಲ್ಲಿನ ಹಗರಣಕ್ಕೆ ಉತ್ತರ ಏನು ಎಂದು ಹೇಳಲಿ. ಅವುಗಳನ್ನು ಹೇಳುವುದನ್ನು ಬಿಟ್ಟು ಜನರ ಗಮನ ಬೇರೆಡೆ ಸೆಳೆಯಲು ಇಂತಹ ಆಂದೋಲನ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Karnataka Election: ಅವರಾಡಿದ ಮಾತು ನನ್ನನ್ನು ತೀವ್ರವಾಗಿ ಘಾಸಿಗೊಳಿಸಿದೆ: ದೇವೇಗೌಡ

Advertisement
Advertisement

Udayavani is now on Telegram. Click here to join our channel and stay updated with the latest news.

Next