Advertisement
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಕಾವೇರಿ 5ನೇ ಹಂತದ ಯೋಜನೆ ಬುಧವಾರ ಲೋಕಾರ್ಪಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಡಿಸಿಎಂ ಹಲವು ವಿಷಯಗಳನ್ನು ಹಂಚಿಕೊಂಡರು.
Related Articles
Advertisement
ಕಾವೇರಿ ನೀರು ಪೂರೈಕೆಗೆ ಜಲಮಂಡಳಿ ಸಿದ್ಧವಿದ್ದರೂ ನೀರಿನ ಸಂಪರ್ಕ ಪಡೆದವರ ಸಂಖ್ಯೆ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂಬ ವರದಿಗಳಿವೆಯಲ್ಲಾ?
ಹೌದು, ಇದಕ್ಕೆ ಪ್ರತಿ ಕ್ಷೇತ್ರದಲ್ಲೂ ಸಂಪರ್ಕ ಅಭಿಯಾನ ಮಾಡುತ್ತೇವೆ, ಈಗಾಗಲೇ ಬೆಂಗಳೂರಿನಲ್ಲಿ 10.50 ಲಕ್ಷ ನೀರಿನ ಸಂಪರ್ಕಗಳಿವೆ. 110 ಹಳ್ಳಿಗಳ ಪ್ರದೇಶದಲ್ಲಿ 4 ರಿಂದ 5 ಲಕ್ಷ ಹೊಸ ಸಂಪರ್ಕಗಳಿಗೆ ಅವಕಾಶಗಳಿವೆ. ನಾನೇ ಖುದ್ದಾಗಿ ಪ್ರತಿ ಕ್ಷೇತ್ರಕ್ಕೂ ಹೋಗಿ ಕಾರ್ಯಕ್ರಮ ಮಾಡುವೆ, ಕಾನೂನುಬಾಹಿರವಾಗಿ ಸಂಪರ್ಕ ಪಡೆಯಲು ಅವಕಾಶ ಇಲ್ಲ. ಇದನ್ನು ಪ್ರತಿಯೊಬ್ಬ ನಾಗರಿಕರಿಗೂ ಮನದಟ್ಟು ಮಾಡಿಕೊಡಲಾಗುವುದು, ಪ್ರತಿ ಮನೆಯಲ್ಲೂ ಕಾನೂನುಬದ್ಧ ನೀರಿನ ಸಂಪರ್ಕ ಇರಬೇಕು.
ಮೇಕೆದಾಟು ಯೋಜನೆ ಸ್ಥಿತಿಗತಿ ಏನು?
ಮೇಕೆದಾಟುವಿನಲ್ಲೇ ಸಮತೋಲನ ಜಲಾಶಯ ನಿರ್ಮಿಸಬೇಕೆಂಬುದು ನಮ್ಮ ರಾಜ್ಯದ ಬೇಡಿಕೆ, ತಮಿಳುನಾಡಿನವರು ಹೇಳಿದಂತೆ ಎಲ್ಲೋ ಡ್ಯಾಂ ನಿರ್ಮಿಸಲು ಸಾಧ್ಯವಿಲ್ಲ, ಅವರು ಎಲ್ಲಿ ಬೇಕಾದರೂ ಮಾಡಿಕೊಳ್ಳಲಿ. ಬರಗಾಲ, ವಿಪರೀತ ಮಳೆ ಎರಡನ್ನೂ ನೋಡಿದ್ದೇವೆ. ಹೆಚ್ಚಾದ ನೀರು ಸಮುದ್ರದ ಪಾಲಾಗುತ್ತಿದೆ, ಇದು ಕೋರ್ಟ್‌ಗೆ ಅರ್ಥವಾಗುತ್ತದೆ ಎಂದು ಭಾವಿಸಿದ್ದೇನೆ. ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
193 ಕೆರೆಗಳಿಗೆ ನೀರು ತುಂಬಿಸಲು ಪೈಪ್‌ಲೈನ್:
ಭವಿಷ್ಯದಲ್ಲೂ ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಲಾಗುತ್ತಿದೆಯೇ ?
ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಈಗಾಗಲೇ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿರುವೆ. ಈಗಾಗಲೇ ನಗರಕ್ಕೆ 6 ಟಿಎಂಸಿ ನೀರು ಹೆಚ್ಚುವರಿ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಕಾವೇರಿ 6ನೇ ಹಂತದಲ್ಲಿ ಅದನ್ನು ಜಾರಿಗೊಳಿಸುತ್ತೇವೆ. ಈ ಮಧ್ಯೆ ನಗರದ ಅಂತರ್ಜಲ ವೃದ್ಧಿಗೆ ಕೆರೆ ಭರ್ತಿ ಯೋಜನೆ ಜಾರಿಗೊಳಿಸಲು ಮುಂದಾಗಿದ್ದೇವೆ. ಅಂದಾಜು 193 ಕೆರೆಗಳಿಗೆ ನೀರು ತುಂಬಿಸಲು ಪೈಪ್‌ಲೈನ್ ಮಾಡುವ ಹಂತದಲ್ಲಿದ್ದೇವೆ. ಮಳೆ ನೀರು ಸಹ ಕೆರೆಗಳಿಗೆ ಹೋಗಲು ಕಾಲುವೆಗಳನ್ನು ಮಾಡಲಿದ್ದೇವೆ. ಕೆರೆಗಳನ್ನು ಸಂರಕ್ಷಿಸಬೇಕಿದೆ. ಕಳೆದ ಬೇಸಿಗೆ ಸಾಕಷ್ಟು ಪಾಠ ಕಲಿಸಿದೆ, ಯಾವ ಕೆರೆಯಲ್ಲೂ ನೀರು ಇರಲಿಲ್ಲ. 7100 ಕೊಳವೆಬಾವಿಗಳು ಒಣಗಿ ಹೋಗಿದ್ದವು. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಮಳೆ ನೀರು ಕೊಯ್ಲಿಗೆ ಆದ್ಯತೆ ಕೊಡುತ್ತಿದ್ದೇವೆ. ಮಳೆ ಬಿದ್ದಷ್ಟು ಅಂತರ್ಜಲ ವೃದ್ಧಿಯಾಗುತ್ತದೆ, ಬೆಂಗಳೂರಿನ ಜನ ಎಷ್ಟೇ ಬೈಯ್ದುಕೊಂಡರೂ ಪರವಾಗಿಲ್ಲ ಮಳೆ ಬೀಳಬೇಕು. ಕೆಲವೊಂದು ಕಡೆ ಸ್ವಯಂಕೃತ ಅಪರಾಧಗಳಿಂದಾಗಿ ನಾಗರಿಕೆಗೆ ಸಣ್ಣಪುಟ್ಟ ತೊಂದರೆಗಳು ಆಗುತ್ತಿವೆ. ಕಾಲುವೆಗಳ ಅಕ್ಕಪಕ್ಕ ಜಾಗ ಬಿಡದೆ ಮನೆ ನಿರ್ಮಿಸಿಕೊಂಡಿರುವುದು ತಪ್ಪು, ಅಂತಹವರಿಗೆ ಅನುಕಂಪ ತೋರಿಸಬಾರದು.
ನೀರು ಸೋರಿಕೆ ಇಲ್ಲವೇ ಕಳ್ಳತನ ತಡೆಗೆ ಏನು ಕ್ರಮ ಕೈಗೊಳ್ಳಲಾಗುತ್ತಿದೆ?
ಕೆಲವು ಕಡೆ ವಸತಿ, ವಾಣಿಜ್ಯ ಹಾಗೂ ಕೈಗಾರಿಕಾ ಗ್ರಾಹಕರು ಮೀಟರ್ ಇಲ್ಲದೆ ನೀರು ಬಳಸುತ್ತಿದ್ದಾರೆ. ಇನ್ನು ಮುಂದೆ ಈ ರೀತಿಯ ಕಳ್ಳಾಟಕ್ಕೆ ಅವಕಾಶ ಇಲ್ಲ. ಯಾರು ನೀರು ಕದಿಯುತ್ತಿದ್ದಾರೆ ಎಂಬ ಮಾಹಿತಿಗೆ ಅನುಗುಣವಾಗಿ ಅದನ್ನು ನಿಲ್ಲಿಸುವ ವ್ಯವಸ್ಥೆ ತರಲಾಗುವುದು. ಕಾವೇರಿ ನೀರು ಬಳಸುತ್ತಿರುವ ಗ್ರಾಹಕರು ಸ್ವಯಂಪ್ರೇರಣೆಯಿಂದ ಮೀಟರ್ ಹಾಕಿಸಿಕೊಳ್ಳಬೇಕು.
– ಎಂ.ಎನ್.ಗುರುಮೂರ್ತಿ