ಹುಬ್ಬಳ್ಳಿ: ಪ್ರಧಾನಿ ರಾಜ್ಯಕ್ಕೆ ಬರುತ್ತಿರುವುದು ಸಂತಸ. ಆದರೆ ಅವರು ರಾಜ್ಯದ ಬಿಜೆಪಿ ಸರಕಾರದಲ್ಲಿ ನಡೆಯುತ್ತಿರುವ ಹಗರಣ ಮತ್ತು ಭ್ರಷ್ಟಾಚಾರಗಳ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೇವಲ ಭರವಸೆಗಳ ಮತ್ತು ಬಿ-ರಿಪೋರ್ಟ್ ಸರಕಾರವಾ
ಗಿದೆ. ಪಿಎಸ್‌ಐ, ಉಪ ಕುಲಪತಿಗಳು, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸಹಿತ ಎಲ್ಲ ಬಗೆಯ ನೇಮಕಾತಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎನ್ನುವ ಪ್ರಧಾನಿ ಇದಕ್ಕೆಲ್ಲ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಬೇಕಿದೆ ಎಂದರು.
ರಾಜ್ಯ ಬಿಜೆಪಿ ಸರಕಾರ ಪ್ರತಿ ಯೊಂದು ಕಾಮಗಾರಿಯಲ್ಲಿ ಕಮಿಷನ್ ದಂಧೆ ನಡೆಸುತ್ತಿದೆ. ಭ್ರಷ್ಟಾಚಾರ ಕುರಿತು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಪತ್ರಕ್ಕೆ ಉತ್ತರಿಸಿಲ್ಲ. ಏರಿಕೆಯಾದ ಗ್ಯಾಸ್ ಬೆಲೆಯನ್ನು ಇಳಿಸಿಲ್ಲ. ಯತ್ನಾಳ್ ಮತ್ತು ಮುರಗೇಶ ನಿರಾಣಿ ಹೇಳಿಕೆಗಳ ಬಗ್ಗೆ ಏನು ಕ್ರಮ ತೆಗೆದುಕೊಂಡಿದೆ ಎಂಬುದರ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಿದರೆ ಬಹಳ ಒಳ್ಳೆಯದು. ಕಳೆದ ಚುನಾವಣೆಯಲ್ಲಿ ತಾನು ನೀಡಿದ ಪ್ರಣಾಳಿಕೆ ಈಡೇರಿಸದ ಸರಕಾರ ಬಿಜೆಪಿಯದ್ದಾಗಿದೆ. ಚುನಾ ವಣೆ ಬಂದಿದೆ ಎಂದು ಮೋದಿ ರಾಜ್ಯಕ್ಕೆ ಮೇಲಿಂದ ಮೇಲೆ ಬರುತ್ತಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳು ತಾಂಡವಾಡುತ್ತಿವೆ. ಲಂಬಾಣಿ ಜನಕ್ಕೆ ಹಕ್ಕುಪತ್ರ ನೀಡಲು ಬಂದಿದ್ದಾರೆ. ಇದ ರಲ್ಲಿ ಏನೂ ವಿಶೇಷವಿಲ್ಲ ಎಂದರು.
ಚುನಾವಣೆಯ ಹೊಸ್ತಿಲಿನಲ್ಲಿ ಪ್ರಧಾನಿ ಮೋದಿ ಅವರಿಗೆ ಈಗ ಏಕಾಏಕಿ ಅಲ್ಪಸಂಖ್ಯಾಕರ ಮೇಲೆ ಪ್ರೀತಿ ಬಂದಿದೆ. ಚುನಾವಣೆಗಾಗಿ ಅವರ ಓಲೈಕೆ ಮಾಡಲು ಮುಂದಾಗಿದ್ದಾರೆ. ಹುಬ್ಬಳ್ಳಿ, ಬೆಂಗಳೂರು, ಶಿವಮೊಗ್ಗ, ಮಂಗಳೂರಿನಲ್ಲಿ ಅಲ್ಪಸಂಖ್ಯಾಕರ ಮೇಲೆ ದೌರ್ಜನ್ಯ ನಡೆಸಿದವರು, ಅವರ ಮೇಲೆ ಹಾಕಬಾರದ ಕೇಸ್ ಹಾಕಿ ಅಮಾಯಕರನ್ನು ಜೈಲಿಗೆ ಅಟ್ಟಿದವರು ಇವರು. ಬೇರೆಯವರಿಗೆ ತೊಂದರೆ ಕೊಟ್ಟು ಜೈಲಿಗೆ ಕಳುಹಿಸುವುದೇ ಅವರ ದೊಡ್ಡ ಸಾಧನೆಯಾಗಿದೆ ಎಂದರು.