ಬೆಂಗಳೂರು: ಕಾಂಗ್ರೆಸ್ ನಾಯಕರು ಇದುವರೆಗೂ ಪ್ರವಾಹದ ಬಗ್ಗೆ ಮಾತನಾಡಿಲ್ಲ. ಆದರೂ ಡಿಸಿಎಂ ಅಶ್ವಥ್ ನಾರಾಯಣ ಅವರು ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡರು ಎನ್ನುವ ರೀತಿ ಮಾತನಾಡುತ್ತಿದ್ದಾರೆ. ಅವರೇ ಮೈಮೇಲೆ ವಿವಾದ ಎಳೆದುಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.
ಅತಿವೃಷ್ಟಿ ಮತ್ತು ನೆರೆಯಂತಹ ಪ್ರಕೃತಿ ವಿಕೋಪದ ವೇಳೆಯಲ್ಲೂ ಪ್ರತಿಪಕ್ಷ ನಾಯಕರು ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಸರಕಾರಕ್ಕೆ ರಚನಾತ್ಮಕವಾಗಿ ಸಲಹೆ ನೀಡುವುದು ಬಿಟ್ಟು ಕೇವಲ ರಾಜಕೀಯ ಮಾಡಿಕೊಂಡು ಕಾಲಹರಣ ಮಾಡುವುದು ಎಷ್ಟು ಸರಿ ಎಂಬ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರ ಆರೋಪಕ್ಕೆ ಪ್ರತಿಕ್ರಯಿಸಿ ಅವರು ಮಾತನಾಡಿದರು.
ಕೆಪಿಸಿಸಿ ನೆರೆ ಬಗ್ಗೆ ಅಧ್ಯಯನ ಮಾಡಲು ಹಾಲಿ ಮಾಜಿ ಶಾಸಕರನ್ನು ಒಳಗೊಂಡ ಒಂದು ತಂಡ ರಚನೆ ಮಾಡುತ್ತೇವೆ. ಸರ್ಕಾರ ನೆರೆಗೆ ಏನು ಮಾಡಿದೆ, ನಾವು ಏನು ಮಾಡಬೇಕು ಎನ್ನುವ ರಿಪೋರ್ಟ್ ಕೊಡಲು ಹೇಳುತ್ತೇವೆ ಎಂದರು.
ಕೆಲ ಸಚಿವರು ಇನ್ನೂ ಜಿಲ್ಲೆಗಳಿಗೆ ಹೋಗಿಲ್ಲ ಅವರು ಬೆಂಗಳೂರಿನಲ್ಲಿ ಮಲಗಲಿ ಬಿಡಿ ಎಂದು ಸರ್ಕಾರದ ಸಚಿವರ ವಿರುದ್ಧ ಡಿಕೆ ಶಿವಕುಮಾರ್ ಕಿಡಿಕಾರಿದರು.
ಡಿಸಿಎಂ ಅಶ್ವಥ್ ನಾರಾಯಣ್ ಚೀಫ್ ಮಿನಿಸ್ಟರ್ ಅವರನ್ನೇ ಡಿಗ್ರೇಡ್ ಮಾಡಲು ಹೊರಟಿದ್ದಾರೆ. ಅವರು ಏನು ಮಾತನಾಡಿದರೂ ಎಲ್ಲ ಮಾಹಿತಿ ನಮಗೆ ಸಿಗುತ್ತದೆ. ನಾವು ಯಾಕೆ ಅವರ ವಿರುದ್ಧ ಆರೋಪ ಮಾಡೋಣ, ನಮಗೆ ಯಾರು ಏನು ಮಾತನಾಡಿದರು ಎಲ್ಲಾ ಗೊತ್ತಾಗುತ್ತೆ, ಬಿಜೆಪಿಯವರು ಏನು ಮಾತನಾಡಿದರು, ನಮ್ಮವರು ಏನು ಮಾತನಾಡಿದರು ಎಲ್ಲವೂ ಗೊತ್ತಾಗುತ್ತದೆ ಎಂದರು.