ಕೊಪ್ಪಳ: ಕಾಂಗ್ರೆಸ್ ನ ಪ್ರಬಲ ನಾಯಕರ ವಿರುದ್ಧ ಬಿಜೆಪಿ ತನಿಖೆ ಅಸ್ತ್ರ ಪ್ರಯೋಗ ಮಾಡ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಆರೋಪಿಸಿದರು.
ತಾಲ್ಲೂಕಿನ ಬಸಾಪೂರ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ಯಾರಿಂದ ಬಿಜೆಪಿ ತೊಂದರೆಯಾಗುತ್ತದೆಯೋ ಅವರ ಮೇಲೆ ಈ ಪ್ರಯೋಗ ನಡೆಯುತ್ತದೆ. ನಾನು, ಚಿದಂಬರಂ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹೀಗೆ ಎಲ್ಲರ ಮೇಲೆ ತನಿಖೆ ಮಾಡುತ್ತಿದ್ದಾರೆ. ಇಡಿ ಬಳಸಿಕೊಂಡು ನಮಗೆ ಕೊಡಬಾರದ ಕಿರುಕುಳ ಕೊಡುತ್ತಿದ್ದಾರೆ. ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದೆ. ನನಗೆ 60 ದಿನದ ಒಳಗೆ ಬೇಲ್ ಸಿಕ್ಕಿದೆ, ಆಗಲೇ ಚಾರ್ಜ್ ಶೀಟ್ ಹಾಕಬಹುದಿತ್ತು. ರಾಜಕೀಯ ಉದ್ದೇಶದಿಂದ ಹಾಕಿದ ಕೇಸ್ ಗಳು ಇವೆಲ್ಲ. ಇವನ್ನೆಲ್ಲ ನಾವು ಎದುರಿಸುತ್ತೇವೆ ಎಂದರು.
ಮೇಲಿಂದ ಮೇಲೆ ನೋಟೀಸ್, ಸಮನ್ಸ್ ಕೊಡುತ್ತಿದ್ದಾರೆ. ಚುನಾವಣೆ ಸಮಯಕ್ಕೆ ತನಿಖೆ ಚುರುಕು ಮಾಡಿದ್ದಾರೆ. ದಿನವೂ ನನಗೆ, ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ನೋಟಿಸ್ ಬರುತ್ತಿದೆ. ಎಲ್ಲ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಇದನ್ನೂ ಓದಿ:ಸೈದ್ಧಾಂತಿಕ ವೈರುಧ್ಯದ ಪಕ್ಷಗಳ ಸರ್ಕಾರದ ಪತನಕ್ಕೆ ಬಿಜೆಪಿ ಹೊಣೆಯಲ್ಲ: ಸಚಿವ ನಿರಾಣಿ
ಮಹಾರಾಷ್ಟ್ರ ರಾಜಕೀಯದ ವಿಚಾರವಾಗಿ ಮಾತನಾಡಿ, ಇವೆಲ್ಲ ನಾಟಕ, ಬಿಜೆಪಿಯ ನಾಟಕ. ಬಿಜೆಪಿಗರೇ ಇದನ್ನು ಮಾಡುತ್ತಿದ್ದಾರೆ. ಈ ಹಿಂದೆಯೇ ಸರ್ಕಾರ ಮಾಡುತ್ತೇವೆಂದು ಮುರುಗೇಶ ನಿರಾಣಿ ಹೇಳಿದ್ದರು. ಯಾರು ಯಾರಿಗೆ ಕಮಿಷನ್ ಕೊಡುತ್ತಾರೋ ಗೊತ್ತಿಲ್ಲ. ಒಟ್ಟು ಶೇ. 40 ರಷ್ಟು ಕಮಿಷನ್ ಹೋಗುತ್ತಿದೆ. ಪಿಎಸ್ಐ ಹಗರಣದಲ್ಲಿ ಪ್ರಮುಖ ಆರೋಪಿಗಳನ್ನು ಅರೆಸ್ಟ್ ಮಾಡಿಲ್ಲ. ಖಾನಾವಳಿಯಲ್ಲಿ ಇರುವಂತೆ ಎಲ್ಲ ಹುದ್ದೆಗೆ, ವರ್ಗಾವಣೆಗೆ ಬೋರ್ಡ್ ಹಾಕಿಕೊಂಡು ಕುಳಿತಿದ್ದಾರೆ. ಈ ಸರ್ಕಾರ ಕಿತ್ತು ಹಾಕಲು ಜನ ತೀರ್ಮಾನ ಮಾಡಿದ್ದಾರೆ ಎಂದರು.
ಅಗ್ನಿಪಥಗೆ ಯೋಜನೆಗೆ ನೋಟಿಫಿಕೇಷನ್ ವಿಚಾರವಾಗಿ ಮಾತನಾಡಿ, ಯುವಕರನ್ನು ಬಿಜೆಪಿ ಕಚೇರಿಗೆ ಸೆಕ್ಯೂರಿಟಿ ಗಾರ್ಡ್ ಮಾಡಲು ಹೊರಟಿದ್ದಾರೆ. ಮೊದಲು ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಅಗ್ನಿ ವೀರರಾಗಿ ಮಾಡಿ ಎಂದು ಡಿಕೆ ಶಿವಕುಮಾರ್ ಸವಾಲೆಸೆದರು.