ಶಿವಮೊಗ್ಗ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೇಶದ ಸಂಸ್ಕೃತಿ, ಧರ್ಮದ ಪರ ಕೆಲಸ ಮಾಡುವ ಸಾಧು ಸಂತರ ಬಗ್ಗೆ ಮಾತನಾಡಿದ್ದಾರೆ. ಅವರ ರಾಜಕೀಯ ತೆವಲು ತೀರಿಸಿಕೊಳ್ಳಲು ಹೀಗೆ ಮಾತನಾಡಿದ್ದಾರೆ. ಹಿಜಾಬ್ ಮತ್ತು ಸಾಧು ಸಂತರ ವಸ್ತ್ರದ ಹೋಲಿಕೆ ಅಕ್ಷಮ್ಯ ಅಪರಾಧ. ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ನಾನು ಹೇಳಲ್ಲ. ಅವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಗೊತ್ತು ಅವರು ಬಹಳ ಭಂಡರು. ಯಾವ ಕಾರಣಕ್ಕೂ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗ ಬಾಯಿ ಬಿಡಬೇಕು. ಸಿದ್ದರಾಮಯ್ಯ ಹೇಳಿದ್ದು, ಸರಿನಾ ಮೊದಲು ಹೇಳಿ? ತಪ್ಪಾದರೇ ಪಕ್ಷದಿಂದ ವಜಾ ಮಾಡಿ. ಹಾಗೆ ಸಮಸ್ಯೆಯಿದ್ದರೆ ಸಿದ್ದರಾಮಯ್ಯ ಬಗ್ಗೆ ಸೋನಿಯಾ, ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯಲಿ ಎಂದರು.
ಸಿದ್ದರಾಮಯ್ಯನವರದು ಹಿಂದೂ ವಿರೋಧಿ ನಡವಳಿಕೆ. ಎಲ್ಲಿಯವರೆಗೆ ನೀವು ಮುಸ್ಲಿಂರನ್ನು ಸಂತೈಸಿಕೊಂಡೇ ಹೋಗುತ್ತೀರಿ. ಬೇರೆ ಕಡೆ ಎಲ್ಲರೂ ಅಣ್ಣ- ತಮ್ಮಂದಿರಂತೆ ಒಟ್ಟಾಗಿ ಹೋಗಬೇಕು ಎನ್ನುತ್ತಿರಾ? ಕೋರ್ಟ್ ಆದೇಶವಿದ್ದರೂ ಶಿಕ್ಷಣ ಬಿಡುತ್ತೇವೆ, ಧರ್ಮ ಬಿಡಲ್ಲ ಎಂದು ಮಾತನಾಡುತ್ತಾರೆ. ತೀರ್ಪಿನ ನಂತರವೂ ಪ್ರತಿಭಟನೆ ಮಾಡುತ್ತಾರೆ. ಬಂದ್ ಮಾಡ್ತಾರೆ. ನ್ಯಾಯಾಧೀಶರಿಗೆ ಬೆದರಿಕೆ ಹಾಕುತ್ತಾರೆ. ಅಂತವರ ಪರ ನಿಲ್ಲುವ ನೀಚ ರಾಜಕಾರಣವನ್ನು ರಾಜ್ಯದ ಜನರು ಸಹಿಸಲ್ಲ ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ:ವಿವಾದ ಮಾಡುತ್ತೀರಾ?:ಮಾಧ್ಯಮದವರ ಮೇಲೆ ಗರಂ ಆದ ಸಿದ್ದರಾಮಯ್ಯ
ಕೋರ್ಟ್ ತೀರ್ಪಿನ ವಿರುದ್ಧ ನಿಂತವರ ಪರ ಸಿದ್ದರಾಮಯ್ಯ ಹೇಳಿಕೆ ನೀಡುತ್ತಾರೆ. ಸಿದ್ದರಾಮಯ್ಯ ಹೇಳಿಕೆಗಳಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗುತ್ತದೆ. ಸಿದ್ದರಾಮಯ್ಯ ಹೇಳಿಕೆಗಳನ್ನು ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕರೂ ಪುರಸ್ಕರಿಸಿಲ್ಲ. ಇದು ಕಾಂಗ್ರೆಸ್ ನಾಯಕರಿಗೂ ಸಹಮತವಿಲ್ಲ ಎಂದರು.
ದೇವಾಲಯ- ಜಾತ್ರೆಯಲ್ಲಿ ಹಿಂದೂಯೇತರಿಗೆ ಆರ್ಥಿಕ ಬಹಿಷ್ಕಾರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ನಾವು ಮಾಡಿದ ಕಾಯ್ದೆಯಲ್ಲ. 2002 ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಅದೇಶವಾಗಿದೆ. ಹಾಗಿದ್ದರೆ ನಾವು ಮಾಡಿಲ್ಲವೆಂದು ಅವರು ಬಹಿರಂಗವಾಗಿ ಹೇಳಲಿ. ಸರ್ಕಾರದ ನಿಯಮಾವಳಿಯಂತೆ ರಾಜ್ಯದ ಎಲ್ಲಾ ಕಡೆಯೂ ಅಗುತ್ತದೆ ಎಂದು ಮುಸ್ಲಿಂರಿಗೆ ಹಿಂದೂ ದೇಗುಲದ ಆವರಣದಲ್ಲಿ ನಿಷೇಧಕ್ಕೆ ಸಮರ್ಥನೆ ಮಾಡಿಕೊಂಡರು.