Advertisement
ತಮ್ಮನ್ನು ಬಿಟ್ಟು ಬೇರೆಯವರಿಗೆ ಪಟ್ಟ ಕಟ್ಟುವಂತಿಲ್ಲ ಎಂಬ ಹಠದೊಂದಿಗೆ ಶಾಸಕರ ಜತೆಗೆ ದಿಲ್ಲಿಗೆ ತಲುಪಿರುವ ಸಿದ್ದರಾಮಯ್ಯ ವರಿಷ್ಠರ ಮನವೊಲಿ ಸುವ ತಂತ್ರಗಾರಿಕೆ ನಡೆಸಿದ್ದಾರೆ. ಇನ್ನೊಂದೆಡೆ, ಸಿಎಂ ಪಟ್ಟ ಬಿಟ್ಟು ಬೇರೇನು ಕೊಟ್ಟರೂ ಒಲ್ಲೆ ಎಂಬ ಸಂದೇಶ ರವಾನಿಸಿರುವ ಶಿವಕುಮಾರ್ ಬೆಂಗಳೂರಿನಲ್ಲೇ ಉಳಿದುಕೊಳ್ಳುವ ಮೂಲಕ “ಅಸಹಕಾರ’ದ ಬಾವುಟ ಹಾರಿಸಿದ್ದಾರೆ.
ಇಬ್ಬರಿಗೂ ಸಮ್ಮತವಾಗುವ ಸೂತ್ರ ರೂಪಿಸಲು ಚಿಂತನೆ ನಡೆಸಿದ್ದ ವರಿಷ್ಠರು, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಇಬ್ಬರಿಗೂ ಹೊಸದಿಲ್ಲಿಗೆ ಬರುವಂತೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗ ಶಾಸಕರ ಜತೆಗೆ ಸಭೆ ನಡೆಸಿದ ಸಿದ್ದರಾಮಯ್ಯ ಆಯ್ದ ಕೆಲವರ ಜತೆಗೆ ಹೊಸದಿಲ್ಲಿ ತಲುಪಿದ್ದರು. ಆದರೆ ಮುಖ್ಯಮಂತ್ರಿ ಸ್ಥಾನ ಹೊರತುಪಡಿಸಿ ಬೇರೆ ಯಾವ ಹುದ್ದೆಯೂ ಬೇಡ ಎಂದು ಪಟ್ಟು ಹಿಡಿದಿರುವ ಶಿವಕುಮಾರ್ ಅನಾರೋಗ್ಯದ ಕಾರಣ ನೀಡಿ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ. ಜತೆಗೆ ಸೋದರ ಡಿ.ಕೆ. ಸುರೇಶ್ ಜತೆ ಪ್ರತ್ಯೇಕ ಚರ್ಚೆ ನಡೆಸಿ ಸುರೇಶ್ ಅವರನ್ನು ದಿಲ್ಲಿಗೆ ಕಳುಹಿಸಿಕೊಟ್ಟರು.
Related Articles
Advertisement
ನಾನು ಪಕ್ಷವನ್ನು ಬ್ಲ್ಯಾಕ್‌ಮೇಲ್ ಮಾಡುವುದಿಲ್ಲ. ಆ ರೀತಿ ಮಾಡುವುದಕ್ಕೆ ನಾನು ಮಗುವಲ್ಲ. ನಾನು ಯಾರ ಬಲೆಯಲ್ಲೂ ಸಿಲುಕುವುದಿಲ್ಲ’ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ತಮ್ಮ ಬಳಿ ಶಾಸಕರ ಬಲವಿದೆ ಎಂದು ಹೊಸದಿಲ್ಲಿಯಲ್ಲಿ ನೀಡಿರುವ ಹೇಳಿಕೆಗೂ ತಿರುಗೇಟು ನೀಡಿರುವ ಅವರು, “ಐ ವಿಶ್ ಹಿಮ್ ಆಲ್ ದಿ ಬೆಸ್ಟ್’ ಎಂದು ಹೇಳಿದ್ದಾರೆ.
ಅಧಿಕಾರ ಹಂಚಿಕೆ ಸೂತ್ರದಿಲ್ಲಿ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಪಟ್ಟ ಹಾಗೂ ಅಧಿಕಾರ ಹಂಚಿಕೆ ಸೂತ್ರಕ್ಕೆ ಸಂಬಂಧಪಟ್ಟಂತೆ ಹೈಕಮಾಂಡ್ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಡಿ.ಕೆ. ಶಿವಕುಮಾರ್ ದಿಲ್ಲಿಗೆ ಆಗಮಿಸಿದ ಬಳಿಕ ಅವರ ಜತೆ ಚರ್ಚೆ ನಡೆಸಿದ ಬಳಿಕವೇ “ರಾಜಿಸಂಧಾನ’ ತೀರ್ಮಾನವಾಗಲಿದೆ. ಸುಸ್ತಾದ ವೀಕ್ಷಕರು
ಸಿಎಂ ಪಟ್ಟಕ್ಕೆ ಯಾರನ್ನು ಆಯ್ಕೆ ಮಾಡ ಬೇಕೆಂಬ ಬಗ್ಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಲು ರವಿವಾರ ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ನೇತೃತ್ವದಲ್ಲಿ ಆಗಮಿಸಿದ ಮೂವರು ಎಐಸಿಸಿ ವೀಕ್ಷಕರ ತಂಡ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ತಡರಾತ್ರಿಯವರೆಗೂ ಸಭೆ ನಡೆಸಿತು. ಆದರೆ ಈ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ರೂಪುಗೊಂಡಿಲ್ಲ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರವನ್ನು ಹೈಕಮಾಂಡ್ ವಿವೇಚನೆಗೆ ಬಿಡಲಾಗಿದೆ ಎಂಬ ಒಂದು ಸಾಲಿನ ನಿರ್ಣಯ ತೆಗೆದುಕೊಂಡಿದ್ದರೂ ಶಾಸಕರ ಅಭಿಪ್ರಾಯವನ್ನು ಲಿಖೀತವಾಗಿ ಪಡೆಯಲಾಗಿದೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ವಿವೇಚನೆಗೆ ಬದ್ಧ ಎಂಬ ಮೂರು ಅಭಿಪ್ರಾಯ ಸಂಗ್ರಹವಾಗಿದ್ದು, ಈ ವರದಿಯೊಂದಿಗೆ ವೀಕ್ಷಕರು ದಿಲ್ಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಲ್ಲಿಸಿದ್ದಾರೆ. ಆ ಬಗ್ಗೆ ಖರ್ಗೆ ನೇತೃತ್ವದಲ್ಲಿ ಸಭೆ ನಡೆದಿದೆ. ಸಿದ್ದರಾಮಯ್ಯ, ಡಿಕೆಶಿ ಇಬ್ಬರ ಸಮ್ಮುಖದಲ್ಲೇ ಸಿಎಂ ಹುದ್ದೆ ತೀರ್ಮಾನವಾಗುವ ಸಾಧ್ಯತೆಗಳಿವೆ. ಇದರ ಬೆನ್ನಲ್ಲೇ ಹೊಸದಿಲ್ಲಿಗೆ ಬರುವಂತೆ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಬುಲಾವ್ ನೀಡಿತ್ತು. ತಮ್ಮ ಬೆಂಬಲಿಗ ಶಾಸಕರಾದ ಎಂ.ಬಿ. ಪಾಟೀಲ್, ಕೃಷ್ಣಭೈರೇಗೌಡ, ಶರಣ್ ಪ್ರಕಾಶ್ ಪಾಟೀಲ್, ಬಸವರಾಜ ರಾಯರೆಡ್ಡಿ ಮೊದಲಾದವರ ಜತೆಗೆ ಸಿದ್ದರಾಮಯ್ಯ ಸಂಜೆ ವೇಳೆಗೆ ದಿಲ್ಲಿ ತಲುಪಿದ್ದಾರೆ. ಆದರೆ ಎಲ್ಲಿಯೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಕ್ಕೆ ಅವರು ನಿರಾಕರಿಸಿದರು. ಆದರೆ ದಿಲ್ಲಿಗೆ ತೆರಳುವ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಬೆಳಗ್ಗಿನಿಂದಲೂ ವಿಳಂಬ ನೀತಿ ಅನುಸರಿಸಿದರು. ತಮ್ಮ ಹುಟ್ಟುಹಬ್ಬ ಆಚರಣೆಯ ನೆಪವೊಡ್ಡಿ ದೇವನಹಳ್ಳಿ ಸಮೀಪದ ತೋಟದ ಮನೆಯಲ್ಲಿ ಸ್ವಲ್ಪ ಕಾಲ ಪ್ರತ್ಯೇಕವಾಗಿಯೇ ಉಳಿದ ಅವರು, ಆ ಬಳಿಕ ಮನೆಯಲ್ಲಿ ಪೂಜಾ ಕಾರ್ಯದಲ್ಲಿ ನಿರತರಾದರು. ನಾಲ್ಕು ಗಂಟೆ ಸುಮಾರಿಗೆ ದಿಲ್ಲಿಗೆ ಹೋಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ ಶಿವಕುಮಾರ್, ನಗರದಲ್ಲಿರುವ ನೊಣವಿನಕೆರೆಯಲ್ಲಿರುವ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ತಮ್ಮ ಆರಾಧ್ಯ ದೈವ ಅಜ್ಜಯ್ಯನವರ ದರ್ಶನ ಪಡೆದರು. ಈ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಶಾಸಕರನ್ನು ಜತೆಗೆ ಕರೆದೊಯ್ಯುವ ಮೂಲಕ ತಮಗೂ ಶಾಸಕರ ಬೆಂಬಲವಿದೆ ಎಂಬ ಸಂದೇಶವನ್ನು ರವಾನಿಸಿದರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿ, “ನನ್ನ ಬಳಿ ಶಾಸಕರು ಇಲ್ಲ. ನಾನು ಶಾಸಕರನ್ನು ದಿಲ್ಲಿಗೆ ಕರೆದೊಯ್ಯುವುದಿಲ್ಲ. ನನ್ನ ಜತೆ ಕಾಂಗ್ರೆಸ್‌ನ 135 ಶಾಸಕರು ಇದ್ದಾರೆ ಎಂದು ಭಾವಿಸಿದ್ದೇನೆ. ಸೋನಿಯಾ ಗಾಂಧಿಯವರ ನಿರೀಕ್ಷೆ ಈಡೇರಿಸಿದ್ದೇನೆ’ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ
ಸಾಮರ್ಥ್ಯ
ಹಿಂದುಳಿದ ವರ್ಗದ ನಾಯಕ, ಸಮೂಹ ನಾಯಕ, ಡಿಸಿಎಂ, ಸಿಎಂ ಅಗಿ ಆಡಳಿತದಲ್ಲಿ ಸುದೀರ್ಘ ಅನುಭವ, ಮುಖ್ಯಮಂತ್ರಿಯಾಗಿ ಹಲವು ಭಾಗ್ಯಗಳ ಮೂಲಕ ಜನಪ್ರಿಯತೆ. ಸಾಮಾಜಿಕ ನ್ಯಾಯದ ಕಡೆ ಒಲವು.
ದೌರ್ಬಲ್ಯ
ಒನ್ ಮ್ಯಾನ್‌ಶೋ, ಹೈಕಮಾಂಡ್ ಹೇಳಿದ್ದೆಲ್ಲ ವನ್ನೂ ಕೇಳುವುದಿಲ್ಲ. ಪಕ್ಷ ಸಂಘಟನೆ ವಿಚಾರ ದಲ್ಲಿ ಆಸಕ್ತಿ ತೋರುವುದಿಲ್ಲ. ಮೇಲ್ವರ್ಗದ ಬಗ್ಗೆ ತುಸು ನಿರ್ಲಕ್ಷ್ಯ.
ಅವಕಾಶ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಹಿಂದ ಮತ ಬ್ಯಾಂಕ್ ಒಗ್ಗೂಡಿಕೆಗೆ ಸಹಕಾರಿ. ಗಂಭೀರ ಸ್ವರೂಪದ ಆರೋಪಗಳಿಲ್ಲದೆ ಇರು ವುದು. ದಕ್ಷ ಆಡಳಿತ ಕೊಟ್ಟರೆ ಪಕ್ಷಕ್ಕೂ ಲಾಭ.
ಆತಂಕ
ಇದು ಕೊನೆಯ ಚುನಾವಣೆ ಎಂದು ಹೇಳಿಕೊಂಡಿರುವ ಸಿದ್ದರಾಮಯ್ಯ ಅವರಿಗೆ ಈ ಅವಕಾಶ ತಪ್ಪಿದರೆ, ಮುಂದೆ ಸಿಎಂ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎಂಬ ಆತಂಕ. ಡಿಕೆಶಿಗೆ ಮಣೆ ಹಾಕಿದರೆ ಅಹಿಂದ ಮತಗಳು ಕೈಬಿಡಬಹುದು ಎನ್ನುವುದು ಪಕ್ಷದ ಆತಂಕ. ಡಿ.ಕೆ. ಶಿವಕುಮಾರ್
ಸಾಮರ್ಥ್ಯ
ಸಂಘಟನ ಚತುರ, ಪಕ್ಷ ನಿಷ್ಠೆ, ವಹಿಸಿದ ಕೆಲಸಕ್ಕೆ ಛಲ ಹಿಡಿದು ದುಡಿಯುವ ಧೈರ್ಯ, ಸ್ಥೈರ್ಯ. ಶಾಸಕ, ಸಚಿವನಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಸಂಘ ಟನೆ, ಆಡಳಿತದಲ್ಲೂ ಸುದೀರ್ಘ ಅನುಭವ. ದೌರ್ಬಲ್ಯ
ಆದಾಯ ತೆರಿಗೆ ಸೇರಿದಂತೆ ಗಂಭೀರ ಪ್ರಕರಣ ಗಳ ಆರೋಪ. ಒರಟು ಸ್ವಭಾವ, ತಾಳ್ಮೆ, ಸಮಾಧಾನ ಕಡಿಮೆ, ಶಾಸಕರ ವಿಶ್ವಾಸ ಗಳಿಸು ವುದು ಅಷ್ಟು ಸುಲಭವಲ್ಲ. ಆಡಳಿತದಲ್ಲಿ ಸಲಹೆ ಗಾರರನ್ನೇ ಅವಲಂಬಿಸುವ ಸಾಧ್ಯತೆ. ಅವಕಾಶ
ಒಕ್ಕಲಿಗ ಮತಗಳ ಜತೆಗೆ ಇತರ ಜಾತಿ, ಜನಾಂಗಗಳನ್ನು ಒಗ್ಗೂಡಿಸುವ ಸಾಧ್ಯತೆ. ಪಕ್ಷ ಸಂಘಟನೆಗೂ ಸಹಕಾರಿ. ಆತಂಕ
ಮೊದಲಿಗೆ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಕೊಟ್ಟರೆ ಅವರು ಬಿಟ್ಟುಕೊಡದೆ ಇರಬಹುದು ಎಂಬ ಆತಂಕ ಡಿಕೆಶಿಯದ್ದು. ಡಿ.ಕೆ. ಶಿವಕುಮಾರ್ ವಿರುದ್ಧದ ಪ್ರಕರಣಗಳಲ್ಲಿ ಅವರು ಶಿಕ್ಷೆಗೆ ಗುರಿಯಾದರೆ ತೀವ್ರ ಮುಜುಗರ ಉಂಟಾಗುವ ಆತಂಕ ಪಕ್ಷದ್ದು. ಡಿಕೆಶಿ ಭಾವನಾತ್ಮಕ
ಮಾತುಗಳು
ನಾನು ಒಂಟಿ, ಒಂಟಿಯಾಗಿ ಹೋರಾಡಿದ್ದೇನೆ. ನನ್ನನ್ನು ಪಕ್ಷದ ಅಧ್ಯಕ್ಷನಾಗಿ ಅಯ್ಕೆ ಮಾಡಿದಾಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ಭರವಸೆ ಕೊಟ್ಟಿದ್ದೆ, ನಾನು ಕೊಟ್ಟ ಮಾತನ್ನು ಈಡೇರಿಸಿದ್ದೇನೆ. ಪಕ್ಷವನ್ನು ಧೈರ್ಯದಿಂದ ಮುನ್ನಡೆಸುವ ಮೂಲಕ ನನ್ನ ಸಾಮರ್ಥ್ಯ ಸಾಬೀತುಪಡಿಸಿದ್ದೇನೆ. ಯಾರ ನಂಬರ್ ಏನು ಎಂಬುದು ನನಗೆ ಗೊತ್ತಿಲ್ಲ, ಕೆಪಿಸಿಸಿ ಅಧ್ಯಕ್ಷನಾಗಿ ನನ್ನದು 135 ಶಾಸಕರ ಸಂಖ್ಯೆ. ನನ್ನ ಪರಿಶ್ರಮದ ಫಲವಾಗಿ ಪಕ್ಷ ಇಂದು ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಹುದ್ದೆ ಹೊರತುಪಡಿಸಿ ಬೇರೆ ಯಾವುದೇ ಹುದ್ದೆ ನನಗೆ ಬೇಡ, ಉಪ ಮುಖ್ಯಮಂತ್ರಿ ಸ್ಥಾನವೂ ಬೇಡ. ಸಿಎಂ ಹುದ್ದೆ ಕೊಡದಿದ್ದರೆ ಸರಕಾರದ ಭಾಗವಾಗುವುದೇ ಇಲ್ಲ. ಹೋರಾಟದಲ್ಲಿ ಯಶಸ್ಸು ಸಿಗಬೇಕೆಂದರೆ ಧರ್ಮರಾಯನಂತೆ ತಾಳ್ಮೆಯಿರಬೇಕು. ದಾನಶೂರ ಕರ್ಣನಂತಿರಬೇಕು, ಅರ್ಜುನನ ಗುರಿ ಇರಬೇಕು, ಭೀಮನ ಬಲವಿರಬೇಕು, ಕೃಷ್ಣನ ತಂತ್ರಗಾರಿಕೆ, ವಿದುರನ ನೀತಿ ಇರಬೇಕು. ನನಗೆ ಯಾರ ಬೆಂಬಲವೂ ಬೇಡ. ಎಷ್ಟು ಜನರನ್ನಾದರೂ ಅವರು ಕರೆದೊಯ್ಯಲಿ. ನನ್ನನ್ನು ನೀವು ಬಂಡೆ ಎಂದು ಕರೆದಿದ್ದೀರಿ. ಬಂಡೆ ಅಂದರೆ ಪ್ರಕೃತಿ. ನನ್ನನ್ನು ಹೇಗೆ ಬೇಕಾದರೂ ಬಳಸಿಕೊಳ್ಳಲಿ.