Advertisement
ಸಕ್ಕರೆ ಕಾರ್ಖಾನೆ ಮಾಲೀಕರಿಂದ ವಸೂಲಾಗಬೇಕಿರುವ ಬಾಕಿ ಪಾವತಿಗಾಗಿ ಹತ್ತು ದಿನಗಳಿಂದ ಧರಣಿ ನಡೆಸುತ್ತಿದ್ದ ರೈತರ ಮನವೊಲಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಕೈಲಿ ಆಗದ ಕೆಲಸ ತಾನು ಮಾಡಿ ತೋರಿಸಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ.
Related Articles
Advertisement
ಮುಂಬೈ ಕರ್ನಾಟಕ ಭಾಗದಲ್ಲಿ ಶುಗರ್ ಲಾಬಿ ಹಿಡಿತದಲ್ಲಿಟ್ಟುಕೊಂಡಿರುವ ಜಾರಕಿಹೊಳಿ ಸಹೋದರರಿಗೆ ರಾಜಕೀಯವಾಗಿಯೇ ತಿರುಗೇಟು ನೀಡುವ ಸಲುವಾಗಿಯೇ ಡಿ.ಕೆ.ಶಿವಕುಮಾರ್, ನೀರು ಮತ್ತು ವಿದ್ಯುತ್ ಕುರಿತ ಅಧ್ಯಯನ ನೆಪದಲ್ಲಿ ಬೆಳಗಾವಿಗೆ ಭೇಟಿ ನೀಡಿ ಧರಣಿ ನಿರತರ ರೈತರ ಜತೆ ಮಾತನಾಡಿ ಎಳನೀರು ಕೊಟ್ಟು ಧರಣಿ ಅಂತ್ಯ ಮಾಡುವಂತೆ ನೋಡಿಕೊಂಡಿದ್ದಾರೆ.
ಬಳ್ಳಾರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ತಂದುಕೊಟ್ಟ ಮತದಾರರಿಗೆ ಕೃತಜ್ಞತೆ ಸಲ್ಲಿಕೆ ಸಮಾರಂಭದಲ್ಲಿ ಪಾಲ್ಗೊಂಡು ಅಲ್ಲಿಂದ ನೇರವಾಗಿ ಬೆಳಗಾವಿಗೆ ಹೊರಟು ರೈತರ ಧರಣಿ ಸ್ಥಳಕ್ಕೆ ತಲುಪಿಸಿ ಮಾತುಕತೆ ನಡೆಸಿರುವುದು ರಾಜಕೀಯ ವಲಯಗಳಲ್ಲಿ ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಜಾರಕಿಹೊಳಿ ಸಹೋದರರ ಪ್ರಾಬಲ್ಯ ಹಣಿಯುವ ಸಲುವಾಗಿಯೇ ಶಿವಕುಮಾರ್ ಬೆಳಗಾವಿಗೆ ಹೋಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಡಿ.ಕೆ,ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ದೂರು ನೀಡಿ ಅವರೇಕೆ ನಮ್ಮ ಜಿಲ್ಲೆಯಲ್ಲಿ ಮೂಗು ತೂರಿಸುತ್ತಾರೆ ಎಂದು ಪ್ರಶ್ನಿಸಿದ್ದವರಿಗೆ ನಾನೂ ಸರ್ಕಾರ, ನಾನ್ಯಾಕೆ ಹೋಗಬಾರದು ಎಂದು ಹೇಳಿ ಬೆಳಗಾವಿಗೆ ಹೋದ ಡಿ.ಕೆ.ಶಿವಕುಮಾರ್ ತಮ್ಮ ತಾಕತ್ತು ಪ್ರದರ್ಶಿಸಿ ತಾನು ಟ್ರಬಲ್ ಶೂಟರ್ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.
ಮುಖ್ಯಮಂತ್ರಿಯವರು ವಿಧಾನಸೌಧಕ್ಕೆ ಮಾತುಕತೆಗೆ ಬರುವಂತೆ ಕೋರಿದರೂ ರೈತರು ಬಾರದೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ಮುಂದುವರಿಸಿದ್ದರಿಂದ ಅಧಿವೇಶನ ಸಂದರ್ಭದಲ್ಲಿ ರೈತರು ಧರಣಿ ಕುಳಿತರೆ ಕಷ್ಟವಾಗಬಹುದು ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಬಳ್ಳಾರಿಯಿಂದ ನೇರವಾಗಿ ಬೆಳಗಾವಿಗೆ ಹೋದರು ಎನ್ನಲಾಗಿದೆ.
ಒಟ್ಟಾರೆ, ರಾಜಕೀಯವಾಗಿ ಡಿ.ಕೆ.ಶಿವಕುಮಾರ್ ಬಳ್ಳಾರಿ ಉಪ ಚುನಾವಣೆ ನಂತರ ಬಲಿಷ್ಠವಾಗುತ್ತಿದ್ದು ಹೈಕಮಾಂಡ್ ಸಹ ಅವರಿಗೆ ಪ್ರಾಮುಖ್ಯತೆ ನೀಡುತ್ತಿದೆ. ಹೀಗಾಗಿಯೇ ತೆಲಂಗಾಣ ರಾಜ್ಯದ ಚುನಾವಣಾ ಉಸ್ತುವಾರಿ ವಹಿಸಿದೆ ಎಂದು ಹೇಳಲಾಗಿದೆ.
ಬೆಳಗಾವಿಯಲ್ಲಿ ಅತ್ತ ಡಿ.ಕೆ.ಶಿವಕುಮಾರ್ ರೈತರನ್ನು ಭೇಟಿ ಮಾಡಿ ಧರಣಿ ವಾಪಸ್ ತೆಗೆಸುತ್ತಿದ್ದಂತೆ ತಮ್ಮ ಜಿಲ್ಲೆಗೆ ಎಂಟ್ರಿ ಕೊಟ್ಟು ತಮ್ಮ ಕೈಲಾಗದ ಕೆಲಸ ತಾನು ಮಾಡಿದಂತೆ ಬಿಂಬಿಸಿಕೊಂಡಿದ್ದರಿಂದ ಆಕ್ರೋಶಗೊಂಡಿರುವ ಜಾರಕಿಹೊಳಿ ಸಹೋದರರು ಮತ್ತೆ ಸಮ್ಮಿಶ್ರ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದಾರೆ. ತಮ್ಮ ಜತೆ ಸಂಪರ್ಕದಲ್ಲಿರುವ ಹದಿನೈದು ಶಾಸಕರ ಜತೆ ಗುಪ್ತ ಸಮಾಲೋಚನೆ ನಡೆಸಿದ್ದಾರೆ. ಬೆಳಗಾವಿ ವಿಧಾನಮಂಡಲ ಅಧಿವೇಶನದೊಳಗೆ ಸಂಪುಟ ವಿಸ್ತರಣೆ ಆಗದಿದ್ದರೆ ಅಧಿವೇಶನಕ್ಕೆ ಗೈರು ಆಗಲು ತೀರ್ಮಾನಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
– ಎಸ್. ಲಕ್ಷ್ಮಿನಾರಾಯಣ