ಬೀದರ್ : ಅಧಿಕಾರ ಎನ್ನುವುದು ಯಾವತ್ತು ಶಾಶ್ವತವಲ್ಲ, ಅದು ನೀರ ಮೇಲಿನ ಗುಳ್ಳೆ ಇದ್ದಂತೆ. ರಾಜ್ಯದಲ್ಲಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ ಈ ಉಪ ಚುನಾವಣೆ ಮೂಲಕ ತಕ್ಕ ಉತ್ತರ ನೀಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಬಸವಕಲ್ಯಾಣ ಉಪ ಚುನಾವಣೆ ಹಿನ್ನಲೆಯಲ್ಲಿ ನಗರದ ಎಂ.ಎಂ ಬೇಗ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಸರ್ಕಾರ ಮನೆಗೊಂದು ನಿಗಮ- ಮಂಡಳಿಗಳನ್ನು ಮಾಡಲಿ. ಕಾಂಗ್ರೆಸ್ ಪಕ್ಷಕ್ಕೆ ಮತದಾರರ ಹೃದಯ ಮತ್ತು ಪ್ರೀತಿಯೇ ಮುಖ್ಯ. ಅದರಿಂದಲೇ ಚುನಾವಣೆಯಲ್ಲಿ ಗೆಲುವು ಸಾಧಿಸಿ ತೋರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಡವರಿಗೆ ಪಡಿತರ ಅಕ್ಕಿ, ಸಾಲ ಮನ್ನಾದಂಥ ಯೋಜನೆಗಳನ್ನು ಜಾರಿಗೆ ತಂದು ಕಾಂಗ್ರೆಸ್ ಜಾತ್ಯಾತೀತ ಪಕ್ಷ ಎಂಬುದನ್ನು ಅಧಿಕಾರದಲ್ಲಿದ್ದಾಗ ತೋರಿಸಿಕೊಟ್ಟಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಮಾತ್ರ ಎಲ್ಲ ವರ್ಗಕ್ಕೆ ಮಾನ್ಯತೆ ಸಿಕ್ಕಂತಾಗುತ್ತದೆ. ಬಿಜೆಪಿಗೆ ಮತ ಹಾಕಿ ತಪ್ಪು ಮಾಡಿದೇವು ಎಂಬುದನ್ನು ನಾಡಿನ ಜನತೆಗೆ ಈಗ ಮನದಟ್ಟು ಆಗಿದೆ ಎಂದು ಹೇಳಿದರು.
ಇದನ್ನೂ ಓದಿ:ಆಸೀಸ್ ಟೆಸ್ಟ್ ಸರಣಿಯಿಂದ ರೋಹಿತ್, ಇಶಾಂತ್ ಶರ್ಮಾ ಔಟ್! ವರದಿ
ಉಪ ಚುನಾವಣೆ ವೇಳೆ ಬಿಜೆಪಿ ಸರ್ಕಾರ ತಂತ್ರ, ಹಣದ ಆಮಿಷ್ಯ ಏನೇ ಮಾಡಲಿ. ಬಸವಕಲ್ಯಾಣ ಕ್ಷೇತ್ರದಲ್ಲಿ ದಿ. ನಾರಾಯಣರಾವ್ ಅವರು ಹಣ ಹಂಚಿ ಗೆಲ್ಲಲಿ. ಪ್ರೀತಿ, ವಿಶ್ವಾಸದಿಂದ ಶಾಸಕರಾಗಿ ಜನ ನಾಯಕ ಎನಿಸಿಕೊಂಡಿದ್ದರು. ಆ ಹಾದಿಯಲ್ಲೇ ಕಾಂಗ್ರೆಸ್ ನಡೆದು ಚುನಾವಣೆಯಲ್ಲಿ ಜಯ ಗಳಿಸಲಿದೆ. ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಈ ಚುನಾವಣೆ ಮೂಲಕ ತಕ್ಕ ಉತ್ತರ ನೀಡಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.