ಬೆಂಗಳೂರು: ಕಣ್ಣರಿಯದಿದ್ದರೂ ಕರುಳರಿಯದೇ ಇರುವುದೇ? ಡಿಕೆ ಶಿವಕುಮಾರ್ ವಿರುದ್ಧ ಸಿದ್ದರಾಮಯ್ಯ ಅಲ್ಲಲ್ಲೇ ಕತ್ತಿ ಮಸೆಯುತ್ತಾರೆ ಎಂದು ಡಿಕೆಶಿ ಅವರ ತಾಯಿ ಅಂದೇ ಹೇಳಿದ್ದರು. ಸಿದ್ದರಾಮಯ್ಯ ಜೊತೆಗೆ ಕೈ ಮಿಲಾಯಿಸುವಾಗ ಹೆತ್ತ ತಾಯಿ ನೀಡಿರುವ ಎಚ್ಚರಿಕೆಯನ್ನು ಸ್ವಲ್ಪ ಗಮನಿಸಿ ಎಂದು ರಾಜ್ಯ ಬಿಜೆಪಿ ಐಟಿ ಸೆಲ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕುಟುಕಿದೆ.
ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ ನಡೆದ ಸಂದರ್ಭದಲ್ಲಿ ಅವರ ತಾಯಿ ಆಡಿದ ಮಾತಿನ ವಿಡಿಯೋ ಮೂಲಕ ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕಾಲೆಳೆದಿದೆ.
ಡಿಕೆಶಿ ಅವರೇ, ನಿಮ್ಮ ವಿರುದ್ಧ ಮಸಲತ್ತು ನಡೆಸಿದವರು ಯಾರು ಎಂದು ತಾಯಿ ಸ್ಪಷ್ಟವಾಗಿ ಹೇಳಿದ್ದಾರೆ. ಹೆತ್ತವರ ಒಡಲ ಉರಿ ಸುಳ್ಳು ಹೇಳುವುದಿಲ್ಲ. ನನ್ನ ಮಗ ಮುಖ್ಯಮಂತ್ರಿಯಾಗುತ್ತಾನೆ ಎಂದು ಸಿದ್ದರಾಮಯ್ಯ ಒಳಗೊಳಗೆ ಮಸಲತ್ತು ನಡೆಸುತ್ತಾರೆ ಎಂದು ತಾಯಿ ಈ ಹಿಂದೆಯೇ ನೋವು ತೋಡಿಕೊಂಡಿದ್ದಾರೆ. ಈಗ ಅದೇ ಸತ್ಯವಾಗುತ್ತಿದೆ. ತನ್ನ ಕೆಲಸವಾಗಬೇಕಾದರೆ ಸಿದ್ದರಾಮಯ್ಯ ನನ್ನ ಮಕ್ಕಳನ್ನು ಬಳಸಿಕೊಳ್ಳುತ್ತಾರೆ. ಆಮೇಲೆ ದ್ರೋಹ ಬಗೆಯುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷರ ತಾಯಿ ಹೇಳಿದ ಮಾತು ಮತ್ತೆ ನಿಜವಾಗಲಿದೆ. ಸಿದ್ದರಾಮೋತ್ಸವದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಬಣ ಹರಕೆಯ ಕುರಿಯಾಗಿಸಲಿದೆ ಎಂದು ವ್ಯಂಗ್ಯವಾಡಿದೆ.
ಅತ್ತ ಸಿದ್ದರಾಮೋತ್ಸಕ್ಕೆ ಸಿದ್ದರಾಮಯ್ಯ ಪಟಾಲಂ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಇತ್ತ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರ ರಾಜಕಾರಣವನ್ನು ಮುಗಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮೋತ್ಸವದ ಬಳಿಕ ಇದರ ಸ್ಪಷ್ಟ ಚಿತ್ರಣ ಸಿಗಲಿದೆ, ಡಿಕೆಶಿ ತಾಯಿಯ ಭವಿಷ್ಯ ನಿಜವಾಗಲಿದೆ ಎಂದು ಕಾಲೆಳೆದಿದೆ.
ನಮ್ಮ ನಾಯಕರು, ನಮ್ಮ ನಾಯಕರು ಎಂದು ಕೈ ಕುಲುಕುವ ಡಿಕೆಶಿ ಅವರೇ, ಹೆಜ್ಜೆ ಹೆಜ್ಜೆಗೂ ನಿಮ್ಮ ಮಾತೃಶ್ರೀ ನೀಡಿದ ಎಚ್ಚರಿಕೆ ಮರೆಯಬೇಡಿ. ಸಿದ್ದರಾಮಯ್ಯ ಬಗಲಲ್ಲಿರುವ ಕತ್ತಿ ಸದಾ ನಿಮ್ಮ ಕತ್ತನ್ನೇ ದೃಷ್ಟಿಸುತ್ತಿರುತ್ತದೆ ಎಂಬುದರಲ್ಲಿ ಅನುಮಾನ ಬೇಡ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ, ಅಧಿಕಾರಕ್ಕೆ ಬಂದರೆ ಫಿಫ್ಟಿ- ಫಿಫ್ಟಿ ಸಿಎಂ ಸ್ಥಾನ ಹಂಚಿಕೆ ಎಂಬ ಬಣ್ಣದ ಮಾತಿಗೆ ಮರುಳಾಗಬೇಡಿ ಎಂದು ಕಿವಿಮಾತಿ ಹೇಳಿದೆ.
ಇದನ್ನೂ ಓದಿ:ನೆರೆಹಾನಿ: ಇಡೀ ರಾಜ್ಯ ಸರ್ಕಾರ ರಸ್ತೆಗಿಳಿದು ಕೆಲಸ ಮಾಡುತ್ತಿದೆ ಎಂದ ಸಿಎಂ ಬೊಮ್ಮಾಯಿ
ಮೊದಲನೆಯದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ, ಎರಡನೆಯದಾಗಿ ಕಾಂಗ್ರೆಸ್ ಪಕ್ಷದ ಜೊತೆ ನಿಮ್ಮನ್ನೂ ಮುಳುಗಿಸಲು ಸಿದ್ದರಾಮಯ್ಯ ಕಾಯುತ್ತಿದ್ದಾರೆ. ಅಧಿಕಾರಕ್ಕಾಗಿ ಸಿದ್ದರಾಮಯ್ಯ ಏನು ಬೇಕಾದರೂ ಮಾಡುತ್ತಾರೆ! ಅಂದು ದಲಿತ ನಾಯಕ ಪರಮೇಶ್ವರ್ ಅವರ ವಿರುದ್ಧ ಸಂಚು ನಡೆಸಿ ಬಲಿ ಹಾಕಿದರು, ಇಂದು ಡಿಕೆಶಿ ಅವರ ರಾಕೀಯ ಜೀವನದ ಬಲಿ ತೆಗೆಯಲು ಹೊಂಚು ಹಾಕುತ್ತಿದ್ದಾರೆ. ಇಷ್ಟೆಲ್ಲ ತನ್ನ ಸುತ್ತ ನಡೆಯುತ್ತಿದ್ದರೂ, ಕೆಪಿಸಿಸಿ ಅಧ್ಯಕ್ಷರು ಅಸಹಾಯಕ ಡಿಕೆಶಿ ಆಗಿರುವುದು ವಿಪರ್ಯಾಸ ಎಂದು ಟೀಕಿಸಿದೆ.