Advertisement

ಬಚ್ಚಲು ಬಾಯಿ ಈಶ್ವರಪ್ಪ ತಾನು ದೇಶದ್ರೋಹಿ ಎಂದು ಒಪ್ಪಿಕೊಂಡಿದ್ದಾರೆ: ಡಿಕೆಶಿ

07:57 PM Feb 17, 2022 | Team Udayavani |

ಬೆಂಗಳೂರು: ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ದೇಶದ್ರೋಹದ ಹೇಳಿಕೆ ನೀಡಿದ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಮಾತುಗಳನ್ನು ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ. ಹೀಗಾಗಿ,  ಇಡೀ ಬಿಜೆಪಿಯೇ ಇದರಲ್ಲಿ ಭಾಗಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು,  ಹರಕುಬಾಯಿ ಈಶ್ವರಪ್ಪ  ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದು ಆತ ಮೊದಲು ಸಚಿವ ಸ್ಥಾನದಿಂದ ಕೆಳಗೆ ಇಳಿಯಬೇಕು. ನಮ್ಮಪ್ಪನ ಬಗ್ಗೆ ಅವರು ಮಾತನಾಡಿದ್ದಾರೆ. ಬೇಕಾದರೆ ನಮ್ಮಪ್ಪನನ್ನು ಭೇಟಿ ಮಾಡಲಿ. ಈ ವಿಚಾರವಾಗಿ ಸಮಯ ಬಂದಾಗ ಅವರಿಗೆ ಉತ್ತರ ನೀಡುತ್ತೇನೆ ಎಂದು ಹೇಳಿದರು.

ಈಶ್ವರಪ್ಪನ ಹರಕುಬಾಯಿಯಿಂದ ಬಿಜೆಪಿ ಪಕ್ಷಕ್ಕೆ, ರಾಜ್ಯಕ್ಕೆ ಹಾಗೂ ದೇಶದ ಘನತೆಗೆ ಧಕ್ಕೆಯಾಗುತ್ತಿದ್ದು, ಹೇಳಿಕೆ ಸಮರ್ಥಿಸಿಕೊಂಡು ತಪ್ಪು ಮಾಡಿರುವುದು ಹೌದು ಎಂದು ದೇಶದ್ರೋಹಿ ಎಂದು  ಒಪ್ಪಿಕೊಂಡಿದ್ದಾರೆ. ಆತನ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಲಿದೆ ಎಂದು ಭಾವಿಸಿದ್ದೆ.ಆದರೆ, ಬಿಜೆಪಿ ನಾಯಕರು ಅದನ್ನು ಸಮರ್ಥಿಸಿಕೊಂಡು  ಮುಖ್ಯಮಂತ್ರಿಗಳು ರಾಜೀನಾಮೆ ಪಡೆಯುತ್ತಿಲ್ಲ, ರಾಜ್ಯಪಾಲರು ವಜಾ ಮಾಡುತ್ತಿಲ್ಲ. ಇದಕ್ಕೆ ಏನು ಹೇಳುವುದು ಎಂದು ಪ್ರಶ್ನಿಸಿದರು.

ಆತ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಬದಲಿಗೆ ಕೇಸರಿ ಧ್ವಜ ಹಾರಿಸಲು ಬಯಸಿದ್ದು, ಇದು ದೇಶದ ಕಾನೂನಿಗೆ ವಿರುದ್ಧವಾಗಿದೆ. ಅವರು ಸಂವಿಧಾನ ಬದಲಿಸಲು, ರಾಷ್ಟ್ರಧ್ವಜ ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದೇ ನಮ್ಮ ಆಗ್ರಹ. ಹೀಗಾಗಿ ನಾವು ಅಹೋರಾತ್ರಿ ವಿಧಾನಸಭೆಯಲ್ಲಿ ಧರಣಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಬಂಡೆಗೆ ಡೈನಮೇಟ್‌ ಇಟ್ಟಿದ್ದಾರೆ. ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ , ಬಂಡೆ ಚಪ್ಪಡಿ ಕಲ್ಲಾಗಬಹುದು, ಜಲ್ಲಿ ಆಗಬಹುದು, ವಿಗ್ರಹ ಆಗಬಹುದು. ಬಂಡೆಯಿಂದ ಆದ ವಿಗ್ರಹವನ್ನೇ ಎಲ್ಲರೂ ಪೂಜಿಸುತ್ತಿದ್ದಾರೆ. ಹೀಗಾಗಿ ನನ್ನನ್ನು ಬಂಡೆ ಎಂದು ಕರೆದರೆ ಬಹಳ ಸಂತೋಷ ಎಂದು ಹೇಳಿದರು.

Advertisement

ನನ್ನನ್ನು ಮತ್ತೆ ಜೈಲಿಗೆ ಹಾಕಿಸಲು ಅಧಿಕಾರಿಗಳಿಗೆ ಏನೆಲ್ಲಾ ಸೂಚನೆ ಕೊಡುತ್ತಿದ್ದಾರೆ. ನನ್ನ ಮೇಲೆ ಇಲ್ಲಸಲ್ಲದ ಪ್ರಕರಣ ದಾಖಲಿಸಿ ಕೊಡಬಾರದ ಕಿರುಕುಳ ನೀಡುತ್ತಿದ್ದಾರೆ. ಬಿಜೆಪಿಯವರ ಜತೆ ಬೇರೆ ಪಕ್ಷದವರೂ ಸೇರಿಕೊಂಡಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ ಪಕ್ಷ ಪ್ರತಿಭಟನೆಗೆ ತ್ರಿವರ್ಣ ಧ್ವಜ ಬಳಸಿ ಅಪಮಾನ ಮಾಡಿದೆ ಎಂದು ಬಿಜೆಪಿಯವರು ಆರೋಪಿಸುತ್ತಾರೆ. ಆದರೆ, ಅವರು ತಿರಂಗಾ ಯಾತ್ರೆ ಮಾಡಿಲ್ಲವೇ, ಕಲ್ಯಾಣ್‌ ಸಿಂಗ್‌ ಅವರು ಸತ್ತಾಗ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಪಕ್ಷದ ಧ್ವಜ ಹಾಕಲಿಲ್ಲವೇ, ಯೋಗಿ ಆದಿತ್ಯನಾಥ್‌ ರಾಷ್ಟ್ರಧ್ವಜದ ಮೇಲೆ ಕೇಸರಿ ಧ್ವಜ ಹಾರಿಸಿದರಲ್ಲಾ, ನಾವು ರಾಷ್ಟ್ರಧ್ವಜಕ್ಕೆ ಗೌರವ ಕೊಟ್ಟು ಹೋರಾಟದ ಭಾಗವಾಗಿ ಬಳಸಿದ್ದೇವೆ. ಈ ಹಿಂದಿನ ಬಹುತೇಕ ಎಲ್ಲ ಹೋರಾಟದ ಸಮಯದಲ್ಲೂ ತ್ರಿವರ್ಣ ಧ್ವಜ ಬಳಸಲಾಗಿದೆ. ಅದು ನಮ್ಮ ಹೆಮ್ಮೆ. ನಮ್ಮ ರಾಷ್ಟ್ರಧ್ವಜ ರಕ್ಷಣೆ ಮಾಡಿ ಎಂದು ನಾವು ಕೇಳುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ನಾನು ಶಾಸನಸಭೆಯಲ್ಲಿ ಯಾರಿಗೂ ನೀನು ಎಂದಿಲ್ಲ. ಆದರೆ ಅವರು ನಮ್ಮ ತಂದೆ ಬಗ್ಗೆ ಮಾತನಾಡಿದ್ದಾರೆ. ನಮ್ಮ ಪೂರ್ವಿಕರು ಗಾಂಧಿ ತತ್ವ ಅನುಸರಿಸುತ್ತಿದ್ದರು. ನಮ್ಮ ಪಕ್ಷಕ್ಕೆ ಸ್ವಾತಂತ್ರ್ಯ ಹೋರಾಟದ ಇತಿಹಾಸವಿದೆ. ಈ ದೇಶಕ್ಕೆ ಸ್ವಾತಂತ್ರ್ಯ,  ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆ ಎಲ್ಲವನ್ನು ಕೊಟ್ಟಿರುವವರು ನಾವು. ರಾಷ್ಟ್ರಧ್ವಜ ರಕ್ಷಣೆ ಹೇಗೆ ಮಾಡಬೇಕು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ.ಡಿ.ಕೆ.ಶಿವಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next