ಶಿವಮೊಗ್ಗ: ಕಮಲ ಯಾವತ್ತೂ ಶುದ್ಧವಾದ ಪ್ರದೇಶದಲ್ಲಿ ಬೆಳೆಯಲ್ಲ. ಕೆಸರಿನಲ್ಲಿ ಮಾತ್ರ ಬೆಳೆಯುತ್ತದೆ. ಹಾಗೇ ಬಿಜೆಪಿಯವರು ಕೂಡ. ಶಾಂತಿ- ಸುವ್ಯವಸ್ಥೆ ಹಾಳು ಮಾಡಿ, ಅವ್ಯವಸ್ಥೆ ಸೃಷ್ಟಿಸಿ ಇವರು ಅಧಿಕಾರಕ್ಕೆ ಬರ್ತಾರೆ. ಆದರೆ,ನಾವು ಶುದ್ಧವಾದ ರಾಜಕೀಯವನ್ನು ಕೊಟ್ಟಿದ್ದೇವೆ. ಬಿಜೆಪಿಯವರು ರಾಷ್ಟ್ರದ ಭ್ರಷ್ಟ ರಾಜ್ಯ ಎಂದು ಕರ್ನಾಟಕಕ್ಕೆ ಸ್ಟ್ಯಾಂಪ್ ಹಾಕಿ ಬಿಟ್ಟಿದ್ದಾರೆ. ಅದನ್ನು ತೆಗೆಯುವ ಕೆಲಸ ಮೊದಲು ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಿಂದ ನಡೆದ ಜನಧ್ವನಿ ಸಮಾವೇಶದಲ್ಲಿ ಮಾತಾನಾಡಿದ ಅವರು, ಜಿಲ್ಲೆಯ ಜನರ ಭಾವನೆಯನ್ನು ಅರಿತು ಹೋರಾಟ ಆರಂಭ ಮಾಡಿದ್ದೇವೆ. ಈಶ್ವರಪ್ಪ ರಾಜೀನಾಮೆ ಕೊಡುವ ಸಂದರ್ಭ ನಿರ್ಮಾಣ ಆಯಿತು. ಸಂತೋಷ್ ಪಾಟೀಲ್ ಸತ್ತಾಗ ಕಾನೂನು ಪ್ರಕಾರ ಕೇಸ್ ಮಾಡಿ ಎಂದು ಒತ್ತಾಯ ಮಾಡಿದ್ವಿ. ಸಿಎಂ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಅವರನ್ನು ರಕ್ಷಣೆ ಮಾಡುವ ಕೆಲಸ ಮಾಡಿದರು. ಭ್ರಷ್ಟಾಚಾರ ತಡೆಯ ಕೇಸ್ ಅನ್ನು ಹಾಕಬೇಕಿತ್ತು ಅದನ್ನು ಮಾಡಲಿಲ್ಲ ಎಂದರು.
ಬಿಜೆಪಿಯವರು ಇತ್ತೀಚಿಗೆ ಟೋಪಿ ಹಾಕುತ್ತಿದ್ದಾರೆ. ಯುವಕರಿಗೆ ಕೇಸರಿ ಹಾಕಿಸುತ್ತಿದ್ದಾರೆ. ನಿಮಗೂ ಕೇಸರಿಗೂ ಏನು ಸಂಬಂಧ. ಯಾರಾದರೂ ಸತ್ತಿದ್ದಾರಾ.? ನೀವು ಯಾವಾಗಲೂ ಕೆಂಪು ಶಾಲು ಮಾತ್ರ ಹಾಕಬೇಕು. ನಿಮಗೆ ರಕ್ತವೇ ಬೇಕಲ್ಲವೇ ? ಈ ಹಿಂದೆ ಗಂಗಾ ಸ್ನಾನ ತುಂಗಾ ಪಾನ ಎಂಬ ಮಾತಿತ್ತು. ಈಗ ತುಂಗಾ ನದಿ ಮಾತ್ರವಲ್ಲ,ಇಡೀ ರಾಜ್ಯವನ್ನೇ ಕಲ್ಮಶ ಮಾಡಿಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ದ್ವೇಷ ಹೆಚ್ಚಳ…ಸಿಂಗಾಪುರದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಗೆ ನಿಷೇಧ
ರಾಜ್ಯದಲ್ಲಿ ಗ್ಲೋಬಲ್ ಇನ್ವೇಸ್ಟ್ ಮೆಂಟ್ ಮಾಡೋಕೆ ಹೊರಟ್ಟಿದ್ದಾರೆ. ಯಡಿಯೂರಪ್ಪ, ಈಶ್ವರಪ್ಪರನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಬಂದು ಮಾಡಲಿ ನೋಡೋಣ. ಯಾರಾದರೂ ಒಬ್ಬರು ಇನ್ವೇಸ್ಟ್ ಮೆಂಟ್ ಗೆ ಬರ್ತಾರೆ ಎಂದು ಅವರಿಗೆ ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ 150 ಸ್ಥಾನ ಪಡೆದು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆ ಕೆಲಸವಾಗಬೇಕು. ಶಿವಮೊಗ್ಗ ಜಿಲ್ಲೆಯ ರೈತರು ಇಂದಿಗೂ ಸಂಕಷ್ಟದಲ್ಲಿದ್ದಾರೆ. ಶಿವಮೊಗ್ಗದ ಕಾಗೋಡಿನಲ್ಲಿ ಆಗಸ್ಟ್ ತಿಂಗಳಲ್ಲಿ ರಾಜ್ಯಮಟ್ಟದ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ನ ಎಲ್ಲಾ ನಾಯಕರು ಬಂದು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಪಿಎಸ್ಐ ಹಗರಣ ತನಿಖೆ ನಡೆಯುವ ಮುನ್ನವೇ ಎಕ್ಸಾಂ ಘೋಷಣೆಯಾಗಿದೆ. ತನಿಖೆಯಾಗಿ ಮತ್ತಷ್ಟು ಸತ್ಯ ಹೊರಬರುವ ಮುನ್ನ ಗೃಹಸಚಿವರು ಹೀಗೆ ಮಾಡಿದ್ದಾರೆ. ರಾಜ್ಯಕ್ಕೆ ಕಪ್ಪುಚುಕ್ಕೆಯಂತೆ ಬಿಜೆಪಿ ಸರ್ಕಾರ ಇದ್ದು, ಅದನ್ನು ತೆಗೆಯಬೇಕು ಎಂದು ಹೇಳಿದರು.