Advertisement

ಡಿ.ಕೆ.ಶಿ ಡೈನಾಮಿಕ್ ಲೀಡರ್, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರುವ ವಿಶ್ವಾಸ:ಕೆ.ಸಿ ವೇಣುಗೋಪಾಲ್

01:30 PM Jul 02, 2020 | Mithun PG |

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್  ಇಂದು ಪದಗ್ರಹಣ ಸ್ವೀಕರಿಸಿದ್ದಾರೆ. ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಡಿ ಕೆ ಶಿವಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ನೆರವೇರುತ್ತಿದೆ.

Advertisement

ಈ ವೇಳೆ ಮಾತನಾಡಿದ ಕೆ.ಸಿ ವೇಣುಗೋಪಾಲ್ ಸೋನಿಯಾ ಗಾಂಧಿ ಸಂದೇಶ ಓದಿದರು.  ಕೋವಿಡ್-19 ಸಂದರ್ಭದಲ್ಲಿ ವರ್ಚ್ಯುವಲ್ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡಿರುವುದು ಶ್ಲಾಘನೀಯ. ಈಗಿನ ಕಷ್ಟದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಡಿರುವ ತಪ್ಪುಗಳನ್ನು ಪ್ರತಿಪಕ್ಷವಾಗಿ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.

ನಂತರ ಮಾತನಾಡಿದ ವೇಣುಗೋಪಾಲ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ತಂತ್ರಜ್ಞಾನದ ಸಂಪೂರ್ಣ ಸದುಪಯೋಗ ಪಡೆಸಿಕೊಂಡಿರುವುದು ಶ್ಲಾಘನೀಯ. ದೇಶ ತೀರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಆರ್ಥಿಕವಾಗಿ ದೇಶ ಸಂಕಷ್ಟದಲ್ಲಿದೆ. ಕೋವಿಡ್ ಸಂದರ್ಭದಲ್ಲಿ ಕೆಪಿಸಿಸಿ, ತೊಂದರೆಗೊಳಗಾದ ಜನರಿಗೆ ಸಹಾಯ ಹಸ್ತ ಚಾಚಿರುವುದು ಮೆಚ್ಚುಗೆಗೆ ಕಾರಣವಾಗಿದೆ.

ಈಗಿನ ಸಂದರ್ಭದಲ್ಲಿ ಚಾಲೆಂಜ್ ಗಳನ್ನು ಎದುರಿಸಲು ಡಿ.ಕೆ.ಶಿವಕುಮಾರ್ ಪಕ್ಷ ಮುನ್ನಡೆಸಲು ಸೂಕ್ತ ವ್ಯಕ್ತಿ ಎನ್ನುವುದು ನನಗೆ ಅರಿವಿದೆ. ಎನ್ ಎಸ್.ಯು.ಐ ನಿಂದ ನಿರಂತರ ಹೋರಾಟ ಮಾಡುತ್ತಾ ಈ ಹಂತಕ್ಕೆ ಬಂದು ನಿಂತಿದ್ದಾರೆ. ಅವರು ಡೈನಾಮಿಕ್ ಲೀಡರ್ ಆಗಿದ್ದಾರೆ. ಅನೇಕ ಯೋಜನೆಗಳನ್ನು ಹಾಕಿ ಪಕ್ಷ ನಡೆಸುವ ಚಾಣಾಕ್ಷತೆ ಹೊಂದಿದ್ದಾರೆ. ಚಾಲೆಂಜ್ ಗಳನ್ನು ಎದುರಿಸುವ ಶಕ್ತಿ ಅವರಿಗಿದೆ.

ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಎಲ್ಲವನ್ನು ಎದುರಿಸಿ ಪಕ್ಷದ ಪರವಾಗಿ ನಿಂತವರು. ಪಕ್ಷ ನಿಷ್ಠೆ ಅವರಿಗೆ ಶ್ರೀರಕ್ಷೆ. ರಾಜ್ಯದಲ್ಲಿ ಅನೇಕ ನಾಯಕರು ಅಧಿಕಾರ ಅನುಭವಿಸಿ ಪಕ್ಷ ತೊರೆದಿದ್ದಾರೆ. ಆದರೆ, ಅವರು ಅಧಿಕಾರ ವಂಚಿತಾಗಿದ್ದಾಗಲೂ ಪಕ್ಷದ ಪರವಾಗಿ ನಿಂತಿದ್ದಾರೆ. ರಾಷ್ಟ್ರ ಮಟ್ಟದಲ್ಲಿಯೂ ಅವರು ಬಂಡೆಯಂತೆ ನಿಂತಿದ್ದಾರೆ.

Advertisement

ಕರ್ನಾಟಕದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಇಲ್ಲಿ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಯಶಸ್ವಿ ಆಗಲು ಸಾಧ್ಯವಿದೆ. ಡಿ.ಕೆ.ಶಿ ಡೈನಾಮಿಕ್ ಆಗಿರಬಹುದು. ಆದರೆ ಒಬ್ಬರೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೇಗದುಕೊಂಡು ಹೋಗಬೇಕು.

ಈಶ್ವರ್ ಖಂಡ್ರೆ ರಾಜ್ಯದ ಭವಿಷ್ಯದ ನಾಯಕರಾಗುವುದರಲ್ಲಿ ಸಂದೇಹವಿಲ್ಲ. ಸತೀಶ್ ಜಾರಕಿಹೊಳಿ ಎಲ್ಲೇ ಹೋದರು ಫಲಿತಾಂಶ ಗ್ಯಾರೆಂಟಿ, ಅವರು ಕೇವಲ ಬೆಳಗಾವಿ ರಾಜಕಾರಣಕ್ಕೆ ಮೀಸಲಾಗದೆ ರಾಜ್ಯ ಪ್ರವಾಸ ಮಾಡಬೇಕು. ಸಿದ್ದರಾಮಯ್ಯನಂತಹ ನಾಯಕರ ಅವಧಿಯಲ್ಲಿ ಕರ್ನಾಟಕ ರಾಜ್ಯದ ಗೋಲ್ಡನ್ ಏರಾ ವಾಗಿತ್ತು.  ಅವರು ತಳ ಸಮುದಾಯದ ಜನರ ಪರವಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದವರು.

ನಮ್ಮ ದೇಶ ಸಂಕಷ್ಟದಲ್ಲಿದೆ.  ದೇಶ ಭಕ್ತಿ ಹೇಳುವ ಜನರು ಚೀನಾ ನಮ್ಮ ದೇಶದ ಗಡಿ ಪ್ರವೇಶಿಸಿದ್ದಾರೆ. ಆದರೆ, ದೇಶದ ಪ್ರಧಾನಿ ಯಾರೂ ನಮ್ಮ ಗಡಿ ಪ್ರವೇಶಿಸಿಲ್ಲ ಎಂದು ಹೇಳುತ್ತಾರೆ ಪ್ರಧಾನಿ ಮಾತುಗಳು ಚೀನಾದಲ್ಲಿಯೂ ಚರ್ಚೆಗೆ ಗ್ರಾಸವಾಗುವಂತೆ ಆಯಿತು.

ಕಾಂಗ್ರೆಸ್ ಎಲ್ಲ ಪಕ್ಷಗಳಿಗಿಂತ ದೇಶ ಭಕ್ತ ಪಕ್ಷವಾಗಿದೆ. ದೇಶದಲ್ಲಿ ಪೆಟ್ರೊಲ್ ದರ ಹೆಚ್ಚಳವಾಗುತ್ತಿದೆ. 12 ಪಟ್ಟು ಕೇಂದ್ರ ಅಬಕಾರಿ ತೆರಿಗೆ ಹೆಚ್ಚಳ ಮಾಡಿದೆ.  ಪ್ರಧಾನಿ ಗರೀಬ್ ಕಲ್ಯಾಣ ಯೋಜನೆ ಸೋನಿಯಾ ಗಾಂಧಿ ಒತ್ತಾಯ ಮಾಡಿದ್ದಕ್ಕೆ ಮುಂದುವರೆಸಿದ್ದಾರೆ. ಜನರ ಬಳಿ ಹಣ ಇಲ್ಲ. ಜನರಿಗೆ ನೇರವಾಗಿ ಕೈಗೆ ಹಣ ದೊರೆಯುವಂತೆ ಮಾಡಬೇಕಿದೆ.

ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ. ಕೋವಿಡ್ ನಿಂದ ಸತ್ತವರನ್ನು ಅಮಾನವಿಯವಾಗಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಆ ರೀತಿ ಕಾಂಗ್ರೆಸ್ ಅವಧಿಯಲ್ಲಿ ಮಾಡಿದ್ದರೆ ಅಧಿಕಾರದಲ್ಲಿ ಒಂದು ನಿಮಿಷ ಇರಲು ಬಿಡುತ್ತಿರಲಿಲ್ಲ. ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಡಿ.ಕೆ.ಶಿವಕುಮಾರ್ ಜೊತೆ ಪಕ್ಷ ಇದೆ. ಹೈ ಕಮಾಂಡ್ ಅವರಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ದಿನೇಶ್ ಗುಂಡೂರಾವ್, ನಾನು ಸಂಕಷ್ಟದ ಪರಿಸ್ಥಿತಿಯಲ್ಲಿ ಅಧ್ಯಕ್ಷನಾಗಿದ್ದೆ. ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದೇನೆ. ಲೋಕಸಭೆ ಹಾಗೂ ಉಪ ಚುನಾವಣೆ ಸೋಲಿನಿಂದ ರಾಜಿನಾಮೆ ಕೊಡಲು ತೀರ್ಮಾನಿಸಿದೆ. ಪಕ್ಷ ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ  ಆಯ್ಕೆ ಮಾಡಿದ್ದು ಸೂಕ್ತವಾಗಿದೆ. ಅವರಿಗೆ ಛಲ ಇದೆ -ಗುರಿ ಇದೆ. ಅವರು ಬಯಸಿದ್ದನ್ನು ಮಾಡುತ್ತಾರೆ. ಡಿಕೆಶಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.

ನಮ್ಮ ಮುಂದಿನ ಗುರಿ ಏಕಾಂಗಿಯಾಗಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡಬೇಕು. ಯಾವುದೇ ಪಕ್ಷದ ಸಹವಾಸ ಬೇಡ. ಈಗ  ಒಳ್ಳೆಯ ತಂಡವಿದೆ. ಈ ತಂಡ ನಿಜವಾಗಲೂ ಯಶಸ್ಸು ಗಳಿಸುವ ಸಾಧ್ಯತೆ ಇದೆ ಎಂದರು.

ದೂರವಾಣಿ ಮೂಲಕ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಡಿ.ಕೆ ಶಿವಕುಮಾರ್ ಅವರಿಗೆ ಶುಭ ಕೋರಿದರು. ಕೋವಿಡ್ ಲಾಕ್ ಡೌನ್ ನಿಂದ ದೇಶ ಸಂಕಷ್ಟ ಎದುರಿಸುತ್ತಿದೆ. ಆರ್ಥಿಕವಾಗಿ ದೇಶ ತೊಂದರೆಯಲ್ಲಿದೆ. ಈಗ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ಅದಕ್ಕೆ ತಂಡವಾಗಿ ಎಲ್ಲರೂ ಕೂಡಿ ಕೆಲಸಮಾಡಬೇಕು ಎಂದು ಹಾರೈಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಗುರುವಾರ ತಮ್ಮ ಪದಗ್ರಹಣ ಕಾರ್ಯಕ್ರಮಕ್ಕೂ ಮುನ್ನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಮುಂಭಾಗ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಯೋಧರಿಗೆ ಗೌರವ ನಮನ ಸಲ್ಲಿಕೆ ಮಾಡಿ ಸೇವಾ ದಳದವರಿಂದ ವಂದೇ ಮಾತರಂ ಗೀತೆ ಹಾಡಲಾಯಿತು.  ವಿವಿಧ ಘಟಕಗಳು, ಮುಖಂಡರಿಂದ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ನಡೆಯಿತು.  ದೀಪ ಬೆಳಗುವ ಕಾರ್ಯಕ್ರಮದಲ್ಲಿ ವೇಣುಗೋಪಾಲ್, ಡಿ.ಕೆ.ಶಿವಕುಮಾರ್ , ಸಿದ್ದರಾಮಯ್ಯ,  ಖರ್ಗೆ, ಎಸ್.ಆರ್.ಪಾಟೀಲ್ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next