ಬೆಂಗಳೂರು: ಸಿದ್ದರಾಮಯ್ಯ ಅವರ ಬಣದವರ ವಿರುದ್ಧ ದೂರು ಹೇಳಲು ಹೋದ ಸಚಿವ ಡಿ.ಕೆ.ಶಿವಕುಮಾರ್‌ಗೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕ್ಲಾಸ್ ತೆಗೆದುಕೊಂಡರು ಎಂದು ಹೇಳಲಾಗಿದೆ.
ಶನಿವಾರ ತಡರಾತ್ರಿ ಕುಮಾರಕೃಪ ಅತಿಥಿಗೃಹದಲ್ಲಿ ವೇಣುಗೋಪಾಲ್ ಭೇಟಿ ಮಾಡಿದ್ದ ಅವರು, ಸರ್ಕಾರದ ವಿರುದ್ಧ ಮಾತನಾಡುತ್ತಿರುವವರೆಲ್ಲಾ ಸಿದ್ದರಾಮಯ್ಯ ಆಪ್ತ ಶಾಸಕರೇ. ಮನಸ್ಸು ಮಾಡಿದರೆ ಅವರನ್ನು ಯಾವತ್ತೋ ಸುಮ್ಮನಾಗಿಸಬಹುದಿತ್ತು. ಸಮಸ್ಯೆ ಈಗ ಬೀದಿಗೆ ಬಂದಿದೆ. ಸಿದ್ದರಾಮಯ್ಯ ಕೈಲಿ ಎಲ್ಲವೂ ಇದೆ ಎಂದು ಹೇಳಿದರು.
ಇದನ್ನು ಸಮಾಧಾನವಾಗಿಯೇ ಕೇಳಿಸಿಕೊಂಡ ಕೆ.ಸಿ.ವೇಣುಗೋಪಾಲ್, ಡಿ.ಕೆ.ಶಿವಕುಮಾರ್‌ಗೆ ಕ್ಲಾಸ್ ತೆಗೆದುಕೊಂಡರು . ನೀವು ಬೆಳಗಾವಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ್ದರಿಂದಲೇ ಜಾರಕಿಹೊಳಿ ಸಹೋದರರು ರೆಬೆಲ್ ಆಗಲು ಕಾರಣ. ನಿಮಗೆ ಯಾಕೆ ಬೆಳಗಾವಿ ವಿಚಾರದಲ್ಲಿ ಯಾಕೆ ಅಷ್ಟು ಆಸಕ್ತಿ. ನೀವು ಬೆಳಗಾವಿ ವಿಚಾರದಲ್ಲಿ ಮೂಗು ತೂರಿಸಬೇಡಿ. ನಿಮ್ಮಿಂದ ಬಳ್ಳಾರಿ ಶಾಸಕರು ಬಂಡಾಯ ಏಳುವಂತಾಗಿದೆ. ನಿಮ್ಮ ಡಾಮಿನೇಷನ್ ಆಪರೇಷನ್ ಕಮಲಕ್ಕೆ ಅನುಕೂಲವಾಗುತ್ತಿದೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂದು ಹೇಳಿದರು ಎಂದು ಹೇಳಲಾಗಿದೆ.
ಈ ಮಧ್ಯೆ, ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಸಮಾಧಾನಗೊಂಡಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರು 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು. ಅದಕ್ಕೂ ಮುನ್ನ ಗೃಹ ಸಚಿವರಾದ ತಮ್ಮ ಜತೆ ಚರ್ಚಿಸಿಲ್ಲ. ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದಾರೆ. ಹೀಗಾದರೆ ಹೇಗೆ ಎಂದು ವೇಣುಗೋಪಾಲ್ ಬಳಿಯೂ ಅಸಮಾಧಾನ ಹೊರ ಹಾಕಿದರು. ಪರಮೇಶ್ವರ್ ಅವರನ್ನು ವೇಣುಗೋಪಾಲ್ ಸಮಾಧಾನಪಡಿಸಿ ನಾನು ಮುಖ್ಯಮಂತ್ರಿಯವರ ಬಳಿ ಮಾತಾನಡುತ್ತೇನೆ ಎಂದರು ಎನ್ನಲಾಗಿದೆ.