ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೆಪಿಸಿಸಿ ರಾಜ್ಯಾಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮೋಹನ ಲಿಂಬಿಕಾಯಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸ್ಪರ್ಧೆ ಕುರಿತು ಡಿ.ಕೆ. ಶಿವಕುಮಾರ್ ಜೊತೆ ಸುದೀರ್ಘ ಚರ್ಚೆ ಮಾಡಲಾಗಿದೆ. ಧಾರವಾಡ ಕ್ಷೇತ್ರದಲ್ಲಿ ನಿಮ್ಮಂಥ ಸಮರ್ಥ ಅಭ್ಯರ್ಥಿ ಮತ್ತೊಬ್ಬರಿಲ್ಲ, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಭರವಸೆ ನೀಡಿದ್ದಾರೆ ಎಂದರು.
ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರೊಂದಿಗೆ ನಿರಂತರ ಸಂಪರ್ಕವಿದೆ. ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತು ಸದಸ್ಯನಾಗಿಯೂ ಸೇವೆ ಸಲ್ಲಿಸಿದ್ದರಿಂದ ಸಾಕಷ್ಟು ಜನರ ಪರಿಚಯವಿದೆ. ನಾಯಕರ ಸೂಚನೆ ಮತ್ತು ಭರವಸೆ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದೇನೆ. ಒಂದು ವೇಳೆ ಟಿಕೆಟ್ ಕೈತಪ್ಪಿದರೂ, ಯಾವುದೇ ಕಾರಣಕ್ಕೂ ಬಿಜೆಪಿಗೆ ಮರಳಿ ಹೋಗಲ್ಲ ಎಂದರು.
ಕುಂದಗೋಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಡಿ.ಕೆ. ಶಿವಕುಮಾರ ಅವರು ಶೀಘ್ರದಲ್ಲಿಯೇ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ ಎಂದರು.
ಬಿಜೆಪಿ ನಿರಂತರವಾಗಿ ಲಿಂಗಾಯತರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್‌ಗೆ ಬೆಂಬಲಿಸಿ, ಬಿಜೆಪಿಗೆ ತಕ್ಕಪಾಠ ಕಲಿಸಿದ್ದಾರೆ. ಅಲ್ಲದೆ, ಉತ್ತರ ಕರ್ನಾಟಕ ಭಾಗದ ಬಹುತೇಕ ಲಿಂಗಾಯತ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತಿದ್ದಾರೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೆ ಗೆಲ್ಲಬಹುದು ಎಂದು ಯೋಚಿಸಿ ಆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಅವರು ಅಲ್ಲಿಯೂ ಗೆಲ್ಲುವ ಸಾಧ್ಯತೆ ಕಡಿಮೆ ಎಂದು ಲಿಂಬಿಕಾಯಿ ಭವಿಷ್ಯ ನುಡಿದರು.