ಬೆಂಗಳೂರು:ಬೆಂಗಳೂರು:ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಸೋಮವಾರ ಐಟಿ ವಿಚಾರಣೆಗೆ ಹಾಜರಾಗಿದ್ದು, ಅಧಿಕಾರಿಗಳು ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.
ಐಟಿ ಅಧಿಕಾರಿಗಳ ವಿಚಾರಣೆ ಅಂತ್ಯವಾದ ನಂತರ ಹೊರಬಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮನ್ಸ್ ನೀಡಿದ್ದರಿಂದ ವಿಚಾರಣೆಗೆ ಹಾಜರಾಗಿದ್ದೇನೆ. ಅಧಿಕಾರಿಗಳು ನನ್ನ ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಸದ್ಯಕ್ಕೆ ಬೇರೆ ವಿಚಾರಗಳ ಬಗ್ಗೆ ಕಮೆಂಟ್ ಮಾಡೋಲ್ಲ ಎಂದು ಹೇಳಿದರು.
ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡಿದ್ದೇನೆ. ಅವರು ಕೇಳಿದ ಪ್ರಶ್ನೆಗಳ ಬಗ್ಗೆ ನಾನೇನು ಹೇಳಲಾರೆ. ಅವರಿಗೆ ವಿಚಾರಣೆ ನಡೆಸುವ, ಸಮನ್ಸ್ ನೀಡುವ ಅಧಿಕಾರ ಇದೆ ಎಂದು ಡಿಕೆಶಿ ತಿಳಿಸಿದರು.
ಡಿಕೆ ಶಿವಕುಮಾರ್ ಹಾಗೂ ಸಹೋದರ ಡಿಕೆ ಸುರೇಶ್ ಅವರು ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿಗೆ ಹಾಜರಾಗಿದ್ದರು. ಐಟಿ ಇಲಾಖೆ ಒಬ್ಬೊಬ್ಬರನ್ನಾಗಿಯೇ ವಿಚಾರಣೆಗೊಳಪಡಿಸುತ್ತಿದೆ. ಆ ಹಿನ್ನೆಲೆಯಲ್ಲಿ ಇಂದು ಡಿಕೆ ಸುರೇಶ್, ಜ್ಯೋತಿಷಿ ದ್ವಾರಕನಾಥ್, ಎಂಎಲ್ ಸಿ ರವಿ ಕೂಡಾ ವಿಚಾರಣೆಗೆ ಹಾಜರಾಗಿದ್ದಾರೆ.
ಆಗಸ್ಟ್ 2ರಂದು ಕೇಂದ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಾಏಕಿ ಡಿಕೆ ಶಿವಕುಮಾರ್ ಅವರ ನಿವಾಸ, ಕಚೇರಿ ಸೇರಿದಂತೆ 50ಕ್ಕೂ ಅಧಿಕ ಕಡೆ ದಾಳಿ ನಡೆಸಿದ್ದರು. ಸತತ ನಾಲ್ಕು ದಿನಗಳ ಕಾಲ ಡಿಕೆಶಿ ನಿವಾಸದಲ್ಲಿ ಪರಿಶೀಲನೆ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.