ಉಡುಪಿ: ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿರುವ ಡಬಲ್ ಎಂಜಿನ್ ಸರಕಾರದಿಂದ ಜನರ ಜೀವನದಲ್ಲಿ ಏನಾದರು ಬದಲಾವಣೆ ತಂದಿದೆಯಾ? ಅಚ್ಛೇ ದಿನ್ ಬರುತ್ತೆ ಅಂತ ಹೇಳಿದರು, ಯಾವತ್ತಾದರೂ ಬಂತಾ?ರೈತರು, ಮೀನುಗಾರರು, ಕೂಲಿ ಕಾರ್ಮಿಕರು, ಬಡವರ ಕಣ್ಣೀರನ್ನು ಒರೆಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿಲ್ಲ. ಆ ನಿಟ್ಟಿನಲ್ಲಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರನ್ನು ಆಯ್ಕೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡರು.
ಅವರು ಸೋಮವಾರ(ಎ.24) ಅಜ್ಜರಕಾಡಿನ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ. ಸೂರ್ಯ, ಚಂದ್ರ ಹುಟ್ಟೋದು ಎಷ್ಟು ಸತ್ಯವೋ. ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರುವುದು ಕೂಡಾ ಅಷ್ಟೇ ಸತ್ಯ. ಅದಕ್ಕಾಗಿ ನೀವು ಕಾಂಗ್ರೆಸ್ ಪಕ್ಷ ನೀಡಿರುವ ನಾಲ್ಕು ಗ್ಯಾರಂಟಿ ಕಾರ್ಡ್ ಅನ್ನು ಮನೆ, ಮನೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಡಿಕೆಶಿ ಹೇಳಿದರು.
ಮೀನುಗಾರರಿಗೆ ಸಬ್ಸಿಡಿ ಡೀಸೆಲ್ ಕೊಡುತ್ತೇವೆ ಎಂಬ ಮಾತನ್ನೂ ಬಿಜೆಪಿ ಉಳಿಸಿಕೊಂಡಿಲ್ಲ. ಪ್ರಣಾಳಿಕೆಯಲ್ಲಿನ ಭರವಸೆಯನ್ನು ಈಡೇರಿಸಿಲ್ಲ. ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಬಿಜೆಪಿ ಹೇಳಿತ್ತು. ಅದೂ ಕಾರ್ಯಗತವಾಗಿಲ್ಲ ಎಂದು ಡಿಕೆಶಿ ಆರೋಪಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಇಡೀ ಜಗತ್ತಿನಲ್ಲೇ ದೊಡ್ಡ ಹೆಸರನ್ನು ಪಡೆದಿದೆ. ಉದ್ಯಮಗಳನ್ನು, ಉದ್ಯೋಗವನ್ನು ಸೃಷ್ಟಿಮಾಡುವ ಪವಿತ್ರ ಕ್ಷೇತ್ರ ಇದಾಗಿದೆ. ಹೊರರಾಜ್ಯ, ವಿದೇಶದಿಂದ ಬಂದು ಇಲ್ಲಿ ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ. ನಿಮ್ಮದು ಪ್ರಜ್ಞಾವಂತರ, ವಿದ್ಯಾವಂತ, ಬುದ್ಧಿವಂತರ ಜಿಲ್ಲೆಯಾಗಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಉದ್ಯೋಗವನ್ನು ಸೃಷ್ಟಿಮಾಡಬಲ್ಲ, ವಿದ್ಯಾವಂತ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಹಾಗಾಗಿ ಉಡುಪಿ ಜಿಲ್ಲೆಯ ಪ್ರಬುದ್ಧ ಮತದಾರರು ಕಾಂಗ್ರೆಸ್ ಪಕ್ಷದ ಪ್ರಸಾದ್ ರಾಜ್ ಕಾಂಚನ್ ಅವರನ್ನು ಗೆಲ್ಲಿಸಬೇಕು ಎಂದು ವಿನಂತಿ ಮಾಡಿಕೊಳ್ಳುವುದಾಗಿ ಡಿಕೆಶಿ ಹೇಳಿದರು.
ರಾಜ್ಯದಲ್ಲಿರುವ ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕಾಗಿದೆ. ಸ್ವಚ್ಛ ಆಡಳಿತವೇ ನಮ್ಮ ಧ್ಯೇಯವಾಗಿದೆ. ಭ್ರಷ್ಟಾಚಾರದ ವಿರುದ್ಧದ ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ ಎಂದರು.
ಪ್ರಜಾಧ್ವನಿ ಯಾತ್ರೆಯ ಸಂದರ್ಭದಲ್ಲಿ ಕರಾವಳಿ ಪ್ರದೇಶದ ಪ್ರತ್ಯೇಕವಾದ ಪ್ರಣಾಳಿಕೆಯನ್ನು ಘೋಷಿಸಿದ್ದೇವು. ಕರಾವಳಿ ಅಭಿವೃದ್ಧಿಗಾಗಿ ಒಂದೊಂದು ನಿಗಮಗಳ ಸ್ಥಾಪನೆ, ಮೀನುಗಾರರು, ಮೂರ್ತೆದಾರರು ಸೇರಿದಂತೆ ಎಲ್ಲಾ ವರ್ಗದವರ ಏಳಿಗೆಯ ನಿಟ್ಟಿನಲ್ಲಿ ಸಂಘವನ್ನು ಸ್ಥಾಪಿಸಿ ಯುವಕರಿಗೆ ಆರ್ಥಿಕ ಶಕ್ತಿ ಕೊಡುವ ಚಿಂತನೆ ಕಾಂಗ್ರೆಸ್ ಪಕ್ಷದ್ದಾಗಿದೆ. ಅಷ್ಟೇ ಅಲ್ಲ ಕರಾವಳಿ ಪ್ರದೇಶದಲ್ಲಿ ಪ್ರತ್ಯೇಕವಾದ , ಉದ್ಯೋಗವನ್ನು ಸೃಷ್ಟಿಮಾಡಬಲ್ಲ ಪ್ರವಾಸೋದ್ಯಮ ಕೇಂದ್ರವನ್ನು ಮಾಡುವ ಉದ್ದೇಶ ಹೊಂದಿರುವುದಾಗಿ ಡಿಕೆ ಶಿವಕುಮಾರ್ ತಿಳಿಸಿದರು.
ಬಹಿರಂಗ ಸಮಾವೇಶಕ್ಕೂ ಮುನ್ನ ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರು ಉಡುಪಿಯ ಸಿಟಿ ಬಸ್ ನಿಲ್ದಾಣದಿಂದ ಪಾದಯಾತ್ರೆ ಮೂಲಕ ರೋಡ್ ಶೋ ನಡೆಸಿ, ಅಜ್ಜರಕಾಡಿನಲ್ಲಿ ಸಾರ್ವಜನಿಕ ಸಭೆ ನಡೆಸಲಾಗಿತ್ತು.
ಪ್ರಸಾದ್ ರಾಜ್ ಕಾಂಚನ್ ಗೆ ಕೃಷ್ಣಮೂರ್ತಿ ಆಚಾರ್ಯ ಬೆಂಬಲ:
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಾಂಗ್ರೆಸ್ ಮುಖಂಡ ಕೆ.ಕೃಷ್ಣಮೂರ್ತಿ ಆಚಾರ್ಯ ಅವರು ಸೋಮವಾರ ನಾಮಪತ್ರವನ್ನು ಹಿಂಪಡೆದುಕೊಂಡಿದ್ದು, ಅಜ್ಜರಕಾಡಿನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರಿಗೆ ಬಹಿರಂಗ ಬೆಂಬಲ ಘೋಷಿಸಿದ್ದರು.
ಸಮಾವೇಶದಲ್ಲಿ ಮಾಜಿ ಸಚಿವ, ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಸರಳಾ ಕಾಂಚನ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ್ ಹೇರೂರು, ಸರಳಾ ಕಾಂಚನ್, ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಕುಮಾರ್ ಹೆಗ್ಡೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.