Advertisement

ಕಣ್ಣೀರ ಸರದಿ ಈಗ ಡಿಕೆಶಿ

02:24 AM May 10, 2019 | Sriram |

ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಕಣ್ಣೀರು ಹಾಕುವ ಸರದಿ ಮುಂದುವರೆದಿದೆ. ಈ ಬಾರಿ ಸಚಿವ ಡಿ. ಕೆ. ಶಿವಕುಮಾರ ಅವರದ್ದು. ಕುಂದಗೋಳ ಉಪಚುನಾವಣೆಯ ಉಸ್ತುವಾರಿ ಹೊತ್ತಿರುವ ಸಚಿವರು, ಮಾಜಿ ಸಚಿವ ದಿ. ಸಿ.ಎಸ್‌. ಶಿವಳ್ಳಿ ಅವರನ್ನು ನೆನೆದು ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದರು.

Advertisement

ಗುರುವಾರ ಇಂಗಳಗಿ ಗ್ರಾಮದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಡಿ.ಕೆ. ಶಿವಕುಮಾರ, ಗೆಳೆಯ ಶಿವಳ್ಳಿ ಅವರನ್ನು ನೆನೆದು ಕಣ್ಣೀರು ಹಾಕಿದರು. ”ಶಿವಳ್ಳಿಗೆ ಹೃದಯಾಘಾತವಾಗಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಡಾ. ಮಂಜುನಾಥ ಅವರಿಗೆ ಕರೆ ಮಾಡಿ ಚಿಕಿತ್ಸೆ ಕುರಿತು ಮಾತನಾಡಿದೆ. ಮಾತು ಮುಗಿಸಿ ಒಂದೆರಡು ನಿಮಿಷ ಕಳೆದಿರಲಿಲ್ಲ. ಶಿವಳ್ಳಿ ಇನ್ನಿಲ್ಲ” ಎನ್ನುವ ಸುದ್ದಿ ಕೇಳಿ ಆಘಾತವಾಯಿತು ಎಂದು ಕಣ್ಣೀರು ಸುರಿಸಿದರು.

ಶಿವಳ್ಳಿಗಾಗಿ ನಾನು ಬಂದಿದ್ದೇನೆ. ಅವರಿಗೆ ಆಶೀರ್ವಾದ ಮಾಡಬೇಕು ಎಂದು ಬಂದಿದ್ದೀರಿ. ನಿಮ್ಮ ಪಾದಗಳಿಗೆ ನನ್ನ ನಮಸ್ಕಾರ ಹೇಳಲಿಕ್ಕೆ ನಿಮ್ಮ ಮುಂದೆ ನಿಂತಿದ್ದೇನೆ. ಈ ಚುನಾವಣೆ ಶಿವಳ್ಳಿ ಎಲೆಕ್ಷನ್‌ ಅಲ್ಲ. ಇದು ನಿಮ್ಮ ಚುನಾವಣೆ ಎಂದು ಹೇಳಲು ಬಂದಿದ್ದೇನೆ. ನೀವು ಹಗಲು-ರಾತ್ರಿ ಶಿವಳ್ಳಿ ಅವರೊಂದಿಗೆ ಬದುಕಿದ್ದೀರಿ, ಪರಸ್ಪರ ಕಷ್ಟ-ಸುಖ ಹೇಳಿಕೊಂಡಿದ್ದೀರಿ. ಪಂಚಾಯ್ತಿಯಿಂದ ಮಂತ್ರಿಯಾಗಿ ಮಾಡಿದ ಕೀರ್ತಿ ಈ ಕ್ಷೇತ್ರದ ಜನರಿಗೆ ಸಲ್ಲುತ್ತದೆ ಎಂದರು.

ನಿಮ್ಮ ಮಡಿಲಿಗೆ ಹಾಕಿದ್ದೇವೆ: ಆ ಹೆಣ್ಣು ಮಗಳು ಟಿಕೆಟ್ ಕೊಡಿ ಎಂದು ನಮ್ಮ ಮನೆಗಾಗಲಿ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾಯರ ಮನೆಗಾಗಲಿ ಬಂದವರಲ್ಲ. ಕುಸುಮಕ್ಕ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದಾರೆ.

ಶಿವಳ್ಳಿ ಸಾಹೇಬರ ಸ್ಥಾನ ತುಂಬಲಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡಲಾಗಿದೆ. ಕುಸುಮಾವತಿ ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ. ಅವರನ್ನು ವಿಧಾನಸೌಧಕ್ಕೆ ಕಳುಹಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಶಿವಳ್ಳಿ ಅವರ ಸ್ಥಾನ ತುಂಬಲು ನಮ್ಮ ಒತ್ತಡಕ್ಕೆ ಮಣಿದು ಸ್ಪರ್ಧಿಸಿರುವ ಕುಸುಮಾವತಿ ಅವರಿಗೆ ಈ ಕ್ಷೇತ್ರದ ಜನರು ಬೆಂಬಲಿಸಬೇಕು.

Advertisement

ನನ್ನ ಕ್ಷೇತ್ರದಂತೆ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ನನ್ನೊಂದಿಗೆ ನಿಕಟ ಸಂಪರ್ಕವಿದ್ದ ಶಿವಳ್ಳಿ ಎಂದಿಗೂ ತನ್ನ ವೈಯಕ್ತಿಕ ಬದುಕಿಗಾಗಿ ಏನನ್ನೂ ಮಾಡಿಕೊಂಡವನಲ್ಲ. ಕ್ಷೇತ್ರ, ಬಡವರು, ರೈತರ ಪರವಾಗಿ ಸಾಕಷ್ಟು ಕಾಳಜಿಯಿತ್ತು. ಕ್ಷೇತ್ರದ ಅಭಿವೃದ್ಧಿಗಾಗಿ ಸಚಿವರೆಲ್ಲರನ್ನೂ ಕಾಡಿ ಬೇಡಿಯಾ ದರೂ ಅನುದಾನ ತರುತ್ತಿದ್ದರು. ಅನುದಾನ ಮಂಜೂರು ಮಾಡದ ಹೊರತು ಕದಲುತ್ತಿರಲಿಲ್ಲ. ಅಷ್ಟೊಂದು ಕಾಳಜಿ ಅವರಲ್ಲಿತ್ತು. ಅವರಲ್ಲಿದ್ದ ಬದ್ಧತೆಯಿಂದ ಈ ಕ್ಷೇತ್ರ ಇಷ್ಟೊಂದು ಅಭಿವೃದ್ಧಿಯಾಗಿದೆ. ಅವರು ಬದುಕಿದ್ದರೆ ಅವರಲ್ಲಿದ್ದ ಚಿಂತನೆಯಿಂದ ಕ್ಷೇತ್ರದ ಚಿತ್ರಣವೇ ಬದಲಾಗುತ್ತಿತ್ತು. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಶಿವಳ್ಳಿ ಅವರು ಹೊಂದಿದ್ದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕುಸುಮಾವತಿಗೆ ಆಶೀರ್ವಾದ ಮಾಡಿ ಎಂದು ಭಾವುಕರಾದರು.

Advertisement

Udayavani is now on Telegram. Click here to join our channel and stay updated with the latest news.

Next