ಬನಹಟ್ಟಿ : ನೇಕಾರ ಸಂವಾದ ಕಾರ್ಯಕ್ರಮಕ್ಕೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಸಮೀಪ ಆಗಮಿಸುತ್ತಿದ್ದ ವೇಳೆ ಬನಹಟ್ಟಿ ಪಟ್ಟಣದ ಸಮೀಪ ಕಾರ್ಯಕರ್ತರು ಮತ್ತು ಡಿಕೆಶಿ ಅಭಿಮಾನಿ ಬಳಗದವರು ಸೇಬಿನ ಹಾರ ಹಾಕಿ ಜೆಸಿಬಿ ಮೂಲಕ ಹೂಮಳೆ ಸುರಿಸಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಈ ವೇಳೆ ಅಭಿಮಾನಿಗಳು ಬೆಳ್ಳಿ ಗದೆ ನೀಡಿದ್ರು ಅಭಿಮಾನಿಗಳ ಅದ್ಧೂರಿ ಸ್ವಾಗತಕ್ಕೆ ಡಿಕೆಶಿ ಫುಲ್ ಫಿದಾ ಆದ್ರು. ಈ ವೇಳೆ ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ಹಲವು ಮುಖಂಡರು ಜೊತೆಯಲ್ಲಿ ಇದ್ದರು.
ಬಾದಾಮಿ ಮತಕ್ಷೇತ್ರಕ್ಕೆ ಸಿದ್ದರಾಮಯ್ಯ ಆಗಮಿಸಿದ ವೇಳೆ ಅಭಿಮಾನಿಗಳು ಹೂಮಳೆ ಸುರಿಸಿ ಮುಂದಿನ ಸಿಎಂ ಎಂದು ಘೋಷಣೆ ಮಾಡಿದ್ದರು. ಅದಕ್ಕೆ ಟಕ್ಕರ ಕೊಡುವಂತೆ ಇಂದು ಡಿಕೆಶಿಗೆ ಹೂಮಳೆ ಸುರಿಸಿ ಮುಂದಿನ ಸಿಎಂ ಡಿಕೆ ಎನ್ನುವ ಘೋಷಣೆಯನ್ನು ಕೆಲವು ಕಾರ್ಯಕರ್ತರು ಕೂಗಿದ್ರು. ಹೈಕಮಾಂಡ್ ಸೂಚನೆ ಬಳಿಕವೂ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ತಣ್ಣಗಾಗಿಲ್ಲ ಎನ್ನುವುದಕ್ಕೆ ಕಟೌಟ್ ರಾಜಕೀಯ ಸಾಕ್ಷಿಯಾಯ್ತು. ನೇಕಾರರ ಜೊತೆ ಸಂವಾದ ಏರ್ಪಡಿಸಿದ್ದ ಕಲ್ಯಾಣ ಮಂಟಪದ ಆವರಣದಲ್ಲಿ ಎತ್ತ ನೋಡಿದ್ರೂ ಡಿಕೆಶಿ ಕಟೌಟ್ ಗಳು ರಾಜಾಜಿಸುತ್ತಿದ್ವು. ಇದರ ಮದ್ಯೆ ಸಿದ್ದರಾಮಯ್ಯನವರ ಬೃಹತ್ ಕಟೌಟ್ ಇದ್ರು, ಅದನ್ನ ನಿಲ್ಲಿಸದೇ ಪಕ್ಕಕೆ ಇಡಲಾಗಿತ್ತು. ಇದರಿಂದ ಸಿದ್ದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಸಿದ್ದು ಅಭಿಮಾನಿಗಳ ಆಕ್ಷೇಪದ ಬೆನ್ನಲ್ಲೆ ದಿಢೀರನೆ ಸಿದ್ದರಾಮಯ್ಯ ಕಟೌಟ್ ನಿಲ್ಲಿಸಲಾಯ್ತು. ಇನ್ನು ನೇಕಾರರ ಜೊತೆ ಸಂವಾದದ ವೇಳೆ ಮಾತನಾಡಿದ ಡಿಕೆಶಿ, ಡಿಕೆ ಡಿಕೆ ಅಂತ ಕೂಗಬೇಡ್ರಪ್ಪಾ, ಅದ್ಯಾರೋ ಡಿಕೆ ಪಾಕೆ ಅಂತೀರಾ ಅದನ್ನೆಲ್ಲಾ ಬಿಡ್ರಪ್ಪಾ. ನನ್ನ ಹಾಳು ಮಾಡೋಕೆ ನೀವು ಈ ಕೆಲಸ ಮಾಡ್ತಿರೋದು. ಈಗಲೇ ಕೂಗಿ ನನ್ನ ಹೆಸರು ಹಾಳು ಮಾಡಬೇಡಿ. ನಿಮ್ಮ ಅಭಿಮಾನ ಇದ್ದರೆ ಮುಂದೆ ತೋರಿಸುವಿರಂತೆ ಎಂದು ಹೇಳುವ ಮೂಲಕ ಬಣ ರಾಜಕೀಯದ ಡ್ಯಾಮೇಜ್ ಕಂಟ್ರೋಲ್‌ಗೆ ಡಿಕೆಶಿ ಮುಂದಾದರು.