ಬೆಂಗಳೂರು: ಐಟಿ ದಾಳಿ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಬಂಧಿಸಿದ್ದನ್ನು ಖಂಡಿಸಿ ರಾಮನಗರ ಜಿಲ್ಲೆ ಸೇರಿದಂತೆ ಹಲವು ಕಡೆ ನಡೆದ ಬಂದ್ ಮತ್ತು ಪ್ರತಿಭಟನೆಗಳಂದ ಉಂಟಾದ ನಷ್ಟವನ್ನು ನಿಖರವಾಗಿ ಅಂದಾಜು ಮಾಡಲು ತಜ್ಞರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.
ಈ ಕುರಿತಂತೆ ಕನಕಪುರ ತಾಲೂಕಿನ ರವಿಕುಮಾರ್ ಕಂಚನಹಳ್ಳಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಹೇಮಂತೌ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.
ಆಗ, ಸರ್ಕಾರದ ಪರ ವಕೀಲರು ನಷ್ಟದ ಅಂದಾಜು ಮಾಡಲು ಕಾರ್ಯಕಾರಿ ಇಂಜಿನಿಯರ್ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಅದನ್ನು ಒಪ್ಪದ ನ್ಯಾಯಪೀಠ, ಕಾರ್ಯಕಾರಿ ಇಂಜಿನಿಯರ್ ನೇಮಕ ಸರಿಯಲ್ಲ.
ಅದರ ಬಗ್ಗೆ ಅವರಿಗೆ ಜ್ಞಾನ ಇರುತ್ತದೆಯೇ, ಅವರು ನಷ್ಟ ನಿರ್ಧರಿಸಲು ಅವರಿಂದ ಹೇಗೆ ಸಾಧ್ಯ? ಅವರನ್ನು ತಜ್ಞರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ, ಉನ್ನತ ಮಟ್ಟದ ಜ್ಞಾನವಿರುವ ತಜ್ಞರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಫೆ.10ಕ್ಕೆ ಮುಂದೂಡಿತು.
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ 2019ರ ಸೆ.4ರಿಂದ 11ರವರೆಗೆ ರಾಮನಗರ ಸೇರಿದಂತೆ ಹಲವು ಕಡೆ ನಡೆದ ಪ್ರತಿಭಟನೆಗಳಿಂದಾಗಿ ಪ್ರಾಥಮಿಕ ವರದಿಯಂತೆ ಸುಮಾರು 82 ಕೋಟಿ ರೂ. ನಷ್ಟವಾಗಿದೆ. ಒಟ್ಟು 19 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. ಒಟ್ಟು 40 ಮಂದಿಯನ್ನು ಬಂಧಿಸಲಾಗಿತ್ತು ಎಂದು ಸರ್ಕಾರ ಈ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು.