Advertisement

ಕೇವಲ 1000 ರೂಪಾಯಿಗೆ ಒಂದು ಬೆಡ್; 650 ಪರಿಸರ ಸ್ನೇಹಿ ಬೆಡ್ ರವಾನೆಗೆ ಡಿಕೆಶಿ ಹಸಿರು ನಿಶಾನೆ

08:46 PM Jul 18, 2020 | sudhir |

ದೊಡ್ಡಬಳ್ಳಾಪುರ : ರಾಜ್ಯದಲ್ಲಿ ಕೋವಿಡ್ ಸೋಂಕು ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಗಳು ಮತ್ತಿತರ ಕಡೆ ಸೋಂಕಿತರಿಗೆ ಬೆಡ್ ಗಳ ಕೊರತೆ ಉಂಟಾಗಿದ್ದು, ಅವರ ಪ್ರಾಣಕ್ಕೂ ಸಂಚಾರ ಉಂಟಾಗಿದೆ. ಇಂಥ ಸಂಕಷ್ಟ ಸನ್ನಿವೇಶದಲ್ಲಿ ಅತಿ ಕಡಿಮೆ ವೆಚ್ಚ, ಸುಲಭ ಸಾಗಣೆ, 350 ಕೆಜಿಯಷ್ಟು ಭಾರ ತಡೆಯಬಹುದಾದ ಶೇಕಡಾ 100 ರಷ್ಟು ನವೀಕರಿಸಬಹುದಾದ ಪರಿಸರ ಸ್ನೇಹಿ 650 ಬೆಡ್ ಗಳನ್ನು (Corrigated Beds) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದೊಡ್ಡಬಳ್ಳಾಪುರದಿಂದ ಕಲ್ಯಾಣ ಕರ್ನಾಟಕಕ್ಕೆ ಸಾಗಣೆ ಮಾಡಲು ಶನಿವಾರ ಹಸಿರು ನಿಶಾನೆ ತೋರಿದರು.

Advertisement

ಹಾಸಿಗೆ, ದಿಂಬು ಎಲ್ಲ ಸೇರಿ ಬೆಡ್ ವೊಂದಕ್ಕೆ ಕೇವಲ 1000 ರುಪಾಯಿಗೂ ಕಡಿಮೆ ವೆಚ್ಚ. ಇಂಥ ಬೆಡ್ ಗಳನ್ನು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಗುಲ್ಬರ್ಗಾಕ್ಕೆ 550 ಹಾಗೂ ರಾಯಚೂರಿಗೆಂದು 100 ಒಟ್ಟು 650 ಬೆಡ್ ಗಳನ್ನು ಇಲ್ಲಿನ ವಾಡ್ ಪ್ಯಾಕ್ ಸಂಸ್ಥೆಯಿಂದ ಖರೀದಿಸಿದ್ದು, ಡಿ.ಕೆ. ಶಿವಕುಮಾರ್ ಅವರು ಅವುಗಳನ್ನು ಖುದ್ದು ಪರಿಶೀಲನೆ ಮಾಡಿ ಕಳುಹಿಸಿಕೊಟ್ಟರು. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಸ್ಥಳೀಯ ಶಾಸಕ ವೆಂಕಟರಮಣ ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಕುರಿತು ಮಾತನಾಡಿದ ಡಿ. ಕೆ. ಶಿವಕುಮಾರ್ ಈ ಬೆಡ್ ಗಳ ಗುಣಮಟ್ಟವನ್ನು ನಾನು ಖುದ್ದು ಪರಿಶೀಲಿಸಿದ್ದೇನೆ. ಇವುಗಳನ್ನು ಕೇವಲ 5 ನಿಮಿಷದಲ್ಲಿ ಜೋಡಿಸಬಹುದು. ಅದೇ ರೀತಿ 5 ನಿಮಿಷದಲ್ಲಿ ಬಿಚ್ಚಬಹುದು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಯಾವಾಗ ಬೇಕಾದರೂ ಸಾಗಿಸಬಹುದು. ಎಲ್ಲಕಿಂಥ ಮಿಗಿಲಾಗಿ ಮಡಚಿ ಒಂದೇ ಲಾರಿಯಲ್ಲಿ 650 ಬೆಡ್ ಗಳನ್ನು ಸಾಗಿಸಬಹುದು. ರಾಜ್ಯ ಸರಕಾರ ದಿನವೊಂದಕ್ಕೆ 850 ರುಪಾಯಿ ದರದಲ್ಲಿ ಬಾಡಿಗೆಗೆ ಬೆಡ್ ಗಳನ್ನು ಪಡೆಯಲು ಮುಂದಾಗಿರುವ ಹೊತ್ತಿನಲ್ಲಿ ಕೇವಲ 1000 ರುಪಾಯಿಗೆ ಇದನ್ನು ಖರೀದಿಸಬಹುದಾಗಿರುವುದು ಲಾಭಕರ. ಜತೆಗೆ ಕೋವಿಡ್ ಸೋಂಕಿತರ ದೃಷ್ಟಿಯಿಂದ ಹೆಚ್ಚು ಪ್ರಯೋಜನಕಾರಿ ಎಂದರು.

ರಾಜ್ಯದಲ್ಲಿ ಇದೀಗ ರೋಗ ಲಕ್ಷಣ ಇರುವ ಸೋಂಕಿತರು ಹಾಗೂ ರೋಗ ಲಕ್ಷಣ ಇಲ್ಲದ ಸೋಂಕಿತರು ಎಂಬ ಅವಶ್ಯಕ ವಿಭಜನೆ ಇಲ್ಲದೆ ಎಲ್ಲರೂ ಒಂದೇ ಕಡೆ ದಾಖಲಾಗಿರುವುದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಒತ್ತಡ ಹೆಚ್ಚಾಗಿದೆ. ಸರಕಾರ ಕೂಡ ಇಲ್ಲಿ ಎಡವಿದೆ. ಇಂಥ ಸಂದರ್ಭದಲ್ಲಿ ಈ ತೆರನ ಹಾಸಿಗೆಗಳನ್ನು ಸ್ಟೇಡಿಯಂ, ಕಲ್ಯಾಣ ಮಂಟಪ, ಬಯಲು ಪ್ರದೇಶ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡುವುದರಿಂದ ರೋಗ ಲಕ್ಷಣ ಇಲ್ಲದವರಿಗೆ ಇಂಥ ಕಡೆ ಚಿಕಿತ್ಸೆ ನೀಡಬಹುದು. ಇದರಿಂದ ಉಸಿರಾಟದ ತೊಂದರೆ ಮತ್ತಿತರ ಗಂಭೀರ ರೋಗ ಲಕ್ಷಣದಿಂದ ನರಳುತ್ತಿರುವವರು ಹಾಗೂ ವಯಸ್ಸಾದ ಸೋಂಕಿತರಿಗೆ ವೆಂಟಿಲೇಟರ್ ಯುಕ್ತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬಿದ್ದಿರುವ ಒತ್ತಡವನ್ನು ನಿವಾರಿಸಬಹುದಾಗಿದೆ.

Advertisement

ಕಡಿಮೆ ದರದಲ್ಲಿ ಸಿಗುವ ಈ ಬೆಡ್ ಗಳನ್ನು ನಮ್ಮ ಸರ್ಕಾರ ಕೂಡ ಖರೀದಿಸಬಹುದು. ತೆಲಂಗಾಣ ಸರ್ಕಾರ ಈಗಾಗಲೇ 5000ಕ್ಕೂ ಹೆಚ್ಚು ಹಾಸಿಗೆಗಳನ್ನು ಖರೀದಿಸಿದ್ದು, ದೇಹಲಿಯಲ್ಲೂ ಇದೇ ಮಾದರಿ ಹಾಸಿಗೆ ಬಳಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಬಳಸಲು ಇಂತಹ ಗುಣಮಟ್ಟದ ಹಾಸಿಗೆ ತಯಾರಿಸುತ್ತಿರುವ ವ್ಯಾಡ್ ಪ್ಯಾಕ್ ಸಂಸ್ಥೆಗೆ ರಾಜ್ಯದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಪಕ್ಷದ ವತಿಯಿಂದ ರಾಜ್ಯ ಸರಕಾರಕ್ಕೂ ಒಂದಷ್ಟು ಹಾಸಿಗೆಗಳನ್ನು ಕೊಡುಗೆ ನೀಡುವ ಯೋಚನೆಯಿದೆ.

ರಾಜ್ಯ ಸರಕಾರ ಕೋವಿಡ್ ಸಲಕರಣೆಗಳ ವಿಚಾರದಲ್ಲಿ ಮಾಡಿರುವ ಭ್ರಷ್ಟಾಚಾರದ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಲೆಕ್ಕ ಕೇಳಿದ್ದಾರೆ. ನಾನು ಮಾಧ್ಯಮಗಳಲ್ಲಿ ಬಂದಿರುವ ವರದಿ ಆಧರಿಸಿ ಉತ್ತರ ಕೇಳಿದ್ದೇನೆ. ಸರಕಾರದ ಈ ಅಕ್ರಮ ವಿರುದ್ಧದ ಹೋರಾಟವನ್ನು ಪಕ್ಷದಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next