Advertisement

ಸರ್ಕಾರದ ವೈಫಲ್ಯ ಜನರನ್ನು ಗೊಂದಲ ಮತ್ತು ಆತಂಕಕ್ಕೆ ಸಿಲುಕಿಸಿದೆ: ಡಿ.ಕೆ ಶಿವಕುಮಾರ್

01:50 PM Jul 13, 2020 | sudhir |

ಬೆಂಗಳೂರು: ಸರ್ಕಾರ ಕೋವಿಡ್ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿರುವುದರಿಂದ ಜನರಲ್ಲಿ ಆತಂಕ ಹಾಗೂ ಗೊಂದಲ ಹೆಚ್ಚಾಗಿದೆ. ಹೀಗಾಗಿ ಅವರು ಬೆಂಗಳೂರು ತೊರೆದು ಹಳ್ಳಿಗಳತ್ತ ಸಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

Advertisement

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಸರ್ಕಾರ ಮತ್ತೆ ಲಾಕ್ ಡೌನ್ ಮಾಡುತ್ತಿರುವ ವಿಚಾರದ ಬಗ್ಗೆ ನಾವು ಮಾತನಾಡುವುದಿಲ್ಲ. ಅವರ ಆಡಳಿತ ಕಾರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಈ ಕೋವಿಡ್ ಪಿಡುಗನ್ನು ಪಕ್ಷಾತೀತವಾಗಿ ಎದುರಿಸಬೇಕು ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಆದರೆ ಬಿಜೆಪಿ ಈ ವಿಚಾರದಲ್ಲೂ ತಮ್ಮ ರಾಜಕೀಯ ಸಾಧಿಸುತ್ತಿದ್ದಾರೆ. ಅವರು ನಮ್ಮನ್ನು ಕರೆದು ಚರ್ಚಿಸಿದರೆ ನಾವು ಈ ಬಗ್ಗೆ ಮಾತನಾಡುತ್ತೇವೆ.

ಬಿಜೆಪಿ ಮಂತ್ರಿಗಳ ಮಾತುಗಳನ್ನು ನಾವು ಗಮನಿಸುತ್ತಿದ್ದೇವೆ. ಉಪಮುಖ್ಯಮಂತ್ರಿಗಳು ತಮ್ಮ ಪಕ್ಷದ ಕಾರ್ಯಕರ್ತರನ್ನು ಸ್ವಯಂ ಸೇವಕರಾಗಿ ನೇಮಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ವಿಚಾರವಾಗಿ ನಾನು ಸಿಎಂಗೆ ಪತ್ರ ಬರೆದಿದ್ದು, ನಮ್ಮ ಕಾರ್ಯಕರ್ತರು ಆರಂಭದಿಂದ ಜನರ ಸೇವೆ ಮಾಡುತ್ತಿದ್ದು, ಸರ್ಕಾರದ ಜತೆಗೂಡಿ ಕೆಲಸ ಮಾಡಲು ಸಿದ್ಧ ಎಂದು ತಿಳಿಸಿದ್ದೇನೆ. ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡೋಣ.

ಸರ್ಕಾರದಲ್ಲಿ ಅನೇಕ ಗೊಂದಲಗಳಿವೆ. ಅವರು ಯಾರನ್ನು ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಮೊದಲು ಆರೋಗ್ಯ ಸಚಿವರು, ನಂತರ ವೈದ್ಯಕೀಯ ಶಿಕ್ಷಣ ಸಚಿವರು, ನಂತರ ಶಿಕ್ಷಣ ಸಚಿವರನ್ನು ಉಸ್ತುವಾರಿಯಾಗಿ ನೇಮಿಸಿದರು. ಆಮೇಲೆ ಬೆಂಗಳೂರಿನಲ್ಲೇ ನಾಲ್ಕೈದು ಸಚಿವರಿಗೆ ಹೊಣೆ ನೀಡಿದ್ದಾರೆ. ರಾಜಕೀಯ ಕಾರ್ಯದರ್ಶಿಗಳು ಕೂಡ ಈಗ ಮಂತ್ರಿಗಳ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳನ್ನೂ ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಸರ್ಕಾರ ಗೊಂದಲ ಹಾಗೂ ವೈಫಲ್ಯಗಳಿಂದ ಕೂಡಿದ್ದು ಜನರಿಗೆ ಸರಿಯಾದ ಭರವಸೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನ ಬೇಸತ್ತು ತಮ್ಮ ಊರಿಗೆ ವಾಪಸ್ ಹೋಗುತ್ತಿದ್ದಾರೆ.

ಹಳ್ಳಿಗಳಲ್ಲೂ ಆತಂಕ ಹೆಚ್ಚುತ್ತಿದೆ. ನಾನು ಜಿಲ್ಲಾ ಅಧ್ಯಕ್ಷರುಗಳ ಜತೆ ಮಾತನಾಡಿದ್ದು, ಇನ್ನು ಕೆಲವು ಯುವ ನಾಯಕರನ್ನು ಚರ್ಚಿಸಲು ಆಹ್ವಾನಿಸಿದ್ದೇನೆ. ನಂತರ ಹಿರಿಯ ನಾಯಕರ ಜತೆ ಚರ್ಚಿಸಲಿದ್ದೇವೆ ಎಂದರು.

Advertisement

ಸಚಿನ್ ಪೈಲಟ್ ಪಕ್ಷ ಬಿಡುವುದಿಲ್ಲ ಎಂಬ ನಂಬಿಕೆ ಇದೆ:

ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಕಾಂಗ್ರೆಸಿಗ. ಅವರ ತಂದೆ ಹಾಗೂ ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಅವರು ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಪಕ್ಷದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಅದನ್ನು ನಮ್ಮ ರಾಷ್ಟ್ರೀಯ ನಾಯಕರು ಬಗೆ ಹರಿಸಲಿದ್ದಾರೆ.

ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವುದು ಬಿಜೆಪಿಯ ಅಜೆಂಡಾ. ಬಿಜೆಪಿ ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಜನರ ದಾರಿ ತಪ್ಪಿಸುತ್ತಿದೆ. ಜನರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next