ಕನಕಪುರ: “ತಾಲೂಕಿನ ನೂರಾರು ಜನ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಬೇರೆ ಬೇರೆ ನಗರಗಳಿಗೆ ವಲಸೆ ಹೋಗಿದ್ದಾರೆ. ಯಾವುದೇ ನಗರದಲ್ಲಿ ಸ್ವಂತ ಸೂರು ಮತ್ತು ಬದುಕು ಕಟ್ಟಿಕೊಂಡರೂ ನಿಮ್ಮ ಮೂಲವನ್ನು ಯಾರೂ ಅಳಸಿ ಹಾಕಲು ಸಾಧ್ಯವಿಲ್ಲ. ನಿಮ್ಮ ಸೇವೆ ಮಾಡಲು ನಾವು ಸದಾ ಸಿದ್ಧರಿದ್ದೇವೆ. ನೀವು ಎಲ್ಲೇ ವಾಸವಿದ್ದರೂ ಅಲ್ಲಿಯೂ ತಮ್ಮ ಪ್ರಭಾವ ಬೀರಿ ನಮ್ಮ ಪಕ್ಷಕ್ಕೆ ಮತಗಳನ್ನು ಕೊಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕರಾದ ಡಿ.ಕೆ. ಶಿವಕುಮಾರ್ ತಿಳಿಸಿದರು.
7 ಬಾರಿ ಆಯ್ಕೆ: ಡಿಕೆಎಸ್ ಚಾರಿಟಬಲ್ ಇನ್ಸ್‌ಟ್ಯೂಟ್ ಟ್ರಸ್ಟ್ ವತಿಯಿಂದ ಕಳೆದ 5 ದಿನಗಳಿಂದ ನಡೆದ ಕನಕೋತ್ಸವದ ಕೊನೇ ದಿನ ಭಾನುವಾರ ಸಾಧಕರ ಸಮಾವೇಶದಲ್ಲಿ ಮಾತನಾಡಿದರು. ಈ ತಾಲೂಕಿನ ಜನ ಕಳೆದ ಏಳು ಬಾರಿ ಶಾಸಕನಾಗಿ ನನ್ನನ್ನು ಆಯ್ಕೆ ಮಾಡಿ ಇಡೀ ರಾಜ್ಯಕ್ಕೆ ಪರಿಚಯ ಮಾಡಿಕೊಟ್ಟಿದ್ದೀರಿ. ಸಹೋದರ ಡಿ.ಕೆ.ಸುರೇಶ್ ಅವರನ್ನು ಮೂರು ಬಾರಿ ಲೋಕಸಭೆಗೆ ಆಯ್ಕೆ ಮಾಡಿದ್ದೀರಿ. ಆದರೆ, ನಾವು ನಿಮ್ಮ ಋಣ ತೀರಿಸಿದ್ದೀವಿ. ಅದಕ್ಕೆ ನಿಮ್ಮ ಕಣ್ಣುಗಳೇ ಸಾಕ್ಷಿ ಎಂದರು.
ಪ್ರಭಾವ ಬೀರಿ: ತಾಲೂಕು ಕಳೆದ 2-3 ದಶಕಗಳ ಹಿಂದೆ ಹೇಗಿತ್ತು. ಈಗ ಹೇಗಿದೆ. ಕುಡಿಯುವ ನೀರು, ರಸ್ತೆ, ಮೂಲ ಸೌಕರ್ಯ ಕಲ್ಪಿಸಿಕೊಟ್ಟಿದ್ದೇವೆ. ತಾಲೂಕು ಕಚೇರಿ, ನಗರಸಭೆ ಹಾಗೂ ಹಲವಾರು ಸುಸಜ್ಜಿತ ಸರ್ಕಾರಿ ಕಚೇರಿಗಳನ್ನು ನಿರ್ಮಾಣ ಮಾಡಿದ್ದೇವೆ. ಸುರೇಶ್ ಅವರ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಿದ್ದೇವೆ ಎಂದರು.
ಸಹಾಯ ಮಾಡಲಿಲ್ಲ: ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಜನಸಾಮಾ ನ್ಯರು ಸಂಕಷ್ಟಕ್ಕೆ ಸಿಲುಕಿದಾಗ ಸರ್ಕಾರ ಜನರ ಸಹಾ ಯಕ್ಕೆ ಬರಲಿಲ್ಲ. ಅಡುಗೆ ಅನಿಲ, ಇಂಧನ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಂಕಷ್ಟದಲ್ಲಿದ್ದಾರೆ. ಜನಸಾಮಾನ್ಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸರ್ಕಾರ ಯಾವುದೇ ಸಹಾಯ ಮಾಡ ಲಿಲ್ಲ. ಜನರಿಗೆ ಈ ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನು ಮಾತ್ರ ಕೊಟ್ಟಿದೆ ಎಂದು ಹರಿಹಾಯ್ದರು.
ಭರ್ತಿ ಮಾಡಿಲ್ಲ: ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರ ಎಂದು ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯನವರು ಹೇಳಿದ್ದಲ್ಲ. ಸರ್ಕಾರ ಕೊಡುವ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರ ಸಂಘದಿಂದಲೇ ಇದು 40 ಪರ್ಸೆಂಟ್ ಸರ್ಕಾರ ಎಂದು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಬೀದಿಯಲ್ಲಿ ನಿಂತು ಸ್ವಪಕ್ಷೀಯರೇ ಕೆಸರೆರಚಾಟ ಮಾಡಿ ಕೊಂಡಿದ್ದಾರೆ. 2500 ಕೋಟಿ ಕೊಟ್ಟರೆ ಮುಖ್ಯ ಮಂತ್ರಿಗಳ ಕುರ್ಚಿ ಮಾರಾಟಕ್ಕಿದೆ ಎಂದು ಯತ್ನಾಳ ಅವರು ಹೇಳುತ್ತಾರೆ. ಪಿಎಸ್‌ಐ ಹಗರಣದಲ್ಲಿ ಬಿಜೆಪಿ ನಾಯಕರೇ ಭಾಗಿಯಾಗಿದ್ದಾರೆ ಎಂದು ಸ್ವಪಕ್ಷೀಯರೇ ಒಪ್ಪಿಕೊಂಡಿದ್ದಾರೆ. ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡುತ್ತಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಚಂದ್ರಶೇಖರ್, ನಗರಸಭೆ ಅಧ್ಯಕ್ಷ ಕೆ.ಟಿ.ಕಿರಣ್, ಹಲವಾರು ಕಾಂಗ್ರೆಸ್ ಮುಖಂಡರು ಇದ್ದರು.
ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದೆ. ಬಿಜೆಪಿ ನಾಯಕರು ಮಾಡುವ ಹಗರಣಗಳಿಗೆ ಸಿಬಿಐ, ಇಡಿ ತನಿಖೆ ಮಾಡುವುದಿಲ್ಲ. ಆದರೆ, ವಿರೋಧ ಪಕ್ಷದ ನಾಯಕರ ಮೇಲೆ ಇಡಿ, ಸಿಬಿಐ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯವರದ್ದು ಭಾವನಾತ್ಮಕ ರಾಜಕೀಯ ನಮ್ಮ ರಾಜಕೀಯ ಬದುಕು ಕಟ್ಟುವ ರಾಜಕೀಯ ಮುಂದಿನ ಚುನಾವಣೆಯಲ್ಲಿ ನಿಮ್ಮ ಪ್ರೀತಿ, ವಿಶ್ವಾಸವು ಸಂಸದರು, ಶಾಸಕರ ಮೇಲೆ ಇದ್ದರೆ ಸಾಲದು, ಕಾಂಗ್ರೆಸ್ ಮೇಲೆ ಇರಬೇಕು.
– ಪ್ರಿಯಾಂಕ್ ಖರ್ಗೆ, ಶಾಸಕ