ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಟಿಕೆಟ್‌ಗೆ ಅರ್ಜಿ ಸಲ್ಲಿಸಿದವರು ತಾವೇ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವುದು ಅಥವಾ ಹೇಳಿಕೆ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಾಕೀತು ಮಾಡಿದ್ದಾರೆ.
ಆಕಾಂಕ್ಷಿಗಳು ಗುಂಪುಗಾರಿಕೆಯಲ್ಲಿ ತೊಡಗಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕುರಿತು ಬಹಿರಂಗ ಪತ್ರ ಬರೆದಿರುವ ಅವರು, ಪಕ್ಷದ ಅನುಮತಿ ಇಲ್ಲದೆ ಯಾವುದೇ ಟಿಕೆಟ್ ಆಕಾಂಕ್ಷಿ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರ, ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಪದಾಧಿಕಾರಿಗಳ, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ಅನುಮತಿಯಿಲ್ಲದೆ ಯಾವುದೇ ಸಭೆಗಳನ್ನು ನಡೆಸುವಂತಿಲ್ಲ ಎಂದು ಖಡಕ್ ಆಗಿ ತಿಳಿಸಿದ್ದಾರೆ.
ಕೆಲವು ಕಡೆಗಳಲ್ಲಿ ಪಕ್ಷದ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳು ತಮ್ಮದೇ ಗುಂಪು ಕಟ್ಟಿಕೊಂಡು ಕೆಲಸ ಮಾಡುತ್ತಿರುವುದು, ಪತ್ರಿಕಾ ಹೇಳಿಕೆಗಳನ್ನು ನೀಡಿ ತಾವೇ ಮುಂದಿನ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವುದರ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿರುವುದು ಪಕ್ಷದ ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಒಗ್ಗಟಿನಿಂದ ಕೆಲಸ ಮಾಡಬೇಕು. ಬೇರೆ ಬೇರೆ ಗುಂಪುಕಟ್ಟಿಕೊಂಡು ಹೋಗುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ.
ಜತೆಗೆ ಪ್ರತೀ ಕ್ಷೇತ್ರದ ಎಲ್ಲಾ ಆಕಾಂಕ್ಷಿಗಳು ಜತೆಯಾಗಿ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಬೇಕು. ಪ್ರತಿ ವಿಧಾನ ಸಭಾಕ್ಷೇತ್ರದಲ್ಲಿ ಪಕ್ಷದ ಅರ್ಜಿಗಳನ್ನು ಸಲ್ಲಿಸಿರುವ ಎಲ್ಲ ಆಕಾಂಕ್ಷಿಗಳು ಒಗ್ಗೂಡಿ ಜತೆಯಾಗಿ ಕ್ಷೇತ್ರದ ಪ್ರತಿಯೊಂದು ಬೂತ್‌ಗಳಿಗೆ ತೆರಳಿ ಬಿಜೆಪಿ ಸರ್ಕಾರದ ಹಗರಣಗಳು, ದುರಾಡಳಿತ, ಆರ್ಥಿಕ ಹಿಂಜರಿತ, ಬೆಲೆ ಏರಿಕೆ ಸೇರಿದಂತೆ ಮತ್ತಿತರರ ವಿಚಾರಗಳನ್ನು ತಿಳಿಹೇಳಬೇಕು ಎಂದು ತಿಳಿಸಿದ್ದಾರೆ.