Advertisement

ರಾಜ್ಯದಲ್ಲಿ ತುಘಲಕ್‌ ಸರ್ಕಾರ ನಡೆಯುತ್ತಿದೆ: ಡಿ.ಕೆ. ಶಿವಕುಮಾರ್‌ ಆರೋಪ

07:39 PM Jan 04, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ತುಘಲಕ್‌ ಸರ್ಕಾರ ನಡೆಯುತ್ತಿದ್ದು ಎಲ್ಲದಕ್ಕೂ ಲಂಚ ಕೊಡಬೇಕಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಒಂದೊಂದು ಸೇವೆಗೂ ರೇಟ್‌ ಫಿಕ್ಸ್‌ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.

Advertisement

ಆರ್ಥಿಕ ಸಂಕಷ್ಟ ಸಂದರ್ಭದಲ್ಲಿ ಸಾರ್ವಜನಿಕರ ಮೇಲೆ ರಾಜ್ಯ ಸರ್ಕಾರ ವಿವಿಧ ರೀತಿಯ ತೆರಿಗೆ ವಿಧಿಸಿರುವುದು ಖಂಡಿಸಿ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನಸಾಮಾನ್ಯರು ತತ್ತರಿಸುವಂತಾಗಿದೆ ಎಂದು ದೂರಿದರು.

ಕೊರೊನಾ ಸಮಯದಲ್ಲಿ ಸರ್ಕಾರವೇ ಲಾಕ್‌ ಡೌನ್‌, ಸೀಲ್‌ ಡೌನ್‌ ಮಾಡಿ ಈಗ ಜನ ಸಾಮಾನ್ಯರ ಮೇಲೆ ತೆರಿಗೆ ಹೊರೆ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೋನಾದಿಂದಾಗಿ ಜನ ತತ್ತರಿಸಿದ್ದಾರೆ. ವ್ಯಾಪಾರ ವಹಿವಾಟು ಇಲ್ಲ. ಆದರೂ ಪಾಲಿಕೆ ಹೆಚ್ಚಿನ ತೆರೆಗೆ ಹಾಕಿದೆ. ನಾವು ತೆರಿಗೆ ಮನ್ನಾ ಮಾಡಿ ಎಂದು ಆಗ್ರಹಿಸಿದರೆ, ಇವರು ಹೆಚ್ಚು ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಜ.7ರಂದು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್: ಹವಾಮಾನ ಇಲಾಖೆ ಮುನ್ಸೂಚನೆ

Advertisement

ಕೊರೊನಾ ಸಮಯದಲ್ಲಿ ಸೋಂಕಿತರು ಲಕ್ಷಾಂತರ ರೂ. ವೆಚ್ಚ ಮಾಡಿದ್ದಾರೆ. ಈ ಅವಧಿಯಲ್ಲಿ ಒಂದು ಕೆಲಸವೂ ಆಗಿಲ್ಲ. ಅನೇಕ ಗುತ್ತಿಗೆದಾರರು ಬಿಲ್‌ ಬಾಕಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆ ಕಟ್ಟಲು ನಕ್ಷೆ ಮಂಜೂರಾತಿ ಶುಲ್ಕ 3 ಪಟ್ಟು ಹೆಚ್ಚಿಸಲಾಗಿದ್ದು ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಚುನಾವಣೆ ಮಾಡುವ ಮನಸ್ಸಿಲ್ಲ
ಸರ್ಕಾರಕ್ಕೆ ಮಹಾನಗಗರ ಪಾಲಿಕೆ ಚುನಾವಣೆ ಮಾಡಲು, ನಾಗರೀಕರ ಸಮಸ್ಯೆ ಕೇಳುವ ಮನಸ್ಥಿತಿ ಇಲ್ಲ. ಹೀಗಾಗಿ ನಾವು ಇಂದು ನಮ್ಮ ಬೇಡಿಕೆಗಳನ್ನು ನಿಮ್ಮ ಮುಂದಿಟ್ಟು ಹೋರಾಟ ಮಾಡಲು ಬಂದಿದ್ದೇವೆ ಎಂದರು.

ಜನರ ಧ್ವನಿಯಾಗಿ, ಜನರ ಭಾವನೆ ಸರ್ಕಾರಕ್ಕೆ ತಿಳಿಸಲು ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ತೆರಿಗೆ ಮನ್ನಾ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್‌ ಸದಸ್ಯ ಹರಿಪ್ರಸಾದ್‌, ಡಿಸಿಸಿ ಅಧ್ಯಕ್ಷರಾದ ಕೃಷ್ಣಪ್ಪ, ರಾಜಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

ಪ್ರತಿಭಟನೆಯ ನಂತರ ರಾಮಲಿಂಗಾರೆಡ್ಡಿ ಸೇರಿದಂತೆ ಕಾರ್ಯಕರ್ತರು ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಈ ವರ್ಷವನ್ನು ಕಾಂಗ್ರೆಸ್‌ ಪಕ್ಷ ಹೋರಾಟ ಹಾಗೂ ಸಂಘಟನೆ ವರ್ಷವಾಗಿ ಘೋಷಿಸಿದೆ. ರಾಜ್ಯದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟು ಹೋರಾಟ ಮಾಡಲಿದ್ದೇವೆ. 150 ಕ್ಷೇತ್ರಗಳಲ್ಲಿ ಹೋರಾಟ ನಡೆಯಲಿದೆ.
– ಡಿ.ಕೆ.ಶಿವಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next