ಹುಬ್ಬಳ್ಳಿ: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ರವಿವಾರ ಅಂತಿಮಗೊಳಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ರಾಮಲಿಂಗ ರೆಡ್ಡಿ ನೈತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಅವರ ವರದಿ ಮೇಲೆ ನಾಳೆ ಫೈನಲ್ ಮಾಡುತ್ತೇವೆ. ಈಗಾಗಲೇ ಬಹಳಷ್ಟು ಜನ ಆರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಡ್ರಗ್ಸ್ ಪ್ರಕರಣದಲ್ಲಿ ಮಂಗಳೂರು ಅಧಿಕಾರಿಗಳ ಎತ್ತಂಗಡಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣದಲ್ಲಿ ಯಾವ ಮಟ್ಟಿಗೆ ಸರ್ಕಾರಕ್ಕೆ ಒತ್ತಡ ಇದೆ ಅಂತ ಇದರಿಂದಲೇ ಗೊತ್ತಾಗುತ್ತದೆ. ಅಧಿಕಾರಿಗಳ ವರ್ಗಾವಣೆ ಬಗ್ಗೆ ನಾನೇನು ಮಾತನಾಡೋದಿಲ್ಲ ಎಂದರು.
ಇದನ್ನೂ ಓದಿ:ಮಿನಿಫೈಟ್: ಶಿರಾ ಬಿಜೆಪಿ ಅಭ್ಯರ್ಥಿ ಬಹುತೇಕ ಅಂತಿಮ, ರಾಜೇಶ್ ಗೌಡ ಇಂದು ಬಿಜೆಪಿ ಸೇರ್ಪಡೆ
ಸರ್ಕಾರ ಇರುತ್ತೋ ಇಲ್ಲವೋ ಎನ್ನುವ ಸಚಿವ ಆನಂದ್ ಸಿಂಗ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಯಿಸಿದ ಡಿಕೆಶಿ, ಸರ್ಕಾರದ ಆಂತರಿಕ ಹುಳುಕುಗಳು ಈಗ ಹೊರಗೆ ಬರುತ್ತಿವೆ. ಕಾದು ನೋಡಿ ಎಂದು ಬಿಜೆಪಿ ಬಗ್ಗೆ ವ್ಯಂಗ್ಯವಾಡಿದರು.
ಉತ್ತರ ಪ್ರದೇಶದ ಹತ್ರಾಸ್ ರೇಪ್ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಯೋಗಿ ಸರ್ಕಾರ ದೇಶಕ್ಕೆ ರೋಗ ತಂದಿದೆ. ಅತ್ಯಾಚಾರವಾಗಿದೆ ಎನ್ನುವುದು ಇಡೀ ದೇಶಕ್ಕೆ ಗೊತ್ತು. ಆದರೂ ಉತ್ತರ ಪ್ರದೇಶ ಸರ್ಕಾರ ಎಫ್ ಆರ್ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದೆ ಎಂದರು.